ADVERTISEMENT

ಇಂಗ್ಲೆಂಡ್: ಮುಖಕ್ಕೆ ಮಾಸ್ಕ್ ಬದಲು ಹೆಬ್ಬಾವನ್ನು ಸುತ್ತಿಕೊಂಡು ಬಸ್‌ ಏರಿದ ಭೂಪ

ಏಜೆನ್ಸೀಸ್
Published 16 ಸೆಪ್ಟೆಂಬರ್ 2020, 7:21 IST
Last Updated 16 ಸೆಪ್ಟೆಂಬರ್ 2020, 7:21 IST
   

ಲಂಡನ್‌: ಇಂಗ್ಲೆಂಡ್‌ನವಾಯುವ್ಯ ಪ್ರದೇಶದ ಸಾರ್ವಜನಿಕ ಬಸ್‌ವೊಂದರಲ್ಲಿ ಪ್ರಯಾಣಿಕನೊಬ್ಬತನ್ನ ಕುತ್ತಿಗೆ ಹಾಗೂ ಮುಖಕ್ಕೆ ಮಾಸ್ಕ್ ಬದಲಾಗಿ ಹೆಬ್ಬಾವನ್ನೇ ಸುತ್ತಿಕೊಂಡು ಕಾಣಿಸಿಕೊಳ್ಳುವ ಮೂಲಕ ಜನರನ್ನು ಅಚ್ಚರಿಗೆ ದೂಡಿದ್ದಾನೆ.

ಮ್ಯಾಂಚೆಸ್ಟರ್‌ಗೆ ತೆರಳುತ್ತಿದ್ದ ಬಸ್‌ನಲ್ಲಿ ಸೋಮವಾರ ಈ ಪ್ರಯಾಣಿಕ ಕಾಣಿಸಿಕೊಂಡಿದ್ದಾನೆ. ಆದರೆ, ಸಹಪ್ರಯಾಣಿಕರು ಆತ ವರ್ಣಮಯವಾದ ಬಟ್ಟೆಯಿಂದ ಮುಖ ಮುಚ್ಚಿಕೊಂಡಿರಬೇಕು ಎಂದು ಭಾವಿಸಿದ್ದರು ಎಂದು ಮ್ಯಾಂಚೆಸ್ಟರ್‌ ಈವ್ನಿಂಗ್‌ ನ್ಯೂಸ್‌ ವರದಿ ಮಾಡಿದೆ.

‘ಆತ ನಿಜವಾಗಿಯೂ ವರ್ಣಮಯ ಮಾಸ್ಕ್‌ ಧರಿಸಿರಬಹುದು ಎಂದು ಮೊದಲಿಗೆ ಅಂದುಕೊಂಡಿದ್ದೆ. ಕೆಲಹೊತ್ತಿನ ಬಳಿಕ ಆತ ಹಾವನ್ನು ತನ್ನ ಕೈ ಮೇಲೆ ಹರಿಯಲು ಬಿಟ್ಟ. ಅದರ ಬಗ್ಗೆ ಬಸ್‌ನಲ್ಲಿದ್ದ ಯಾರೊಬ್ಬರೂ ತಲೆಕೆಡಿಸಿಕೊಳ್ಳಲಿಲ್ಲ. ಆದರೆ, ಹಿಂದೆ ಇದ್ದ ಒಬ್ಬ ವ್ಯಕ್ತಿ ಈ ದೃಶ್ಯವನ್ನು ಚಿತ್ರೀಕರಿಸಿಕೊಂಡ. ಇದು ಖಂಡಿತ ಮನರಂಜನೆಯಾಗಿತ್ತು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

ADVERTISEMENT

ಸದ್ಯ ವ್ಯಕ್ತಿಯ ಚಿತ್ರಗಳು ವೈರಲ್‌ ಆಗಿವೆ. ಚಿತ್ರದಲ್ಲಿ ವ್ಯಕ್ತಿಯ ಮುಖ ಸೇರಿದಂತೆ ಕುತ್ತಿಗೆ ಸುತ್ತಲೂ ಹೆಬ್ಬಾವು ಸುರುಳಿಯಾಕಾರದಲ್ಲಿ ಸುತ್ತಿಕೊಂಡಿರುವುದು ಸೆರೆಯಾಗಿದೆ.

ಸದ್ಯ ಕೋವಿಡ್–19 ಪರಿಸ್ಥಿತಿ ಇರುವುದರಿಂದ ಸೋಂಕು ನಿಯಂತ್ರಣದ ಸಲುವಾಗಿ ಸಾರ್ವಜನಿಕ ಸಾರಿಗೆಯಲ್ಲಿ ಮಾಸ್ಕ್‌ ಧರಿಸುವುದನ್ನು ಇಂಗ್ಲೆಂಡ್‌ನಲ್ಲಿ ಕಡ್ಡಾಯಗೊಳಿಸಲಾಗಿದೆ. ಆರೋಗ್ಯ ಪರಿಸ್ಥಿತಿಯನ್ನು ಗಮನಿಸಿ ಕೆಲವರಿಗೆ ಅಥವಾ ಚಿಕ್ಕ ಮಕ್ಕಳಿಗೆ ಕೆಲವು ವಿನಾಯಿತಿಗಳನ್ನು ನೀಡಲಾಗಿದೆ.

ಸರ್ಕಾರದ ಮಾರ್ಗದರ್ಶನದಂತೆ ಮುಖವನ್ನು ಮುಚ್ಚಿಕೊಳ್ಳಲು ಸರ್ಜಿಕಲ್‌ ಮಾಸ್ಕ್‌, ಬಟ್ಟೆಯನ್ನು ಬಳಸಬಹುದಾಗಿದೆ. ಆದರೆ, ಇದಕ್ಕಾಗಿ ಹಾವುಗಳನ್ನು ಬಳಸಿಕೊಳ್ಳಲಾಗುತ್ತದೆ ಎಂದರೆ ನಿಜಕ್ಕೂ ನಂಬಲಾಗದು ಎಂದು ಗ್ರೇಟರ್ ಮ್ಯಾಂಚೆಸ್ಟರ್‌ ಸಾರಿಗೆ ಇಲಾಖೆ ವಕ್ತಾರ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಇಂಗ್ಲೆಂಡ್‌ ಸರ್ಕಾರವು ಅಂಗಡಿಗಳಂತಹ ಕೆಲವು ಸೀಮಿತ ಸ್ಥಳಗಳಲ್ಲಿ ಫೇಸ್‌ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಿರಲಿಲ್ಲ. ಆದರೆ, ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾದಂತೆ ನೀತಿಯನ್ನು ಬದಲಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.