ಕೊಡೊಗ್ನೊ(ಇಟಲಿ): ಕೊರೊನಾ ಸೋಂಕಿನ ವಿರುದ್ಧ ಹೋರಾಡಿ ಗೆದ್ದ ಇಟಲಿಯ ಮೊಟ್ಟ ಮೊದಲ ಕೋವಿಡ್ ರೋಗಿಯೊಬ್ಬರು ಕೊರೊನಾ ಸಂತ್ರಸ್ತರ ಸ್ಮರಣಾರ್ಥ ಆಯೋಜಿಸಿದ್ದ 180 ಕಿ.ಮೀ ಓಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮೂಲಕ, ಸೋಂಕಿತರಲ್ಲಿ ವಿಶ್ವಾಸ ಮೂಡಿಸುವ ಪ್ರಯತ್ನ ಮಾಡಿದ್ದಾರೆ.
ಕೊರೊನಾ ಸೋಂಕಿಗೆ ಒಳಗಾಗಿ ವಾರಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿರುವ ಯುನಿಲಿವರ್ ಮ್ಯಾನೇಜರ್ ಮ್ಯಾಟಿಯಾ ಮೇಸ್ಟ್ರಿ(38), ಎರಡು ದಿನಗಳ (ಶನಿವಾರ ಮತ್ತು ಭಾನುವಾರ ) ರಿಲೇ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಇಟಲಿ ದೇಶದ ಎರಡು ಪ್ರಮುಖ ಕೊರೊನಾ ಹಾಟ್‌ಸ್ಪಾಟ್ ಗಳೆಂದು ಗುರುತಿಸಿರುವ ಕೊಡೊಗ್ನೊ ಮತ್ತು ವೊಯುಗಾನಿಯೊ ನಗರಗಳ ನಡುವೆ ಈ ಓಟವನ್ನು ಆಯೋಜಿಸಲಾಗಿತ್ತು.
ಫೆಬ್ರುವರಿ 21ರಂದು ಕೊಡೊಗ್ನೊದಲ್ಲಿ ಮ್ಯಾಟಿಯಾ ಮಾಸ್ಟ್ರಿ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಹೀಗಾಗಿ ಇಲ್ಲಿಂದಲೇ ಶನಿವಾರ ಓಟದ ಸ್ಪರ್ಧೆ ಆರಂಭಿಸಲಾಯಿತು. ಭಾನುವಾರ ವೊಯುಗಾನಿಯೊ ನಗರದಲ್ಲಿ ಓಟ ಕೊನೆಗೊಂಡಿತು. ವೊಯುಗಾನಿಯೊದಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ ಮೊದಲ ಪ್ರಕರಣ ದಾಖಲಾಗಿತ್ತು.
‘ಕೊರೊನಾ ಸೋಂಕಿತ ಹಾಟ್‌ಸ್ಪಾಟ್ ನಗರಗಳ ನಡುವೆ ಓಟದ ಸ್ಪರ್ಧೆಯನ್ನು ಆಯೋಜಿಸುವ ಮೂಲಕ ಎರಡು ನಗರಗಳನ್ನು ಒಟ್ಟು ಗೂಡಿಸಲು ಪ್ರಯತ್ನಿಸಿರುವ ಕ್ರಮ ತುಂಬಾ ಚೆನ್ನಾಗಿದೆ‘ ಎಂದು ಮೇಸ್ಟ್ರಿ ಹೇಳಿದರು. ಈ ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕಾಗಿ ತಾನು ಜೀವಂತವಾಗಿ ಉಳಿದಿರುವುದು ಖುಷಿ ಕೊಟ್ಟಿದೆ. ಅದಕ್ಕಾಗಿಯೇ ನಾನೊಬ್ಬ ಅದೃಷ್ಟ ಶಾಲಿ ಎಂದು ಹೇಳಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.