ADVERTISEMENT

ಇನ್ನೂ ಎರಡು ಕ್ಷಿಪಣಿ ಪರೀಕ್ಷೆ ನಡೆಸಿದ ಉತ್ತರ ಕೊರಿಯಾ

ಅಮೆರಿಕ ಹೇರುತ್ತಿರುವ ಒತ್ತಡಕ್ಕೆ ಜಗ್ಗದ ಕಿಮ್‌

ಏಜೆನ್ಸೀಸ್
Published 7 ಆಗಸ್ಟ್ 2019, 19:45 IST
Last Updated 7 ಆಗಸ್ಟ್ 2019, 19:45 IST
   

ಸೋಲ್‌: ಅಮೆರಿಕ ಹೇರುತ್ತಿರುವ ಒತ್ತಡಕ್ಕೆ ಜಗ್ಗದ ಉತ್ತರ ಕೊರಿಯಾ ಇನ್ನೂ ಎರಡು ಖಂಡಾಂತರ ಕ್ಷಿಪಣಿಗಳ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ.

ಅಮೆರಿಕ ಮತ್ತು ದಕ್ಷಿಣ ಕೊರಿಯಾ ಜಂಟಿ ಸಮರಾಭ್ಯಾಸಕ್ಕೆ ಎಚ್ಚರಿಕೆ ನೀಡುವ ಉದ್ದೇಶದಿಂದ ಉತ್ತರ ಕೊರಿಯಾಕಡಿಮೆ ವ್ಯಾಪ್ತಿಯ ಖಡಾಂತರ ಗುರುತ್ವಾಬಲ ಕ್ಷಿಪಣಿಯನ್ನು(ಬ್ಯಾಲಿಸ್ಟಿಕ್‌ ಮಿಷಲ್‌) ಪ್ರಯೋಗಿಸಿದೆ ಎಂದು ಉತ್ತರ ಕೊರಿಯಾದ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಅಧ್ಯಕ್ಷ ಕಿಮ್‌ ಜಾನ್‌ ಉನ್ ಮೇಲ್ವಿಚಾರಣೆಯಲ್ಲಿ ಪರೀಕ್ಷೆ ನಡೆದಿದೆ ಎಂದು ಕೊರಿಯನ್‌ ಸೆಂಟ್ರಲ್‌ ನ್ಯೂಸ್‌ ಏಜೆನ್ಸಿ (ಕೆಸಿಎನ್‌ಎ) ವರದಿ ಮಾಡಿದೆ.

ADVERTISEMENT

ಪಶ್ಚಿಮ ಭಾಗದಲ್ಲಿರುವ ವಾಯುನೆಲೆಯಿಂದ ಕ್ಷಿಪಣಿ ಪರೀಕ್ಷೆ ನಡೆದಿದೆ. ಪೂರ್ವ ಕರಾವಳಿಯಲ್ಲಿರುವ ಗುರಿಯನ್ನು ನಿಖರವಾಗಿ ತಲುಪಿದೆ.

‘ಹೊಸ-ಮಾದರಿಯ ಯುದ್ಧತಂತ್ರದ ಮಾರ್ಗದರ್ಶಿ ಕ್ಷಿಪಣಿಗಳ’ ವಿಶ್ವಾಸಾರ್ಹತೆ ಮತ್ತು ಯುದ್ಧ ಸಾಮರ್ಥ್ಯವನ್ನು ಪರೀಕ್ಷಿಸಲಾಗಿದೆ. ಈ ಕ್ಷಿಪಣಿಯ ಪ್ರಯೋಗದ ಕುರಿತು ಅಧ್ಯಕ್ಷ ಕಿಮ್‌ ತೃಪ್ತಿ ವ್ಯಕ್ತಪಡಿಸಿದ್ದು, ಇದು ಅಮೆರಿಕ ಮತ್ತು ದಕ್ಷಿಣ ಕೊರಿಯಾ ಜಂಟಿ ಸೇನಾ ಸಮರಾಭ್ಯಾಸಕ್ಕೆ ಸೂಕ್ತ ಎಚ್ಚರಿಕೆಯನ್ನು ನೀಡಿದೆ ಎಂದು ತಿಳಿಸಿದ್ದಾರೆ.

ಕ್ಷಿಪಣಿ ಉಡಾವಣೆಯ ದೃಶ್ಯವನ್ನು ಸ್ಥಳೀಯ ಪತ್ರಿಕೆಯೊಂದು ಪ್ರಕಟಿಸಿದ್ದು, ಅಧ್ಯಕ್ಷ ಕಿಮ್‌, ಸೇನಾಧಿಕಾರಿಗಳೊಂದಿಗೆ ಈ ಯಶಸ್ಸನ್ನು ಸಂಭ್ರಮಿಸುತ್ತಿರುವ ದೃಶ್ಯವೂ ಅದರಲ್ಲಿದೆ.

‘ಈ ಕ್ಷಿಪಣಿಗಳು450 ಕಿ.ಮೀ. ಗುರಿ ತಲುಪಿದ್ದು,ಪೂರ್ವ ಕರಾವಳಿಯ ಸಮುದ್ರದಲ್ಲಿ ಪತನಗೊಂಡಿದೆ. ಜುಲೈ 25 ರಂದು ಉತ್ತರ ಕೊರಿಯಾ ಪ್ರಯೋಗಿಸಿದ ಅಲ್ಪ– ಶ್ರೇಣಿಯ ಕ್ಷಿಪಣಿಗಳನ್ನೇ ಹೋಲುತ್ತವೆ’ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕ–ಉತ್ತರ ಕೊರಿಯಾ ನಡುವಿನ ಮಾತುಕತೆ ಈಗಾಗಲೇ ಮುರಿದು ಬಿದ್ದಿದೆ. ಉತ್ತರ ಕೊರಿಯಾ ನಡೆಸುತ್ತಿರುವ ಕ್ಷಿಪಣಿ ಪರೀಕ್ಷೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳುತ್ತಾ ಬಂದಿದ್ದಾರೆ. ಇದರ ನಡುವೆಯೇ ಉತ್ತರ ಕೊರಿಯಾ ಎರಡು ವಾರಗಳ ಅವಧಿಯಲ್ಲಿ ನಾಲ್ಕು ಸಲ ಕ್ಷಿಪಣಿ ಪರೀಕ್ಷೆ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.