ADVERTISEMENT

ಮೆಕ್ಸಿಕೊದ ಆ್ಯಂಡ್ರಿಯಾ ಮೆಜಾ ‘ಭುವನ ಸುಂದರಿ’

ಭಾರತದ ಆ್ಯಡ್ಲಿನ್‌ ಕಸ್ತಲಿನೊಗೆ ಮೂರನೇ ಸ್ಥಾನ

ಪಿಟಿಐ
Published 17 ಮೇ 2021, 15:06 IST
Last Updated 17 ಮೇ 2021, 15:06 IST
ಆಂಡ್ರಿಯಾ ಮೆಜಾ
ಆಂಡ್ರಿಯಾ ಮೆಜಾ   

ಫ್ಲೋರಿಡಾ (ಪಿಟಿಐ): ಅಮೆರಿಕದ ಫ್ಲೋರಿಡಾದಲ್ಲಿ ನಡೆದ ಸ್ಪರ್ಧೆಯಲ್ಲಿ ಮೆಕ್ಸಿಕೊದ ಆ್ಯಂಡ್ರಿಯಾ ಮೆಜಾ ಅವರು 69ನೇ ಭುವನ ಸುಂದರಿಯಾಗಿ ಆಯ್ಕೆಯಾಗಿದ್ದಾರೆ.

ಸ್ಪರ್ಧೆಯಲ್ಲಿ ಭಾರತದ ಆ್ಯಡ್ಲಿನ್‌ ಕಸ್ತಲಿನೊ ಅವರು ಮೂರನೇ ಸ್ಥಾನ ಪಡೆದಿದ್ದಾರೆ. ಆ್ಯಡ್ಲಿನ್‌ ಉಡುಪಿಯ ಉದ್ಯಾವರದವರು. ಬ್ರೆಜಿಲ್‌ನ ಜೂಲಿಯ ಗಾಮಾ ಮೊದಲನೇ ರನ್ನರ್ ಅಪ್ ಆಗಿ, ಪೆರುವಿನ ಜಾನಿಕ್ ಮೆಸಿಟಾ ಅವರು ಎರಡನೇ ರನ್ನರ್ ಅಪ್ ಆಗಿ ಆಯ್ಕೆಯಾದರು.

ಹಾಲಿವುಡ್‌ನ ಸೆಮಿನೋಲ್ ಹಾರ್ಡ್ ರಾಕ್ ಹೋಟೆಲ್ ಮತ್ತು ಕ್ಯಾಸಿನೊದಲ್ಲಿ ಭಾನುವಾರ ರಾತ್ರಿ ನಡೆದ ಭುವನ ಸುಂದರಿ ಸ್ಪರ್ಧೆಯ 69ನೇ ಆವೃತ್ತಿಯಲ್ಲಿ ಒಟ್ಟು 73 ದೇಶಗಳ ಸ್ಪರ್ಧಿಗಳು ಭಾಗವಹಿಸಿದ್ದರು. ಕಳೆದ ವರ್ಷದ ಅಂತ್ಯದಲ್ಲಿ ನಡೆಯಬೇಕಾಗಿದ್ದ ಸ್ಪರ್ಧೆಯನ್ನು ಕೋವಿಡ್‌–19 ಕಾರಣಕ್ಕಾಗಿ 2021ರ ಮೇ ತಿಂಗಳಿಗೆ ಮುಂದೂಡಲಾಗಿತ್ತು.

ADVERTISEMENT

‘ಮಿಸ್ ಯೂನಿರ್ವಸ್’ ವೆಬ್‌ಸೈಟ್ ಪ್ರಕಾರ, ಮೆಕ್ಸಿಕೊದ ಆ್ಯಂಡ್ರಿಯಾ ಮೆಜಾ ಅವರಿಗೆ ಹಿಂದಿನ ಭುವನ ಸುಂದರಿ ದಕ್ಷಿಣ ಆಫ್ರಿಕಾದ ಜೊಜಿಬಿನಿ ತುನ್ಜಿ ಅವರು ಭುವನ ಸುಂದರಿ ಕಿರೀಟವನ್ನು ಹಸ್ತಾಂತರಿಸಿದರು.

