ADVERTISEMENT

ಇರಾನ್‌ ಹಿಡಿತದಲ್ಲಿದೆ ಸಮುದ್ರ ಮಾರ್ಗ ‘ಹೊರ್ಮುಜ್ ಖಾರಿ’: ತೈಲ ಸಂಕಷ್ಟಕ್ಕೆ ದಾರಿ

ಏಜೆನ್ಸೀಸ್
Published 9 ಜನವರಿ 2020, 3:58 IST
Last Updated 9 ಜನವರಿ 2020, 3:58 IST
2019ರ ಜೂನ್ 13ರಂದು ಒಮಾನ್ ಕೊಲ್ಲಿಯಲ್ಲಿ ಕ್ಷಿಪಣಿ ದಾಳಿಗೆ ತುತ್ತಾಗಿ ಹೊತ್ತಿ ಉರಿಯುತ್ತಿರುವ ಜಪಾನ್‌ನ ತೈಲ ಟ್ಯಾಂಕರ್ ಹಡಗು –ಎಎಫ್‌ಪಿ ಚಿತ್ರ
2019ರ ಜೂನ್ 13ರಂದು ಒಮಾನ್ ಕೊಲ್ಲಿಯಲ್ಲಿ ಕ್ಷಿಪಣಿ ದಾಳಿಗೆ ತುತ್ತಾಗಿ ಹೊತ್ತಿ ಉರಿಯುತ್ತಿರುವ ಜಪಾನ್‌ನ ತೈಲ ಟ್ಯಾಂಕರ್ ಹಡಗು –ಎಎಫ್‌ಪಿ ಚಿತ್ರ   
""

ಲಂಡನ್ :ಇರಾನ್ ಮತ್ತು ಅಮೆರಿಕದ ನಡುವಣ ಸಶಸ್ತ್ರ ಸಂಘರ್ಷವು ಜಾಗತಿಕ ತೈಲ ಮಾರುಕಟ್ಟೆಯನ್ನು ನೇರವಾಗಿ ಪ್ರಭಾವಿಸುವ ಅಪಾಯವಿದೆ. ಈಗಿನ ಸಂಘರ್ಷವು ಮತ್ತಷ್ಟು ಬಿಗಡಾಯಿಸಿದರೆ, ಕೊಲ್ಲಿ ರಾಷ್ಟ್ರಗಳಿಂದ ಜಗತ್ತಿನ ಹಲವೆಡೆಗೆ ಕಚ್ಚಾ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲ (ಎಲ್‌ಎನ್‌ಜಿ)ಪೂರೈಕೆ ಸ್ಥಗಿತವಾಗುವ ಅಪಾಯವಿದೆ.

ಜಗತ್ತಿನಲ್ಲಿ ವಿವಿಧೆಡೆಗೆ ಪೂರೈಕೆಯಾಗುವ ಕಚ್ಚಾತೈಲದಲ್ಲಿ ಶೇ 20ರಷ್ಟು ಈ ಖಾರಿಯ ಮೂಲಕವೇ ಸರಬರಾಜು ಆಗುತ್ತದೆ. ಜಗತ್ತಿನಲ್ಲಿ ಪ್ರತಿದಿನ ಸಾಗಾಟ ಮಾಡಲಾಗುವ ಎಲ್‌ಎನ್‌ಜಿಯಲ್ಲಿ ಶೇ 40ರಷ್ಟು ಈ ಖಾರಿಯ ಮೂಲಕವೇ ಸರಬರಾಜು ಆಗುತ್ತದೆ.ಪರ್ಷಿಯನ್ ಕೊಲ್ಲಿ ಮತ್ತು ಒಮಾನ್ ಕೊಲ್ಲಿ ನಡುವೆ ಸಂಪರ್ಕ ಕಲ್ಪಿಸುವ ಹೊರ್ಮುಜ್‌ ಖಾರಿಯು ಇರಾನ್‌ ಹಿಡಿತದಲ್ಲಿದೆ.ಈ ಖಾರಿಯಲ್ಲಿ ಹಡಗುಗಳ ಸಂಚಾರವನ್ನು ಸ್ಥಗಿತಗೊಳಿಸುವುದಾಗಿ ಇರಾನ್ ಬೆದರಿಕೆ ಒಡ್ಡಿದೆ.

