ADVERTISEMENT

ತಾಲಿಬಾನ್‌ ನಾಯಕತ್ವ: ಮುಂದುವರಿದ ಗೋಪ್ಯತೆ?

ಏಜೆನ್ಸೀಸ್
Published 30 ಆಗಸ್ಟ್ 2021, 19:45 IST
Last Updated 30 ಆಗಸ್ಟ್ 2021, 19:45 IST
ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ವಿರೋಧಿ ಚಳವಳಿಯ ಹೋರಾಟಗಾರರು ಸೋಮವಾರ ಶಸ್ತ್ರಾಸ್ತ್ರ ತರಬೇತಿಯಲ್ಲಿ ಭಾಗಿಯಾಗಿದ್ದರು
ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ವಿರೋಧಿ ಚಳವಳಿಯ ಹೋರಾಟಗಾರರು ಸೋಮವಾರ ಶಸ್ತ್ರಾಸ್ತ್ರ ತರಬೇತಿಯಲ್ಲಿ ಭಾಗಿಯಾಗಿದ್ದರು   

ಕಾಬೂಲ್‌: ಅಫ್ಗಾನಿಸ್ತಾನದ ಅಧಿಕಾರವನ್ನು ತನ್ನ ಕೈಗೆ ತೆಗೆದುಕೊಂಡಾಗಿನಿಂದ, ತಾಲಿಬಾನ್‌ ಪಡೆಯ ಹಲವಾರು ನಾಯಕರು, ಕಮಾಂಡೊಗಳು, ಮದರಸಾದ ಶಸ್ತ್ರಸಜ್ಜಿತ ವಿದ್ಯಾರ್ಥಿಗಳು ಹಾಗೂ ಹಲವಾರು ವರ್ಷಗಳಿಂದ ಗಡಿಪಾರಾಗಿದ್ದ ನಾಯಕರು... ಹೀಗೆ ಎಲ್ಲರೂ ಒಬ್ಬೊಬ್ಬರಾಗಿ ಕಾಬೂಲ್‌ ಪ್ರವೇಶಿಸುತ್ತಿದ್ದಾರೆ. ಆದರೆ, ತಾಲಿಬಾನ್‌ನ ಸರ್ವೋಚ್ಚ ನಾಯಕನೊಬ್ಬ ಮಾತ್ರ ಇದುವರೆಗೆ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ.

ತನ್ನ ನಾಯಕನ ಚಲನವಲನದ ಬಗ್ಗೆ ಯಾವಾಗಲೂ ಗೋಪ್ಯತೆಯನ್ನು ಕಾಪಾಡಿಕೊಂಡು ಬಂದಿರುವ ತಾಲಿಬಾನ್‌, ಈಗಲೂ ಅದೇ ಸಂಪ್ರದಾಯ ಮುಂದುವರಿಸಿದೆ ಎನ್ನಲಾಗಿದೆ.

ಆದರೆ, ತನ್ನ ಸರ್ವೋಚ್ಚ ನಾಯಕ ಹೈಬತ್ ಉಲ್ಲಾ ಅಖುಂಜಾದಾ, ಸದ್ಯಕ್ಕೆ ಕಂದಹಾರದಲ್ಲಿರುವುದಾಗಿ ತಾಲಿಬಾನ್‌ ವಕ್ತಾರ ಜಬೀವುಲ್ಲಾ ಮುಜಾಹಿದ್ ಹೇಳಿದ್ದಾರೆ; ಹೈಬತ್ ಉಲ್ಲಾ ಶೀಘ್ರದಲ್ಲೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿರುವುದಾಗಿ ತಾಲಿಬಾನ್‌ ಭಾನುವಾರ ಹೇಳಿತ್ತು. ಇದೀಗ ತನ್ನ ನಾಯಕನ ಭಾವಚಿತ್ರವನ್ನೂ ಬಿಡುಗಡೆ ಮಾಡಿದೆ.

ADVERTISEMENT

ಏಕಾಂತವಾಸಕ್ಕೆ ಕುಖ್ಯಾತನಾಗಿದ್ದ ತಾಲಿಬಾನ್‌ ಸಂಸ್ಥಾಪಕ ಮುಲ್ಲಾ ಮೊಹಮ್ಮದ್‌ ಒಮರ್, 1990ರಲ್ಲಿ ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ ಆಡಳಿತವಿದ್ದಾಗಲೂ ಕಾಬೂಲ್‌ಗೆ ಭೇಟಿ ನೀಡಿದ್ದು ಅಪರೂಪ. ಕಂದಹಾರದಲ್ಲಿಯೇ ಇದ್ದ ಆತ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಯಾವುದೇ ನಿಯೋಗದೊಂದಿಗೆ ಭೇಟಿಗೂ ನಿರಾಕರಿಸುತ್ತಿದ್ದ. ಆದರೆ, ಆಡಳಿತದ ವಿಚಾರದಲ್ಲಿ ಅವನ ಮಾತೇ ಅಂತಿಮವಾಗಿತ್ತು. ಆತನಂತೆಯೇ, ಹೈಬತ್‌ ಉಲ್ಲಾ ಕೂಡ ಏಕಾಂತವನ್ನೇ ಬಯಸುವವನು ಎನ್ನುತ್ತಾರೆ ಅಂತರರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿಯ ಏಷ್ಯಾ ಕಾರ್ಯಕ್ರಮದ ಮುಖ್ಯಸ್ಥ ಲಾರೆಲ್‌ ಮಿಲ್ಲರ್‌.

