ADVERTISEMENT

ಭಾರತೀಯರ ಕ್ಷಮೆ ಕೋರಿದ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಪುತ್ರ ಯೈರ್

ಏಜೆನ್ಸೀಸ್
Published 28 ಜುಲೈ 2020, 10:09 IST
Last Updated 28 ಜುಲೈ 2020, 10:09 IST
ಯೈರ್ ನೆತನ್ಯಾಹು
ಯೈರ್ ನೆತನ್ಯಾಹು   

ಜೆರುಸಲೆಂ: ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರ ಪುತ್ರ ಯೈರ್ ನೆತನ್ಯಾಹು ಆಕ್ಷೇಪಾರ್ಹ ಪೋಸ್ಟ್‌ ಪ್ರಕಟಿಸಿದಕ್ಕೆ ಭಾರತೀಯರ ಕ್ಷಮೆ ಕೋರಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಬೆಂಜಮಿನ್‌ ನೆತನ್ಯಾಹು ಅವರ ಹಿರಿಯ ಪುತ್ರ ಯೈರ್ ನೆತನ್ಯಾಹು ಭಾನುವಾರ ಪೋಸ್ಟ್‌ವೊಂದನ್ನು ಪ್ರಕಟಿಸಿದ್ದರು. ಅದು ಭಾರತೀಯ ಹಿಂದೂಗಳ ಭಾವನೆಗೆ ಧಕ್ಕೆ ಉಂಟುಮಾಡಲಿದೆ ಎಂದು ಕೆಲವರು ಕಮೆಂಟ್‌ಗಳನ್ನು ಹಾಕಿದ ಬಳಿಕ ಅವರು ಅದನ್ನು ತೆಗೆದು ಹಾಕಿ ಭಾರತೀಯರ ಕ್ಷಮೆ ಕೋರಿದ್ದಾರೆ.

ಭ್ರಷ್ಟಾಚಾರದ ಆರೋಪ ಹೊತ್ತಿರುವ ಬೆಂಜಮಿನ್‌ ನೆತನ್ಯಾಹು ಅವರ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಬೆಂಜಮಿನ್‌ ನೆತನ್ಯಾಹು ವಿರುದ್ಧ ಇಸ್ರೇಲ್‌ ಅಟಾರ್ನಿ ಜನೆರೆಲ್‌ ಅವಿಚಾಯ್ ಮ್ಯಾಂಡೆಲ್ಬಿಟ್ ಹಾಗೂ ಪ್ರಾಸಿಕ್ಯೂಟರ್‌ ಲಿಯೆಟ್‌ ಬೆನ್‌ ಐರ್ ಅವರು ವಾದ ಮಾಡುತ್ತಿದ್ದಾರೆ. ಇವರ ವಾದ ಸರಿಯಾಗಿ ಇಲ್ಲ ಎಂಬುದನ್ನು ಪ್ರಶ್ನಿಸಲು ಯೈರ್ ನೆತನ್ಯಾಹು ಹಿಂದೂ ದೇವತೆ ದುರ್ಗಾದೇವಿಯ ಚಿತ್ರವನ್ನು ಬಳಕೆ ಮಾಡುವ ಮೂಲಕ ವಿವಾದಕ್ಕೆ ಕಾರಣರಾಗಿದ್ದಾರೆ.

ADVERTISEMENT

ದುರ್ಗಾ ದೇವಿಯ ಮುಖಕ್ಕೆ ಲಿಯೆಟ್‌ ಬೆನ್‌ ಐರ್ ಅವರ ಮುಖವನ್ನು ಹಾಗೂ ದೇವತೆಯ ಪಕ್ಕದಲ್ಲಿ ಇರುವ ಹುಲಿಯ ಮುಖಕ್ಕೆ ಅಟಾರ್ನಿ ಜನರೆಲ್‌ ಅವರ ಮುಖವನ್ನು ಕೊಲೇಜ್‌ ಮಾಡಿ, ದೇವತೆಯ ಹಲವು ಕೈಗಳು ವಿಚಾರಣೆ ಕುರಿತು ಆಕ್ಷೇಪ ವ್ಯಕ್ತಪಡಿಸುವಂತೆ ಬಿಂಬಿಸುವ ಚಿತ್ರವನ್ನು ಪೋಸ್ಟ್‌ ಮಾಡಿದ್ದರು. ಇದಕ್ಕೆ ವಿರೋಧ ವ್ಯಕ್ತವಾದ ಬೆನ್ನಲೇ ಆ ಪೋಸ್ಟ್‌ ಅನ್ನು ಅಳಿಸಿ ಹಾಕಿದ್ದಾರೆ.

ಇಸ್ರೇಲ್‌ನ ಪ್ರಾಸಿಕ್ಯೂಟರ್‌ ಹಾಗೂ ಅಟಾರ್ನಿ ಜನರಲ್‌ ಅವರನ್ನು ಟೀಕಿಸಿ ವಿಡಂಬನಾತ್ಮಕ ಚಿತ್ರವೊಂದನ್ನು ಟ್ವೀಟ್ ಮಾಡಿದ್ದೆ. ಅದಕ್ಕೆ ಬಳಸಿರುವ ಮೀಮ್ ಹಿಂದೂ ದೇವತೆಯಾಗಿದೆ ಎಂಬುದು ನನಗೆ ಅರ್ಥವಾಗಲಿಲ್ಲ. ನಮ್ಮ ಭಾರತೀಯ ಸ್ನೇಹಿತರ ಕಮೆಂಟ್‌ಗಳ ಮೂಲಕ ನನಗೆ ಅರಿವಾಯಿತು. ಕೂಡಲೇ ಆ ಟ್ವೀಟ್ ತೆಗೆದುಹಾಕಿದೆ. ಗೊತ್ತಿಲ್ಲದ ಈ ತಪ್ಪಿಗೆ ಭಾರತೀಯರು ಮತ್ತು ಹಿಂದೂಗಳ ಕ್ಷಮೆಯಾಚಿಸುತ್ತೇನೆ ಎಂದು ಯೈರ್ ಟ್ವೀಟ್ ಮಾಡಿದ್ದಾರೆ.

ಯೈರ್ ಅವರು ಕ್ಷಮೆಯಾಚಿಸಿರುವುದಕ್ಕೆ ಕೆಲ ಇಸ್ರೇಲಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಅವರ ಈ ನಡೆ ಬೇಜವಾಬ್ದಾರಿತನದಿಂದ ಕೂಡಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.