ಟೆಹಾರನ್: ಇರಾನ್ ತನ್ನ ಪರಮಾಣು ಯೋಜನೆಗಳಿಗೆ ಬೇಕಾದ ಯುರೇನಿಯಂ ಉತ್ಪಾದಿಸುವ ಅತಿದೊಡ್ಡ ಕೇಂದ್ರ, ನಟಾನ್ಜ್‌ನಲ್ಲಿರುವ ಪರಮಾಣು ಘಟಕದ ಮೇಲೂ ದಾಳಿ ನಡೆದಿದೆ. ಭೂಮಿಯಡಿಯಲ್ಲಿರುವ ಈ ಘಟಕಕ್ಕೆ ಭಾರಿ ಹಾನಿಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ನಟಾನ್ಜ್ ಮೇಲೆ ದಾಳಿ ನಡೆದಿರುವುದನ್ನು ಅಂತರರಾಷ್ಟ್ರೀಯ ಅಣು ಶಕ್ತಿ ಸಂಸ್ಥೆ (ಐಎಇಎ) ದೃಢಪಡಿಸಿದೆ. ‘ವಿಕಿರಣ ಸೋರಿಕೆಯಾಗಿದೆಯೇ ಎಂಬುದನ್ನು ಪರಿಶೀಲಿಸಲು ಸಂಸ್ಥೆಯು ಇರಾನ್‌ನ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ. ಇರಾನ್‌ನಲ್ಲಿರುವ ನಮ್ಮ ಅಧಿಕಾರಿಗಳ ಜತೆಯೂ ಮಾತುಕತೆ ನಡೆಸಿದ್ದೇವೆ’ ಎಂದು ಐಎಇಎ ಮುಖ್ಯಸ್ಥ ರಫೇಲ್ ಗ್ರಾಸಿ ಹೇಳಿದ್ದಾರೆ.
ಟೆಹರಾನ್‌ನ ವಸತಿ ಸಮುಚ್ಚಯಗಳಿಗೂ ದಾಳಿಯಿಂದ ಹಾನಿಯಾಗಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವು ನಾಗರಿಕರು ಮೃತಪಟ್ಟಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ ಮಾಧ್ಯಮ ತಿಳಿಸಿದೆ. ಆರು ಪರಮಾಣು ವಿಜ್ಞಾನಿಗಳು ಮೃತಪಟ್ಟಿರುವುದಾಗಿ ತಸ್ನಿಮ್ ಸುದ್ದಿ ಸಂಸ್ಥೆ ತಿಳಿಸಿದೆ.
ಕಾರ್ಯಾಚರಣೆಗೆ 200 ಯುದ್ಧ ವಿಮಾನಗಳನ್ನು ಬಳಸಲಾಗಿದ್ದು, 100 ತಾಣಗಳನ್ನು ನಿಖರವಾಗಿ ಧ್ವಂಸಗೊಳಿಸಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ. ಸೇನಾ ನೆಲೆಗಳ ಮೇಲಿನ ದಾಳಿಯಲ್ಲಿ ಹಲವು ರೇಡಾರ್ ವ್ಯವಸ್ಥೆ ಮತ್ತು ನೆಲದಿಂದ ಆಗಸಕ್ಕೆ ಕ್ಷಿಪಣಿ ಹಾರಿಸುವ ಲಾಂಚರ್‌ಗಳನ್ನು ನಾಶಪಡಿಸಲಾಗಿದೆ ಎಂದಿದೆ.
ದಾಳಿಯ ಬೆನ್ನಲ್ಲೇ ಟೆಹರಾನ್‌ನ ಇಮಾಮ್ ಖೊಮೇನಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು. ಇರಾಕ್ ಮತ್ತು ಜೋರ್ಡನ್ ಕೂಡ ತಮ್ಮ ವಾಯುಪ್ರದೇಶವನ್ನು ಮುಚ್ಚಿ ಎಲ್ಲ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಿದವು.
ಎಮಿರೇಟ್ಸ್, ಕತಾರ್ ಏರ್‌ವೇಸ್, ಏರ್ ಫ್ರಾನ್ಸ್ ಮತ್ತು ಲುಫ್ತಾನ್ಸಾ ಸೇರಿದಂತೆ ಹಲವಾರು ವಿಮಾನಯಾನ ಸಂಸ್ಥೆಗಳು ಈ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ತಮ್ಮ ವಿಮಾನಗಳನ್ನು ರದ್ದುಗೊಳಿಸಿದವು.
ಇಸ್ರೇಲ್ ತನ್ನ ವಾಯುಪ್ರದೇಶವನ್ನು ಮುಚ್ಚಿದ್ದು, ತುರ್ತು ಪರಿಸ್ಥಿತಿ ಘೋಷಿಸಿದೆ. ‘ಇರಾನ್‌ನ ನಿರೀಕ್ಷಿತ ಪ್ರತೀಕಾರದ ದಾಳಿ ಎದುರಿಸಲು ನಾವು ಸಜ್ಜಾಗಿದ್ದೇವೆ’ ಎಂದು ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.