
ಕಾಬೂಲ್: ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿರುವ ಚೀನೀ ರೆಸ್ಟೋರೆಂಟ್‌ನಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ಸ್ಫೋಟದ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್‌ನ (ಐಎಸ್) ಗುಂಪು ಹೊತ್ತುಕೊಂಡಿದೆ.
ಈ ಘಟನೆಯಲ್ಲಿ ಚೀನಾ ಪ್ರಜೆ ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದರು. ಸ್ಫೋಟದ ಕಾರಣವನ್ನು ಅಧಿಕಾರಿಗಳು ಅಧಿಕೃತವಾಗಿ ದೃಢಪಡಿಸಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವಾಲಯದ ವಕ್ತಾರ ಮುಫ್ತಿ ಅಬ್ದುಲ್ ಮತೀನ್ ಖಾನಿ ಮಂಗಳವಾರ ತಿಳಿಸಿದ್ದಾರೆ.
ಐಎಸ್ ನೀಡಿರುವ ಹೇಳಿಕೆಯು ಈ ಹಿಂದೆ ನೀಡಿದ್ದ ಹೇಳಿಕೆಗಳಿಗೆ ಹೋಲಿಕೆಯಾಗುತ್ತಿದೆ. ಅಲ್ಲದೆ, ಉಗ್ರಗಾಮಿಗಳ ಬೆಂಬಲಿಗರು ಮಂಗಳವಾರ ಬೆಳಿಗ್ಗೆ ಇದನ್ನು ವ್ಯಾಪಕವಾಗಿ ಹಂಚಿಕೊಂಡಿದ್ದಾರೆ. ಈ ಹೇಳಿಕೆಯಲ್ಲಿ, ಅಫ್ಗಾನಿಸ್ತಾನದಲ್ಲಿರುವ ಚೀನಾದ ಪ್ರಜೆಗಳ ವಿರುದ್ಧ ಮತ್ತಷ್ಟು ಬೆದರಿಕೆಯನ್ನು ಹಾಕಲಾಗಿತ್ತು. ಈ ದಾಳಿಯನ್ನು ಚೀನಾದಲ್ಲಿ ಉಯ್ಘರ್ ಮುಸ್ಲಿಮರನ್ನು ನಡೆಸಿಕೊಳ್ಳುತ್ತಿರುವ ರೀತಿಗೆ ಹೋಲಿಸಲಾಗಿತ್ತು.
2021ರಲ್ಲಿ ತಾಲಿಬಾನ್ ಕಾಬೂಲ್ ಅನ್ನು ವಶಪಡಿಸಿಕೊಂಡ ನಂತರ ಬಹುತೇಕ ರಾಷ್ಟ್ರಗಳು ಅಫ್ಗಾನಿಸ್ತಾನದಿಂದ ಹೊರಬಂದವು. ಆದರೆ, ಚೀನಾ ಮಾತ್ರ ಅಲ್ಲಿ ದೊಡ್ಡ ಮಟ್ಟದ ಆರ್ಥಿಕ ಉಪಸ್ಥಿತಿಯನ್ನು ಮುಂದುವರಿಸಿದೆ. ಆದರೂ, ಚೀನಾ ಸರ್ಕಾರವು ತಾಲಿಬಾನ್ ಆಡಳಿತಕ್ಕೆ ಇನ್ನೂ ರಾಜತಾಂತ್ರಿಕ ಮಾನ್ಯತೆ ನೀಡಿಲ್ಲ.
ಬಾಂಬ್ ದಾಳಿ ನಂತರ ಪ್ರತಿಕ್ರಿಯೆ ನೀಡಿರುವ ಚೀನಾ, ತನ್ನ ನಾಗರಿಕರು ಅಫ್ಗಾನಿಸ್ತಾನಕ್ಕೆ ಪ್ರಯಾಣಿಸಬಾರದು ಎಂದು ಮಂಗಳವಾರ ಸಲಹೆ ನೀಡಿದೆ.
‘ಒಬ್ಬ ಚೀನಾದ ಪ್ರಜೆ ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕು. ಚೀನಾ ಪ್ರಜೆಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು. ಆರೋಪಿಗಳನ್ನು ಪತ್ತೆ ಮಾಡಿ ಶಿಕ್ಷಿಸಬೇಕು’ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಗುವೊ ಜಿಯಾಕುನ್ ಅವರು ಅಫ್ಗಾನಿಸ್ತಾನದ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
‘ಆತ್ಮಾಹುತಿ ಬಾಂಬ್ ದಾಳಿ’
‘ಕಾಬೂಲ್ ನಗರದಲ್ಲಿ ಚೀನಾದ ಪ್ರಜೆಗಳು ಹೆಚ್ಚಾಗಿ ಭೇಟಿ ನೀಡುವ ರೆಸ್ಟೋರೆಂಟ್‌ಗೆ ಆತ್ಮಾಹುತಿ ಬಾಂಬರ್ ಪ್ರವೇಶಿಸಿ ಸಭೆಯೊಂದರಲ್ಲಿ ಸ್ಫೋಟಿಸಿದ್ದಾನೆ’ ಎಂದು ಐಎಸ್‌ನ ಗುಂಪು ತಿಳಿಸಿದೆ. ದಾಳಿಯಲ್ಲಿ ತಾಲಿಬಾನ್ ಭದ್ರತಾ ಸಿಬ್ಬಂದಿ ಸೇರಿದಂತೆ 25 ಮಂದಿ ಮೃತಪಟ್ಟಿರಬಹುದು ಅಥವಾ ಗಾಯಗೊಂಡಿರಬಹುದು ಎಂದು ಅಮಾಖ್ ಸುದ್ದಿ ಸಂಸ್ಥೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.