ತನಗಿಂತಲೂ ಮುನ್ನ ಇದ್ದ ಮುಖ್ಯಸ್ಥ ಮುಲ್ಲಾ ಅಖ್ತರ್ ಮನ್ಸೂರ್‌, ಅಮೆರಿಕದ ಡ್ರೋನ್‌ ದಾಳಿಯಲ್ಲಿ ಹತನಾಗಿದ್ದು ಕೂಡ ತಾಲಿಬಾನ್‌ ಮುಖ್ಯಸ್ಥರ ಬಗ್ಗೆ ಗೋಪ್ಯತೆ ಕಾಪಾಡಿಕೊಳ್ಳಲು ಕಾರಣವಾಗಿರಬಹುದು. ಅಥವಾ, ಒಮ್ಮೆ ಸಾರ್ವಜನಿಕವಾಗಿ ಕಾಣಿಸಿಕೊಂಡು ಆನಂತರ ಮುಲ್ಲಾ ಒಮರ್‌ನಂತೆಯೇ ಗೋಪ್ಯ ಸ್ಥಳದಲ್ಲಿದ್ದು ಅಧಿಕಾರ ನಡೆಸುವ ಇರಾದೆಯೂ ಇರಬಹುದು ಎನ್ನುತ್ತಾರೆ ಅವರು.

ಹೈಬತ್‌ಉಲ್ಲಾಗೆ ಆರೋಗ್ಯ ಸಮಸ್ಯೆ ಇದೆ ಎಂಬ ವದಂತಿ ದಟ್ಟವಾಗಿ ಹಬ್ಬಿದೆ. ಅವರು ಕೋವಿಡ್‌ಗೆ ಒಳಗಾಗಿದ್ದಾರೆ ಎಂದೂ ಹೇಳಲಾಗುತ್ತಿದೆ. ಬಾಂಬ್‌ ದಾಳಿಯಲ್ಲಿ ಮೃತಪಟ್ಟಿರಬಹುದು ಎಂಬ ಊಹಾಪೋಹವೂ ಇದೆ. ಈ ಎಲ್ಲದಕ್ಕೆ ತೆರೆ ಎಳೆಯುವುದಕ್ಕಾಗಿಯೇ ಹೈಬತ್‌ಉಲ್ಲಾ ಶೀಘ್ರವೇ ಕಾಣಿಸಿಕೊಳ್ಳಲಿದ್ದಾರೆ ಎಂದು ತಾಲಿಬಾನ್‌ ಹೇಳಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ತಾಲಿಬಾನ್‌ ಸಂಸ್ಥಾಪಕ ಮುಲ್ಲಾ ಒಮರ್‌ ಸಾವಿನ ಸುದ್ದಿಯನ್ನೂ ಹಲವು ವರ್ಷಗಳವರೆಗೆ ಗೋಪ್ಯವಾಗಿರಿಸಲಾಗಿತ್ತು. 2015ರಲ್ಲಿ ಸಾವಿನ ಸುದ್ದಿ ಬಹಿರಂಗವಾದಾಗ ತಾಲಿಬಾನ್‌ ಪಡೆಯಲ್ಲಿ ಅಧಿಕಾರಕ್ಕಾಗಿ ಸಂಘರ್ಷ ಏರ್ಪಟ್ಟಿತ್ತು. ಈ ಅಂತಃಕಲಹದ ಸಂದರ್ಭದಲ್ಲಿ, 2016ರಲ್ಲಿ ಹೈಬತ್‌ಉಲ್ಲಾ ಮುಖ್ಯಸ್ಥನಾಗಿ ಅಧಿಕಾರಕ್ಕೆ ಏರಿದ.

ಅಫ್ಗಾನಿಸ್ತಾನದಲ್ಲಿ ಸರ್ಕಾರ ರಚಿಸುವ ಸವಾಲು ಇರುವ ಈ ಹೊತ್ತಿನಲ್ಲಿ ನಾಯಕತ್ವದ ನಿರ್ವಾತದ ಬಗ್ಗೆ ಏನಾದರೂ ಮಾತನಾಡಿದರೆ, ಅದು ತನ್ನ ಚಳವಳಿಯನ್ನು ಅಸ್ಥಿರಗೊಳಿಸಬಹುದು; ದಶಕಗಳ ಹೋರಾಟ ವ್ಯರ್ಥವಾಗಲಿದೆ ಎಂಬ ಆತಂಕವೂ ತಾಲಿಬಾನ್‌ಗಿದೆ. ಹೀಗಾಗಿ ಅಮೆರಿಕದ ಸೇನೆಯ ಸಂಪೂರ್ಣ ಹಿಂದೆಗೆತದ ಕಾರ್ಯ ಪೂರ್ಣಗೊಳ್ಳುವವರೆಗೆ ಅದು ಸೈರಣೆಯಿಂದ ಇರಬಹುದು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.