ಒಂದೊಮ್ಮೆ ಇರಾನ್ ಈ ಖಾರಿಯನ್ನು ಬಂದ್ ಮಾಡಿದರೆ, ಕೊಲ್ಲಿ ರಾಷ್ಟ್ರಗಳ ತೈಲ ಪೂರೈಕೆ ಮಾರ್ಗ ಮುಚ್ಚಿದಂತಾಗುತ್ತದೆ. ಇದು ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಕೊರತೆಗೆ ಕಾರಣವಾಗುತ್ತದೆ. ಇದರಿಂದ ಕಚ್ಚಾತೈಲದ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುವ ಅಪಾಯವಿದೆ. ಇದರಿಂದ ಜಗತ್ತಿನ ಹಲವು ರಾಷ್ಟ್ರಗಳ ಆರ್ಥಿಕತೆ ಕುಸಿದು ಬೀಳಲಿದೆ ಎಂದು ಸುದ್ದಿ ಸಂಸ್ಥೆ ಅಲ್‌ ಜಝೀರಾ ಹೇಳಿದೆ.

ADVERTISEMENT

ಭಾರತಕ್ಕೆ ತೈಲ ಬಿಸಿ

ಭಾರತವು ಆಮದು ಮಾಡುಕೊಳ್ಳುವ ಕಚ್ಚಾತೈಲದಲ್ಲಿ ಸಿಂಹಪಾಲನ್ನು ಸೌದಿ ಅರೇಬಿಯಾ ಪೂರೈಸುತ್ತದೆ. ಇದರಲ್ಲಿ ಬಹುಪಾಲು ತೈಲ ಹೊರ್ಮುಜ್ ಖಾರಿಯ ಮೂಲಕವೇ ಪೂರೈಕೆಯಾಗುತ್ತದೆ. ಈಖಾರಿಯು ಬಂದ್ ಆದರೆ, ಭಾರತಕ್ಕೆ ಸೌದಿ ಅರೇಬಿಯಾದ ಕಚ್ಚಾತೈಲ ಬಹುತೇಕ ಸ್ಥಗಿತವಾಗುತ್ತದೆ. ಇದರಿಂದ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆ ವಿಪರೀತ ಪ್ರಮಾಣದಲ್ಲಿ ಏರಿಕೆಯಾಗುವ ಅಪಾಯವಿದೆ

ಅಮೆರಿಕ ಇರಾಕ್ ತೊರೆದರೆ ತೊಂದರೆ

ಇರಾನ್ ಮತ್ತು ಅಮೆರಿಕದ ನಡುವಣ ಶಸ್ತ್ರಾಸ್ತ್ರ ಸಂಘರ್ಷಕ್ಕೆ ಇರಾಕ್‌ ವೇದಿಕೆಯಾಗಿದೆ. ಇರಾನ್‌ನ ಸೇನಾಧಿಪತಿಯ ಮೇಲೆ ಅಮೆರಿಕದ ದಾಳಿ ನಡೆಸಿದ್ದು ಇರಾಕ್‌ನ ನೆಲದಲ್ಲಿ. ಈಗ ಇರಾಕ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಆದರೆ ಈ ಯಾವ ದಾಳಿಗಳೂ ಇರಾಕ್‌ನ ಕಚ್ಚಾತೈಲ ಉತ್ಪಾದನೆ ಮೇಲೆ ಪರಿಣಾಮ ಬೀರಿಲ್ಲ.

ಆದರೆ,ಕೊಲ್ಲಿಯ ಯಾವ ರಾಷ್ಟ್ರಗಳಲ್ಲೂ ಅಮೆರಿಕವು ಇರಲು ಬಿಡುವುದಿಲ್ಲ ಎಂದು ಇರಾನ್‌ ಪ್ರತಿಜ್ಞೆ ಮಾಡಿದೆ. ಇರಾಕ್‌ನ ಅರೆಸೇನಾ ಪಡೆಯೂ ಇರಾನ್‌ಗೆ ಬೆಂಬಲ ಸೂಚಿಸಿದೆ.

