ADVERTISEMENT

ಜಪಾನ್‌ನಲ್ಲಿ ಪ್ರವಾಹ: 34 ಮಂದಿ ಸಾವು

ಮಣ್ಣು ಕುಸಿತದ ಎಚ್ಚರಿಕೆ ನೀಡಿದ ಜಪಾನ್‌ ಹವಾಮಾನ ಇಲಾಖೆ

ಏಜೆನ್ಸೀಸ್
Published 5 ಜುಲೈ 2020, 15:14 IST
Last Updated 5 ಜುಲೈ 2020, 15:14 IST
ಕುಮಾಮೊಟೊ ಪ್ರದೇಶದಲ್ಲಿ ಮಳೆಯಿಂದ ಉಂಟಾಗ ಪ್ರವಾಹಕ್ಕೆ ಸಿಕ್ಕಿ ಕಟ್ಟಡವೊಂದು ರಸ್ತೆಗೆ ಬಿದ್ದಿರುವುದು – ಎಎಫ್‌ಪಿ ಚಿತ್ರ
ಕುಮಾಮೊಟೊ ಪ್ರದೇಶದಲ್ಲಿ ಮಳೆಯಿಂದ ಉಂಟಾಗ ಪ್ರವಾಹಕ್ಕೆ ಸಿಕ್ಕಿ ಕಟ್ಟಡವೊಂದು ರಸ್ತೆಗೆ ಬಿದ್ದಿರುವುದು – ಎಎಫ್‌ಪಿ ಚಿತ್ರ   

ಟೋಕಿಯೊ: ಕಳೆದ ಮೂರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ದಕ್ಷಿಣ ಜಪಾನ್‌ನಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದು 34 ಮಂದಿ ಮೃತಪಟ್ಟಿದ್ದಾರೆ. ಹಲವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಳೆ ಪ್ರಮಾಣ ಈಗ ಕಡಿಮೆಯಾಗಿದೆ. ಆದರೆ, ಕುಮಾಮೊಟೊ ಪ್ರದೇಶದಲ್ಲಿ ಮಣ್ಣು ಕುಸಿತ ಉಂಟಾಗಲಿದೆ ಎಂದು ಜಪಾನ್‌ ಹವಾಮಾನ ಇಲಾಖೆ ಎಚ್ಚರಿಸಿದೆ. ಈ ಪ್ರದೇಶದ2 ಲಕ್ಷ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ.

‘ನದಿಯ ಪಕ್ಕದಲ್ಲಿದ್ದ ಆರೈಕೆ ಕೇಂದ್ರವೊಂದಕ್ಕೆಪ್ರವಾಹದ ನೀರು ಹಾಗೂ ಮಣ್ಣು ನುಗ್ಗಿದ ಪರಿಣಾಮ 65 ನಾಗರಿಕರು ಹಾಗೂ 30 ಚಿಕಿತ್ಸೆ ನೀಡುತ್ತಿದ್ದವರು ಕೇಂದ್ರದಲ್ಲೇ ಸಿಕ್ಕಿಹಾಕಿಕೊಂಡಿದ್ದಾರೆ. ಭಾನುವಾರದ ಮಧ್ಯಾಹ್ನದ ಹೊತ್ತಿಗೆ ಉಳಿದ 51 ನಾಗರಿಕರನ್ನು ರಕ್ಷಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ADVERTISEMENT

ಪ್ರವಾಹ ಪೀಡಿತ ಪ್ರದೇಶದಲ್ಲಿ ನೂರಾರು ಮಂದಿ ಸಿಲುಕಿಕೊಂಡಿದ್ದು ರಕ್ಷಣಾ ಕಾರ್ಯ ಮುಂದುವರಿದಿದೆ. ಕುಮಾಮೊಟೊ ಪ್ರದೇಶದಲ್ಲಿ ನೂರಾರು ನಿವಾಸಿಗಳನ್ನು ಹೆಲಿಕಾಪ್ಟರ್‌ ಮೂಲಕ ಭಾನುವಾರ ರಕ್ಷಣೆ ಮಾಡಲಾಯಿತು’ ಎಂದು ಅಗ್ನಿಶಾಮಕ ಮತ್ತು ವಿಪತ್ತು ನಿರ್ವಹಣಾ ಸಂಸ್ಥೆ ಹೇಳಿದೆ.

ವಿದ್ಯುತ್‌ ಇಲ್ಲ: ಪ್ರವಾಹ ಮತ್ತು ಮಣ್ಣು ಕುಸಿತದಿಂದಾಗಿ ಸುಮಾರು 6 ಸಾವಿರ ಮನೆಗಳಿಗೆ ಭಾನುವಾರವೂ ವಿದ್ಯುತ್‌ ಸೇವೆ ಸ್ಥಗಿತವಾಗಿತ್ತು.

ಕೊರೊನಾ ಭೀತಿ

ಕೊರೊನಾ ಹರಡಬಹುದು ಎಂಬ ಭೀತಿಯಿಂದ ಹಲವು ನಾಗರಿಕರು ಸುರಕ್ಷಿತ ಸ್ಥಳಗಳಿಗೆ ತೆರಳಲು ಒಪ್ಪದ ಘಟನೆ ನಡೆದಿದೆ.

ಕುಮಾಮೊಟೊ ಮತ್ತು ಕಾಗೊಶಿಮಾ ಪ್ರದೇಶದ ಸುಮಾರು 75 ಸಾವಿರಕ್ಕೂ ಹೆಚ್ಚು ಮಂದಿಯನ್ನು ಪ್ರವಾಹದ ಕಾರಣ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲು ಸರ್ಕಾರ ನಿರ್ಧರಿಸಿತ್ತು. ಸ್ಥಳಾಂತರವನ್ನು ಸರ್ಕಾರ ಕಡ್ಡಾಯ ಮಾಡಿರಲಿಲ್ಲ. ಆದ ಕಾರಣ ಕೊರೊನಾ ಭೀತಿಯಿಂದ ಹಲವರು ತಮ್ಮ ಮನೆಯಲ್ಲಿಯೇ ಉಳಿಯಲು ಬಯಸಿದರು. ಶಿಬಿರಗಳಲ್ಲಿ ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮನವೊಲಿಸಲು ಪ್ರಯತ್ನಿಸಿದರೂ, ಸಾರ್ವಜನಿಕರು ಸ್ಥಳಾಂತರಕ್ಕೆ ಒಪ್ಪಿಗೆ ನೀಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.