
ದುಬೈ: ಇರಾನ್ ಮೇಲೆ ಅಮೆರಿಕವು ಮಿಲಿಟರಿ ದಾಳಿ ನಡೆಸಿದರೆ ಅದಕ್ಕೆ ತಕ್ಕ ತಿರುಗೇಟು ನೀಡಲಾಗುತ್ತದೆ ಎನ್ನುವ ಸ್ಪಷ್ಟ ಸಂದೇಶವನ್ನು ಸಾರುವಂಥ ಭಿತ್ತಿಚಿತ್ರವನ್ನು ಸೆಂಟ್ರಲ್ ಟೆಹರಾನ್ ಸ್ಕ್ವೇರ್‌ನಲ್ಲಿ ಭಾನುವಾರ ಇರಾನ್ ಆಡಳಿತವು ಅನಾವರಣಗೊಳಿಸಿದೆ.
ಭಿತ್ತಿಚಿತ್ರದಲ್ಲಿ ಯುದ್ಧದಿಂದ ಹಾನಿಗೊಳಗಾದ ವಿಮಾನಗಳನ್ನು ಚಿತ್ರಿಸುವುದರ ಜತೆಗೆ ‘ನೀವು ಗಾಳಿಯನ್ನು ಬಿತ್ತಿದರೆ, ಸುಂಟರ ಗಾಳಿಯ ಫಸಲನ್ನು ಪಡೆಯಬೇಕಾಗುತ್ತದೆ’ ಎಂಬ ಎಚ್ಚರಿಕೆಯ ಸಂದೇಶವನ್ನೂ ಬರೆಯಲಾಗಿದೆ.
ಅಮೆರಿಕದ ಯುದ್ದ ವಿಮಾನವಾಹಕ ನೌಕೆ ಯುಎಸ್‌ಎಸ್ ಅಬ್ರಹಾಂ ಲಿಂಕನ್ ನೇತೃತ್ವದಲ್ಲಿ ಯುದ್ಧ ನೌಕೆಗಳ ತಂಡವು ಇರಾನ್‌ನತ್ತ ಪ್ರಯಾಣಿಸುತ್ತಿರುವಂತೆಯೇ ಇರಾನ್ ಈ ಭಿತ್ತಿಚಿತ್ರದ ಮೂಲಕ ಎಚ್ಚರಿಕೆ ನೀಡಿದೆ.
‘ಇರಾನ್ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಪರಿಸ್ಥಿತಿ ಬರಬಹುದು ಎಂಬ ಕಾರಣಕ್ಕೆ ಯುದ್ಧನೌಕೆಗಳನ್ನು ಕಳುಹಿಸಲಾಗಿದೆ. ಬಹುಶಃ ಆ ಪರಿಸ್ಥಿತಿ ಬರದೇ ಇರಬಹುದು’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.