ADVERTISEMENT

ಇರಾನ್‌: ವಸ್ತ್ರಸಂಹಿತೆ ವಿರೋಧಿ ಹೋರಾಟದ ಮೊದಲ ಬಂಧಿತನಿಗೆ ಗಲ್ಲು

ಏಜೆನ್ಸೀಸ್
Published 8 ಡಿಸೆಂಬರ್ 2022, 11:11 IST
Last Updated 8 ಡಿಸೆಂಬರ್ 2022, 11:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದುಬೈ: ಇರಾನ್‌ನಲ್ಲಿ ನಡೆಯುತ್ತಿರುವ ವಸ್ತ್ರಸಂಹಿತಿ ವಿರೋಧಿ ಹೋರಾಟದ ವೇಳೆ ಅಪರಾಧ ಕೃತ್ಯ ಎಸಗಿದ್ದ ಆರೋಪದ ಕಾರಣ ಬಂಧಿತನಾಗಿದ್ದ ವ್ಯಕ್ತಿಯನ್ನು ಗಲ್ಲಿಗೇರಿಸಲಾಗಿದೆ ಎಂದು ಅಲ್ಲಿಯ ಆಡಳಿತ ಗುರುವಾರ ತಿಳಿಸಿದೆ.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ಬಂಧನಕ್ಕೊಳಗಾದ ಇತರ ಕೆಲವರಿಗೂ ಮರಣ ದಂಡನೆ ವಿಧಿಸಲಾಗಿದೆ. ಅವರನ್ನೂ ಸದ್ಯದಲ್ಲೇ ಗಲ್ಲಿಗೇರಿಸಲಾಗುವುದು ಎನ್ನಲಾಗಿದೆ.

ಗಲ್ಲಿಗೇರಿಸಲಾದ ವ್ಯಕ್ತಿಯನ್ನು ಮೊಹ್ಸೆನ್‌ ಶೇಕಾರಿ ಎಂದು ಗುರುತಿಸಲಾಗಿದೆ. ‘ಮೊಹರೆಬೆಹ್‌ (ದೇವರ ವಿರುದ್ಧ ಯುದ್ಧ ಘೋಷಣೆ) ಆರೋಪದ ಮೇಲೆ ಅವರನ್ನು ಸೆಪ್ಟೆಂಬರ್‌ 25ರಂದು ಬಂಧಿಸಲಾಗಿತ್ತು. ನವೆಂಬರ್‌ 20ರಂದು ಅವರ ಮೇಲಿನ ಆರೋಪ ಸಾಬೀತಾಗಿತ್ತು. ಇರಾನ್‌ನ ಟೆಹರಾನ್‌ ಕ್ರಾಂತಿಕಾರಿ ಕೋರ್ಟ್‌ ಅವರಿಗೆ ಗಲ್ಲು ಶಿಕ್ಷೆ ವಿಧಿಸಿದೆ’ ಎಂದು ಇರಾನ್‌ನ ಮಿಝಾನ್‌ ಸುದ್ದಿ ಸಂಸ್ಥೆ ವರದಿ ಮಾಡಿದೆ.

ADVERTISEMENT

1979ರಲ್ಲಿ ನಡೆದಿದ್ದ ಇಸ್ಲಾಮಿಕ್‌ ಕ್ರಾಂತಿ ನಡೆದಾಗಿನಿಂದಲೂ ‘ಮೊಹರೆಬೆಹ್‌’ ಅಪರಾಧದ ಆಧಾರದ ಮೇಲೆ ಮರಣ ದಂಡನೆ ವಿಧಿಸುವ ಪರಿಪಾಠವನ್ನು ಇರಾನ್‌ ಪಾಲಿಸುತ್ತಿದೆ ಎಂದು ಮಿಝಾನ್‌ ವರದಿಯಲ್ಲಿ ಹೇಳಲಾಗಿದೆ.

22 ವರ್ಷ ವಯಸ್ಸಿನ ಮಹ್ಸಾ ಅಮೀನಿ ಅವರು ಇಸ್ಲಾಂ ಧರ್ಮದ ವಸ್ತ್ರಸಂಹಿತೆ ಪಾಲಿಸಿರಲಿಲ್ಲ ಎಂಬ ಕಾರಣಕ್ಕೆ ಅಲ್ಲಿಯ ನೈತಿಕ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡಿದ್ದರು. ವಶದಲ್ಲಿದ್ದಾಗಲೇ ಅವರು ಮೃತಪಟ್ಟಿದ್ದರು. ಈ ಘಟನೆ ಹಿನ್ನೆಲೆಯಲ್ಲಿ ವಸ್ತ್ರಸಂಹಿತೆ ವಿರೋಧಿಸಿ ಇರಾನ್‌ನಲ್ಲಿ ಸೆಪ್ಟೆಂಬರ್ 16ರಿಂದ ಹೋರಾಟ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.