ADVERTISEMENT

ಇಸ್ರೇಲಿ ದೂರದರ್ಶನ ಸರಣಿ ‘ಫೌಡಾ’ದ ಸಿಬ್ಬಂದಿ ಗಾಜಾದಲ್ಲಿ ಹತ್ಯೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ನವೆಂಬರ್ 2023, 10:54 IST
Last Updated 12 ನವೆಂಬರ್ 2023, 10:54 IST
<div class="paragraphs"><p>ಎಎನ್‌ಐ ಟ್ವಿಟ್ಟರ್ ಚಿತ್ರ</p></div>

ಎಎನ್‌ಐ ಟ್ವಿಟ್ಟರ್ ಚಿತ್ರ

   Venugopala K.

ಟೆಲ್ ಅವೀವ್ (ಇಸ್ರೇಲ್): ಜನಪ್ರಿಯ ಇಸ್ರೇಲಿ ದೂರದರ್ಶನ ಸರಣಿ ‘ಫೌಡಾ’ದ ಸಿಬ್ಬಂದಿಯೊಬ್ಬರು ಗಾಜಾದಲ್ಲಿನ ಕಾರ್ಯಾಚರಣೆಯ ಸಂದರ್ಭ ಹತ್ಯೆಗೀಡಾಗಿದ್ದಾರೆ ಎಂದು ವರದಿಯಾಗಿದೆ.

ಇಸ್ರೇಲ್‌ನ 551ನೇ ಬ್ರಿಗೇಡ್‌ನ 697ನೇ ಬೆಟಾಲಿಯನ್‌ನಲ್ಲಿ ರಿಸರ್ವ್ ಸದಸ್ಯರಾಗಿದ್ದ ಮತನ್ ಮೀರ್ ಅವರ ಹೆಸರನ್ನು ಗಾಜಾದಲ್ಲಿ ಕರ್ತವ್ಯದಲ್ಲಿದ್ದಾಗ ಮಡಿದ ಸೈನಿಕರ ಪಟ್ಟಿಯಲ್ಲಿ ಘೋಷಿಸಲಾಗಿದೆ ಎಂದು ಜೆರುಸಲೆಮ್ ಪೋಸ್ಟ್ ವರದಿ ಮಾಡಿದೆ ಎಂದು ಎಎನ್‌ಐ ಟ್ವೀಟಿಸಿದೆ.

ADVERTISEMENT

'ಫೌಡಾ'ದ ಸಾಮಾಜಿಕ ಮಾಧ್ಯಮ ತಂಡವು ಮತನ್ ಮೀರ್ ಅವರ ನಿಧನವನ್ನು ಎಕ್ಸ್‌ ಪೋಸ್ಟ್ ಮೂಲಕ ದೃಢಪಡಿಸಿದೆ ಎಂದು ಎಎನ್‌ಐ ಟ್ವೀಟ್‌ನಲ್ಲಿ ತಿಳಿಸಲಾಗಿದೆ.

‘ನಮ್ಮ ಫೌಡಾ ಕುಟುಂಬದ ಸದಸ್ಯರಲ್ಲಿ ಒಬ್ಬರಾದ ಮತನ್ ಮೀರ್ ಅವರು ಗಾಜಾದಲ್ಲಿ ಕಾರ್ಯಾಚರಣೆಯಲ್ಲಿದ್ದಾಗ ಕೊಲ್ಲಲ್ಪಟ್ಟಿದ್ದಾರೆ ಎಂಬ ವಿಷಯವನ್ನು ತಿಳಿಸಲು ಬಹಳ ದುಃಖವಾಗುತ್ತಿದೆ. ಮತನ್ ಅವರು ಫೌಡಾ ಟಿ.ವಿ ಸರಣಿಯ ಅವಿಭಾಜ್ಯ ಸದಸ್ಯರಾಗಿದ್ದರು. ಈ ದುರಂತದಿಂದ ನಮ್ಮ ತಂಡ ಎದೆಗುಂದಿದೆ. ನಾವು ಮತನ್ ಅವರ ಕುಟುಂಬಕ್ಕೆ ನಮ್ಮ ಸಂತಾಪವನ್ನು ವ್ಯಕ್ತಪಡಿಸುತ್ತೇವೆ’ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.

ಫೌಡಾದ ಹೊರತಾಗಿ, ದಿ ಕಾಪ್ಸ್ ಸರಣಿ ಸೇರಿದಂತೆ ಇತರ ಕಾರ್ಯಕ್ರಮಗಳ ನಿರ್ಮಾಣದಲ್ಲಿಯೂ ಸಹ ಮೀರ್ ತೊಡಗಿಸಿಕೊಂಡಿದ್ದರು. ಫೌಡಾದ ಸಂಸ್ಥಾಪಕ ಅವಿ ಅಸ್ಸಾಚರೋಫ್ ಅವರು ಸಹ ತಮ್ಮ ಸಂತಾಪವನ್ನು ಹಂಚಿಕೊಂಡಿದ್ದಾರೆ.

ಹಮಾಸ್ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಆಕ್ರಮಣವನ್ನು ನಡೆಸಿತ್ತು. ಇದರ ನಂತರ, ಇಸ್ರೇಲ್ ಸೇನೆ ಹಮಾಸ್ ಉಗ್ರರ ಮೇಲೆ ಪ್ರತಿದಾಳಿ ಆರಂಭಿಸಿದ್ದು, ಭಯೋತ್ಪಾದಕ ಗುಂಪನ್ನು ನಾಶಮಾಡುವ ಪ್ರತಿಜ್ಞೆ ಮಾಡಿದೆ.

ಈ ಮಧ್ಯೆ, ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು, ಹಮಾಸ್ ಭಯೋತ್ಪಾದನೆಯ ಅವಿಭಾಜ್ಯ ಅಂಗ, ಮಧ್ಯಪ್ರಾಚ್ಯ ಮತ್ತು ಅರಬ್ ಜಗತ್ತಿಗೂ ಅಪಾಯವನ್ನುಂಟುಮಾಡುತ್ತದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.