ಸಿಯಾಟಲ್‌ನಲ್ಲಿರುವ ಐತಿಹಾಸಿಕ 605 ಅಡಿ ಎತ್ತರದ ಬಾಹ್ಯಾಕಾಶ ಕೇಂದ್ರ ಕಟ್ಟಡದ ಗೋಪುರದ ಮೇಲೆ ಭಾರತದ ತ್ರಿವರ್ಣ ಧ್ವಜ
ಕೃಪೆ: X / @airnewsalerts
ನ್ಯೂಯಾರ್ಕ್/ಸಿಯಾಟಲ್: ಸಿಯಾಟಲ್‌ನಲ್ಲಿರುವ ಐತಿಹಾಸಿಕ 605 ಅಡಿ ಎತ್ತರದ ಬಾಹ್ಯಾಕಾಶ ಕೇಂದ್ರ ಕಟ್ಟಡದ ಗೋಪುರದ ಮೇಲೆ ಭಾರತದ ತ್ರಿವರ್ಣ ಧ್ವಜ ಹಾರಿಸಲಾಗಿದೆ. ಅಮೆರಿಕದ ಪ್ರಖ್ಯಾತ ತಾಣವಾಗಿರುವ ಇಲ್ಲಿ, ವಿದೇಶವೊಂದರ ಧ್ವಜವನ್ನು ಹಾರಿಸಿರುವುದು ಇದೇ ಮೊದಲು.
ಭಾರತದ 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಗಿದೆ. ಸಿಯಾಟಲ್‌ನಲ್ಲಿ ಭಾರತದ ಕಾನ್ಸುಲ್ ಜನರಲ್ ಆಗಿರುವ ಪ್ರಕಾಶ್ ಗುಪ್ತಾ, ಸಿಯಾಟಲ್ ಮೇಯರ್ ಬ್ರೂಸ್ ಹರ್ರೆಲ್ ಮತ್ತು ಇತರ ಗಣ್ಯರು ಈ ಐತಿಹಾಸಿಕ ಸಮಾಂಭದಲ್ಲಿ ಹಾಜರಿದ್ದರು.
ಸಮಾರಂಭದ ವಿಡಿಯೊವನ್ನು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್/ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಗುಪ್ತಾ, 'ಇದಕ್ಕಿಂತಲೂ ದೊಡ್ಡ ಗೌರವ ಮತ್ತೊಂದಿಲ್ಲ! ಸಿಯಾಟಲ್ ಸ್ಕೈಲೈನ್ ಸ್ಪೇಸ್ ನೀಡಲ್‌ನ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದ್ದೇವೆ' ಎಂದು ಬರೆದುಕೊಂಡಿದ್ದಾರೆ.
'ಇದೊಂದು ಐತಿಹಾಸಿಕ ಕ್ಷಣ' ಎಂದಿರುವ ಅವರು, ಸಿಯಾಟಲ್ ನಗರವನ್ನು ತಂತ್ರಜ್ಞಾನ ಕೇಂದ್ರವನ್ನಾಗಿಸುವ ನಿಟ್ಟಿನಲ್ಲಿ ಭಾರತ ಮೂಲದ ಅಮೆರಿಕನ್ನರ ಕೊಡುಗೆಗಳನ್ನು ಈ ಕಾರ್ಯಕ್ರಮವು ಒತ್ತಿ ಹೇಳುತ್ತದೆ ಎಂದೂ ಪ್ರತಿಪಾದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.