ADVERTISEMENT

ಉತ್ತರ ಕೊರಿಯಾ: ಶಂಕಿತ ಕೊರೊನಾ ಪ್ರಕರಣಗಳ ಸಂಖ್ಯೆ 20 ಲಕ್ಷಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 19 ಮೇ 2022, 13:05 IST
Last Updated 19 ಮೇ 2022, 13:05 IST

ಸೋಲ್‌(ಎ‍ಪಿ): ಉತ್ತರ ಕೊರಿಯಾದಲ್ಲಿ ಗುರುವಾರ ಹೊಸದಾಗಿ 2,62,270 ಮಂದಿಯಲ್ಲಿ ಕೋವಿಡ್‌ನ ಶಂಕಿತ ಲಕ್ಷಣಗಳು ಕಂಡು ಬಂದಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 20 ಲಕ್ಷಕ್ಕೆ ತಲುಪಿದೆ.

ಕಳೆದ 24 ಗಂಟೆಗಳಲ್ಲಿ ಒಬ್ಬರು ಸಾವಿಗೀಡಾಗಿದ್ದು, ಮೃತರ ಒಟ್ಟು ಸಂಖ್ಯೆ 63ಕ್ಕೆ ಏರಿಕೆಯಾಗಿದೆ.

ದೇಶದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಆಡಳಿತಕ್ಕೆ ಧಕ್ಕೆ ಆಗಬಾರದು ಎಂದು ಪ್ರಕರಣಗಳ ಸಂಖ್ಯೆ ಕಡಿಮೆ ಇರುವುದಾಗಿ ಬಿಂಬಿಸಲಾಗುತ್ತಿದೆ. ಸೋಂಕು ಪತ್ತೆ ಪರೀಕ್ಷೆಗೆ ಸಂಪನ್ಮೂಲದ ಕೊರತೆ ಇರುವುದು ಸಹ ಇದಕ್ಕೆ ಕಾರಣ.ಪ್ರಕರಣಗಳ ಸಂಖ್ಯೆ ಹಾಗೂ ಸಾವಿನ ಸಂಖ್ಯೆಯ ವಾಸ್ತವಾಂಶವನ್ನು ಮುಚ್ಚಿಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ADVERTISEMENT

ಕಳೆದ ಏಪ್ರಿಲ್‌ನಿಂದ ದೇಶದಲ್ಲಿ 19.8 ಲಕ್ಷ ಮಂದಿ ಜ್ವರದ ಲಕ್ಷಣದೊಂದಿಗೆ ಅನಾರೋಗ್ಯದಿಂದ ಬಳಲುತ್ತಿದ್ದಾರೆ. 7,40,160 ಮಂದಿಯನ್ನು ಚಿಕಿತ್ಸೆಗಾಗಿ ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಪ್ರಕರಣಗಳು ಕೊರೊನಾ ರೂಪಾಂತರಿ ಓಮೈಕ್ರಾನ್‌ ತಳಿಯದ್ದಾಗಿರಬಹುದು ಎಂದು ಹೊರ ದೇಶದವರು ನಂಬಿದ್ದಾರೆ.

ಸೋಂಕು ಹರಡುತ್ತಿರುವುದನ್ನು ‘ದೊಡ್ಡ ದಂಗೆ’ ಎಂದು ಬಣ್ಣಿಸಿರುವ ಕಿಮ್‌, ಸೋಂಕು ಹರಡುವಿಕೆ ತಡೆಯಲು ಕಠಿಣ ನಿಮಯ ಮತ್ತು ಗರಿಷ್ಠ ಮುನ್ನಚ್ಚೆರಿಕೆ ಕ್ರಮಗಳನ್ನು ಜಾರಿಗೊಳಿಸಿದ್ದಾರೆ. ಸೋಂಕಿನ ಲಕ್ಷಣ ಕಾಣಿಸಿಕೊಂಡವರು ಮತ್ತು ಶಂಕಿತ ಕೋವಿಡ್‌ ರೋಗಿಗಳನ್ನು ಕ್ವಾರಂಟೈನ್‌ ಮಾಡಲು ಹತ್ತು ಲಕ್ಷ ಕಾರ್ಯಕರ್ತರನ್ನು ನೇಮಿಸಲಾಗಿದೆ. ಔಷಧಿಗಳನ್ನು ವಿತರಿಸಲು ಸೇನೆಗೆ ಆದೇಶಿಸಲಾಗಿದೆ.

ಶಾಂಘೈನಲ್ಲಿ ಕೋವಿಡ್‌ ನಿಯಮ ಸಡಿಲಿಕೆ

ಬೀಜಿಂಗ್‌: ಆರು ತಿಂಗಳಿಂದ ಲಾಕ್‌ಡೌನ್‌ನಲ್ಲಿರುವ ಚೀನಾದ ವಾಣಿಜ್ಯ ರಾಜಧಾನಿ ಶಾಂಘೈನಲ್ಲಿ ಕೋವಿಡ್‌ನ ಹೊಸ ಪ್ರಕರಣಗಳು ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಂತ ಹಂತವಾಗಿ ಕೋವಿಡ್‌ ನಿಯಮಗಳನ್ನು ಸಡಿಲಗೊಳಿಸುತ್ತಿದ್ದು, 20 ಸುರಂಗ ಮಾರ್ಗಗಳನ್ನು ಭಾನುವಾರ ತೆರೆಯಲಾಗುತ್ತದೆ.

ನಗರ ಕೇಂದ್ರ, ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣ ಸೇರಿದಂತೆ 273 ಮಾರ್ಗಗಳಲ್ಲಿ ಬಸ್‌ ಸಂಚಾರವನ್ನು ಪುನರಾರಂಭಿಸಲಿದೆ. ಇದಕ್ಕೂ ಮುನ್ನ ಹಗಲಿನ ಸಮಯದಲ್ಲಿ ಪ್ರಾಯೋಗಿಕವಾಗಿ ಬಸ್‌ ಸಂಚಾರ ಆರಂಭವಾಗಲಿದೆ.

ಜರ್ಮನಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಕಡ್ಡಾಯ:

ಆರೋಗ್ಯ ಕಾರ್ಯಕರ್ತರು ಕಡ್ಡಾಯವಾಗಿ ಲಸಿಕೆ ಪಡೆಯಬೇಕೆಂಬ ನಿಯಮವನ್ನು ಜರ್ಮನಿಯ ಸುಪ್ರೀಂ ಕೋರ್ಟ್‌ ಅನುಮೋದಿಸಿದೆ. ಆರೋಗ್ಯ ಕಾರ್ಯಕರ್ತರ ಹಕ್ಕುಗಳ ಉಲ್ಲಂಘನೆಗಿಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ರಕ್ಷಣೆ ಅಗತ್ಯವಾಗಿದೆ ಎಂದು ಹೇಳಿದೆ. ದೇಶದ ಶೇ 76ರಷ್ಟು ಮಂದಿ ಎರಡೂ ಡೋಸ್‌ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.