ADVERTISEMENT

ಮ್ಯಾನ್ಮಾರ್‌ನಲ್ಲಿ ಭೂಕುಸಿತ: 52 ಸಾವು

ಸಾವಿರಾರು ಮಂದಿ ನಿರಾಶ್ರಿತರು l ಕುಸಿದ ಸೇತುವೆಗಳು l ಪ್ರವಾಹ ಪೀಡಿತ ಪ್ರದೇಶದ ಸಂತ್ರಸ್ತರ ರಕ್ಷಣೆಗೆ ಸೇನೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2019, 19:01 IST
Last Updated 11 ಆಗಸ್ಟ್ 2019, 19:01 IST
ಪ್ರವಾಹ ಸ್ಥಿತಿ ತಲೆದೋರಿ ಸಾವಿರಾರು ಜನರು ನಿರಾಶ್ರಿತರಾಗಿರುವ ಮ್ಯಾನ್ಮಾರ್‌ನಲ್ಲಿನ ಮೊನ್‌ ರಾಜ್ಯದ ಯೆ ಪಟ್ಟಣದ ನೋಟ (ಎಡಚಿತ್ರ). ಕರಾಚಿಯಲ್ಲಿ ಜಲಾವೃತಗೊಂಡ ರಸ್ತೆಯಲ್ಲಿ ದಾಟಲು ಹರಸಾಹಸ ಮಾಡಿದ ನಾಗರಿಕರು ಎಪಿ/ಪಿಟಿಐ ಚಿತ್ರ
ಪ್ರವಾಹ ಸ್ಥಿತಿ ತಲೆದೋರಿ ಸಾವಿರಾರು ಜನರು ನಿರಾಶ್ರಿತರಾಗಿರುವ ಮ್ಯಾನ್ಮಾರ್‌ನಲ್ಲಿನ ಮೊನ್‌ ರಾಜ್ಯದ ಯೆ ಪಟ್ಟಣದ ನೋಟ (ಎಡಚಿತ್ರ). ಕರಾಚಿಯಲ್ಲಿ ಜಲಾವೃತಗೊಂಡ ರಸ್ತೆಯಲ್ಲಿ ದಾಟಲು ಹರಸಾಹಸ ಮಾಡಿದ ನಾಗರಿಕರು ಎಪಿ/ಪಿಟಿಐ ಚಿತ್ರ   

ಮೌಲಾಮೈನ್ (ಎಎಫ್‌ಪಿ): ಇಲ್ಲಿನ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಕ್ಕಾಗಿ ಮ್ಯಾನ್ಮಾರ್‌ ಸೇನೆಯ ನೆರವು ಪಡೆಯಲಾಗಿದೆ. ಭೂಕುಸಿತದಿಂದಾಗಿ 52 ಜನರು ಸತ್ತಿದ್ದರೆ, ಪ್ರವಾಹದಿಂದ ನೀರಿನ ಮಟ್ಟ ಏರಿದಂತೆ ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ.

ಪ್ರತಿ ವರ್ಷ ಮುಂಗಾರು ಹಂಗಾಮಿನಲ್ಲಿ ಪ್ರವಾಹ ಪರಿಸ್ಥಿತಿಯು ಮ್ಯಾನ್ಮಾರ್‌ ಅನ್ನು ಬಾಧಿಸುತ್ತಿದೆ. ಮನೆಗಳು ಮುಳುಗುವುದು, ಭೂಕುಸಿತ, ನಾಗರಿಕರು ನಿರಾಶ್ರಿತರಾಗುವುದು ಸಾಮಾನ್ಯವಾಗಿದೆ.

ಈ ವರ್ಷದ ಪರಿಸ್ಥಿತಿ ಗಂಭೀರವಾಗಿದೆ. ಪರಿಹಾರ ಕಾರ್ಯ ಸರ್ಕಾರಕ್ಕೆ ಸವಾಲಾಗಿದೆ. ದಕ್ಷಿಣ ಭಾಗದ ಮೊನ್‌ ರಾಜ್ಯದಲ್ಲಿ ಭೂಕುಸಿತ, ಭಾರಿ ಪ್ರವಾಹ ಎದುರಾಗಿದ್ದು, ಹಲವು ಪಟ್ಟಣಗಳೇ ಮುಳುಗಡೆಯಾಗಿವೆ.

ADVERTISEMENT

ನೂರಾರು ಸಿಬ್ಬಂದಿ ಅವಶೇಷಗಳಡಿ ಹುದುಗಿರುವ ಮೃತರ ದೇಹಗಳಿಗೆ ಹುಡುಕಾಟ ನಡೆಸಿದ್ದಾರೆ. ಭಾನುವಾರ ಮೂರು ಶವಗಳು ಪತ್ತೆಯಾಗಿವೆ. ಮೃತರ ಸಂಖ್ಯೆ 52ಕ್ಕೆ ಏರಿದೆ ಎಂದು ಮ್ಯಾನ್ಮಾರ್ ಅಗ್ನಿಶಾಮಕ ಸೇವಾ ಇಲಾಖೆ ಫೇಸ್‌ಬುಕ್‌ ಪುಟದಲ್ಲಿ ಪ್ರಕಟಿಸಿದೆ.

ಮೊನ್‌, ಕರೆನ್‌, ಕಾಚಿನ್ ರಾಜ್ಯಗಳ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗಿದೆ. ರಸ್ತೆಗಳು ಜಲಾವೃತಗೊಂಡಿದ್ದು, ಹಲವು ಸೇತುವೆಗಳು ಕುಸಿದಿವೆ. ದೋಣಿ ಬಳಸಿಜನರನ್ನುಸುರಕ್ಷಿತ ತಾಣಗಳಿಗೆ ಕರೆದೊಯ್ಯಲಾಗುತ್ತಿದೆ. ಪರಿಸ್ಥಿತಿ ಗಂಭೀರವಾದಂತೆ ರಕ್ಷಣೆಗೆ ಸೇನೆಯ ನೆರವನ್ನು ಪಡೆಯಲಾಗಿದೆ.

‘ಸೇನೆಯ ಪ್ರಾದೇಶಿಕ ಕಮಾಂಡರ್‌ಗಳು ರಕ್ಷಣೆಯ ಉಸ್ತುವಾರಿ ವಹಿಸಿದ್ದಾರೆ. ಸಂತ್ರಸ್ತರಿಗೆ ಆಹಾರ ಪೂರೈಸಲು ಹೆಲಿಕಾಪ್ಟರ್ ನೆರವು ಪಡೆಯಲಾಗಿದೆ. ಗಂಭೀರ ಸ್ಥಿತಿಯಿರುವ ಮೊನ್‌ ರಾಜ್ಯದಲ್ಲಿ ರಕ್ಷಣಾ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ‘ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.