ADVERTISEMENT

ಭಾರತದಿಂದ ಮಂಗೋಲಿಯಾಕ್ಕೆ ರವಾನೆಯಾದ ಬುದ್ಧನ ಅವಶೇಷ ಪ್ರದರ್ಶನಕ್ಕೆ ಸಕಲ ಸಿದ್ಧತೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಜೂನ್ 2022, 16:43 IST
Last Updated 12 ಜೂನ್ 2022, 16:43 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಉಲಾನ್‌ಬಾತರ್‌ (ಮಂಗೋಲಿಯಾ): ಕೇಂದ್ರ ಸಚಿವ ರಿಜಿಜು ನೇತೃತ್ವದ ನಿಯೋಗವು ಭಾರತದಿಂದ ಸೋಮವಾರ ತರಲಿರುವ ಬುದ್ಧನ ಪವಿತ್ರ ಕಪಿಲವಸ್ತುವನ್ನು (ಅವಶೇಷ) ಪ್ರದರ್ಶಿಸಲು ಮಂಗೋಲಿಯಾದ ಉಲಾನ್‌ಬಾತರ್‌ನ ‘ಗಂಡೆನ್ ತೆಗ್ಚೆನ್ಲಿಂಗ್ ಮಠ’ವು ಸಕಲ ಸಿದ್ಧತೆಗಳನ್ನು ನಡೆಸಿದೆ.

ಜೂನ್‌ 14ರಂದು ಮಂಗೋಲಿಯಾದಲ್ಲಿ ನಡೆಯಲಿರುವ ಬುದ್ಧ ದಿನದಲ್ಲಿ ಪವಿತ್ರ ಅವಶೇಷಗಳನ್ನು ಪ್ರದರ್ಶನಕ್ಕೆ ಇರಿಸಲಾಗುತ್ತದೆ.

‘ಇದು ಐತಿಹಾಸಿ ಸನ್ನಿವೇಶ. ಮಂಗೋಲಿಯನ್ನರು ಇದಕ್ಕೆ ಸಾಕ್ಷಿಯಾಗುತ್ತಿದ್ದಾರೆ. ಬುದ್ಧನ ಆಶೀರ್ವಾದ ಪಡೆಯಲು ಇದು ನಮಗೆ ಅತ್ಯಮೂಲ್ಯ ಅವಕಾಶ. ಭಾರತ ಮತ್ತು ಮಂಗೋಲಿಯಾ ಭೌಗೋಳಿಕವಾಗಿ ದೂರವಾಗಿದ್ದರೂ, ಪರಂಪರಿಕವಾಗಿ ಬೆಸೆದುಕೊಂಡಿವೆ’ ಎಂದು ಮಠದ ಆಡಳಿತ ಮಂಡಳಿ ಸದಸ್ಯ ಮುಂಕ್ಬಾತರ್ ಬಚುಲುನ್ ಹೇಳಿದ್ದಾರೆ.

ADVERTISEMENT

’ಬೌದ್ಧ ಧರ್ಮ ಎರಡೂ ದೇಶಗಳನ್ನು ಬೆಸೆದಿದೆ. 29 ವರ್ಷಗಳ ನಂತರ ಇಲ್ಲಿಗೆ ಬರುತ್ತಿರುವ ಬುದ್ಧನ ಅವಶೇಷಗಳು ಆ ಬೆಸುಗೆಯನ್ನು ಗಟ್ಟಿ ಮಾಡಲಿದೆ. ಭಾರತದ ವರ್ಚಸ್ಸು ಹಿಗ್ಗಲಿದೆ. ಇದು ಅತ್ಯಂತ ಪ್ರಮುಖ ರಾಜತಾಂತ್ರಿಕ ಸನ್ನಿವೇಶವಾಗಲಿದೆ‘ ಎಂದು ಮಂಗೋಲಿಯಾದಲ್ಲಿರುವ ಭಾರತೀಯ ರಾಯಭಾರಿ ಎಂಪಿ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

‘ಕಪಿಲವಸ್ತುವನ್ನು (ಬುದ್ಧನ ಅವಶೇಷಗಳು) ರಾಷ್ಟ್ರೀಯ ವಸ್ತು ಸಂಗ್ರಹಾಲಯದಿಂದ ಸಂಪೂರ್ಣವಾಗಿ ಸಾಗಿಸುತ್ತಿಲ್ಲ. ಮಂಗೋಲಿಯಾ ಸರ್ಕಾರದ ವಿಶೇಷ ಕೋರಿಕೆಯ ಮೇರೆಗೆ, 11 ದಿನಗಳ ಪ್ರದರ್ಶನಕ್ಕಾಗಿ ಬುದ್ಧನ ಅವಶೇಷಗಳನ್ನು ಮಂಗೋಲಿಯಾಗೆ ಕಳುಹಿಸಲಾಗುತ್ತಿದೆ’ ಎಂದು ಸಚಿವ ರಿಜುಜು ಈ ಹಿಂದೆ ಹೇಳಿದ್ದರು.

ಪವಿತ್ರ ಅವಶೇಷಗಳನ್ನು ಭಾರತೀಯ ವಾಯುಪಡೆಯ ಸಿ–17 ಗ್ಲೋಬ್‌ ಮಾಸ್ಟರ್ ಸಾಗಣೆ ವಿಮಾನದಲ್ಲಿ ಕಳುಹಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.