ADVERTISEMENT

ಹೆಲಿಕಾಪ್ಟರ್ ದುರಂತದಲ್ಲಿ ಬಿಪಿನ್‌ ರಾವತ್‌ ಸಾವು: ವಿವಿಧ ದೇಶಗಳ ಗಣ್ಯರ ಕಂಬನಿ

ಪಿಟಿಐ
Published 9 ಡಿಸೆಂಬರ್ 2021, 12:08 IST
Last Updated 9 ಡಿಸೆಂಬರ್ 2021, 12:08 IST
ಬಿಪಿನ್‌ ರಾವತ್‌
ಬಿಪಿನ್‌ ರಾವತ್‌    

ವಾಷಿಂಗ್ಟನ್‌/ಕಠ್ಮಂಡು/ಜೆರುಸಲೇಂ:ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ ಪತನ ದುರಂತದಲ್ಲಿ ಸೇನಾ ಪಡೆಗಳ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ಮೃತಪಟ್ಟಿದ್ದಕ್ಕೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ, ನೇಪಾಳದ ಪ್ರಧಾನಿ, ಇಸ್ರೇಲ್ ಪ್ರಧಾನಿ ಸೇರಿದಂತೆ ವಿಶ್ವದ ವಿವಿಧ ದೇಶಗಳ ಗಣ್ಯರು ಕಂಬನಿ ಮಿಡಿದಿದ್ದಾರೆ.

‘ಭಾರತದ ರಕ್ಷಣಾ ಪಡೆಗಳ ಮೊದಲ ಮುಖ್ಯಸ್ಥರಾದ ರಾವತ್ ಅವರು ಅಸಾಧಾರಣ ನಾಯಕರಾಗಿದ್ದರು. ಅಮೆರಿಕದ– ಭಾರತದ ರಕ್ಷಣಾ ಸಂಬಂಧಗಳನ್ನು ಬಲಪಡಿಸಲು ಮತ್ತು ದ್ವಿಪಕ್ಷೀಯ ಕಾರ್ಯತಂತ್ರದ ಪಾಲುದಾರಿಕೆಯನ್ನು ಗಟ್ಟಿಗೊಳಿಸಲು ಸಹಾಯ ಮಾಡಿದ್ದರು’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್‌ ಬಣ್ಣಿಸಿದ್ದಾರೆ.

ನೇಪಾಳ ಪ್ರಧಾನಿ ಶೇರ್ ಬಹಾದ್ದೂರ್ ದೇವುಬಾ ಅವರು, ‘ಅಪಘಾತದಲ್ಲಿ ರಾವತ್‌ ಅವರು ಮೃತಪಟ್ಟಿರುವುದಕ್ಕೆ ತೀವ್ರ ದುಃಖವಾಗಿದೆ’ ಎಂದು ಟ್ವೀಟ್‌ ಮೂಲಕ ಕಂಬನಿ ಮಿಡಿದಿದ್ದಾರೆ.

ADVERTISEMENT

‘ಜನರಲ್ ರಾವತ್ ಅವರು ನೇಪಾಳ ಸೇನೆಯ ನಿಜವಾದ ಸ್ನೇಹಿತ ಆಗಿದ್ದರು’ ಎಂದು ನೇಪಾಳ ಸೇನಾ ಮುಖ್ಯಸ್ಥ ಜನರಲ್‌ ಪ್ರಭು ರಾಮ್‌ ಶರ್ಮಾ ಸ್ಮರಿಸಿದ್ದಾರೆ.

ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್‌ ರಾವತ್‌ ಸೇವೆ ಸ್ಮರಿಸಿ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.