ಇರಾಕ್‌ನ ಬಹುತೇಕ ತೈಲಬಾವಿಗಳು ಮತ್ತು ತೈಲ ಸಂಸ್ಕರಣ ಘಟಕಗಳ ಭದ್ರತೆಯ ಹೊಣೆಯನ್ನು ಅಮೆರಿಕದ ಸೇನೆ ಹೊತ್ತಿದೆ. ಒಂದೊಮ್ಮೆ ಶಸ್ತ್ರಾಸ್ತ್ರ ಸಂಘರ್ಷವು ಬಿಗಡಾಯಿಸಿ ಅಮೆರಿಕವು ಇರಾಕ್‌ ತೊರೆದರೆ, ಈ ಎಲ್ಲಾ ತೈಲಬಾವಿಗಳು ಅಸುರಕ್ಷಿತ ಪ್ರದೇಶಗಳಾಗುತ್ತವೆ. ಇಸ್ಲಾಮಿಕ್ ಸ್ಟೇಟ್ ಉಗ್ರರು ಮತ್ತು ಬಂಡುಕೋರರು ಈ ತೈಲಬಾವಿಗಳನ್ನು ವಶಕ್ಕೆ ಪಡೆದುಕೊಳ್ಳುವ ಅಪಾಯವಿದೆ. ಆಗ ಅಲ್ಲಿ ಕಚ್ಚಾತೈಲವನ್ನು ತೆಗೆಯುವುದು ಸ್ಥಗಿತವಾಗುತ್ತದೆ. ಇದೂ ಸಹ ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

* ಕಚ್ಚಾತೈಲ ಉತ್ಪಾದಕ ರಾಷ್ಟ್ರಗಳಾದ ಸೌದಿ ಅರೇಬಿಯಾ, ಇರಾಕ್, ಒಮನ್, ಕುವೈತ್, ಯುಎಇ ಮತ್ತು ಇರಾನ್‌ನ ಬಹುತೇಕ ಬಂದರುಗಳು ಪರ್ಷಿಯನ್ ಕೊಲ್ಲಿಯಲ್ಲಿವೆ

* ಈ ಎಲ್ಲಾ ರಾಷ್ಟ್ರಗಳ ಕಚ್ಚಾತೈಲ ಸಾಗಣೆ ಹಡಗುಗಳು ಹೊರ್ಮುಜ್ ಖಾರಿಯ ಮೂಲಕವೇ ಅರಬ್ಬೀ ಸಮುದ್ರವನ್ನು ಪ್ರವೇಶಿಸಬೇಕಿದೆ

* 39 ಕಿ.ಮೀ. ಹೊರ್ಮುಜ್ ಕಾರಿಯ ಗರಿಷ್ಠ ಅಗಲ

* 3 ಕಿ.ಮೀ. ಹಡಗು ಮಾರ್ಗದ ಅಗಲ

* 2.1 ಕೋಟಿ ಬ್ಯಾರೆಲ್‌ ಪ್ರತಿದಿನ ಈ ಖಾರಿಯ ಮೂಲಕ ಸರಬರಾಜು ಆಗುವ ಕಚ್ಚಾ ತೈಲ

2019ರ ಜೂನ್‌ನಲ್ಲಿ ಇರಾನ್‌ ಮೇಲೆ ಅಮೆರಿಕವು ಆರ್ಥಿಕ ನಿರ್ಬಂಧವನ್ನು ಮತ್ತಷ್ಟು ಬಿಗಿಗೊಳಿಸಿತ್ತು. ಅದೇ ಸಂದರ್ಭದಲ್ಲಿ ಹೊರ್ಮುಜ್ ಖಾರಿಯನ್ನು ಹಾದು ಬಂದಿದ್ದ ಆರು ತೈಲ ಟ್ಯಾಂಕ್‌ ಹಡಗುಗಳ ಮೇಲೆ ಕ್ಷಿಪಣಿ ದಾಳಿ ನಡೆದಿತ್ತು. ಈ ದಾಳಿಗಳನ್ನು ಇರಾನ್ ನಡೆಸಿವೆ ಎಂಬ ಆರೋಪ ಕೇಳಿಬಂದಿತ್ತು. ಇದನ್ನು ಇರಾನ್ ನಿರಾಕರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.