‘ಒಂದು ವೇಳೆ ಮೆಕ್ಸಿಕೊದ ನಾಯಕಿ ನೀವಾದರೆ ಈ ಸಾಂಕ್ರಾಮಿಕ ರೋಗದ ಸ್ಥಿತಿಯನ್ನು ಹೇಗೆ ನಿರ್ವಹಿಸುತ್ತೀರಿ’ ಎಂದು ಕೇಳಲಾದ ಪ್ರಶ್ನೆಗೆ ಆ್ಯಂಡ್ರಿಯಾ, ‘ಈ ಸ್ಥಿತಿಯನ್ನು ನಿಭಾಯಿಸಲು ಯಾವುದೇ ಪರಿಪೂರ್ಣ ಮಾರ್ಗವಿಲ್ಲ. ಆದರೆ, ಪರಿಸ್ಥಿತಿ ಇಷ್ಟು ದೊಡ್ಡ ಸ್ವರೂಪ ಪಡೆಯುವ ಮುನ್ನವೇ ನಾನು ಲಾಕ್‌ಡೌನ್ ಜಾರಿಗೆ ತರುತ್ತಿದ್ದೆ. ಏಕೆಂದರೆ ಈಗಾಗಲೇ ನಾವು ಹಲವರನ್ನು ಕಳೆದುಕೊಂಡಿದ್ದೇವೆ. ಆ ಜೀವಗಳನ್ನು ಮರಳಿ ಪಡೆಯಲಾಗದು. ಹಾಗಾಗಿ, ನಮ್ಮ ಜನರ ಸುರಕ್ಷತೆಯನ್ನು ನಾವೇ ಕೈಗೊಳ್ಳಬೇಕು. ಆರಂಭಿಕ ಹಂತದಲ್ಲೇ ನಾನು ಕಾಳಜಿ ವಹಿಸುತ್ತಿದ್ದೆ’ ಎಂದು ಉತ್ತರಿಸಿದರು.

ಸೌಂದರ್ಯದ ವ್ಯಾಖ್ಯಾನವೇನು ಎನ್ನುವ ಪ್ರಶ್ನೆಗೆ, ‘ನಾವು ಹೆಚ್ಚು ಮುಂದುವರಿದ ಸಮಾಜದಲ್ಲಿ ವಾಸಿಸುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ಸೌಂದರ್ಯವೊಂದೇ ನಾವು ನೋಡುವ ಏಕೈಕ ಮಾರ್ಗವಾಗಿದೆ ಆದರೆ, ನನ್ನ ದೃಷ್ಟಿಯಲ್ಲಿ ಸೌಂದರ್ಯ ಎನ್ನುವುದು ಬರೀ ನೋಡುವ ದೃಷ್ಟಿಕೋನ ಮಾತ್ರವಲ್ಲ, ಅದು ನಮ್ಮ ಹೃದಯದಲ್ಲಿ ಮತ್ತು ನಮ್ಮನ್ನು ನಾವು ನಡೆಸಿಕೊಳ್ಳುವ ರೀತಿಯಲ್ಲಿ ಹೊರಹೊಮ್ಮುವಂಥದ್ದು’ ಎಂದು ಆ್ಯಂಡ್ರಿಯಾ ಉತ್ತರಿಸಿದರು.

ಮೂರನೇ ರನ್ನರ್ ಅಪ್ ಆದ ಭಾರತದ ಸುಂದರಿ ಆ್ಯಡ್ಲಿನ್‌ಕಸ್ತಲಿನೊ ಅವರು, ‘ಕೋವಿಡ್ ಎರಡನೇ ಅಲೆಯ ಕಷ್ಟದ ಸಮಯದಲ್ಲಿಯೂ ದೇಶವು ನೀಡಿದ ಬೆಂಬಲ ಮತ್ತು ತೋರಿರುವ ಪ್ರೀತಿಗಾಗಿ ನಾನು ಕೃತಜ್ಞಳಾಗಿರುವೆ’ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಮಿಸ್ ದಿವಾ ಯೂನಿವರ್ಸ್ ಇಂಡಿಯಾ’ ತನ್ನ ಟ್ವಿಟ್ಟರ್ ಪುಟದಲ್ಲಿ ಆ್ಯಡ್ಲಿನ್‌ ಅವರಿಗೆ ಅಭಿನಂದನೆ ಸಲ್ಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.