ರಷ್ಯಾದ 40 ವಾರ್ ಜೆಟ್ ಉಡಾಯಿಸಿದ ಉಕ್ರೇನ್: 4 ಸಾವಿರ ಕಿಮೀ ನುಗ್ಗಿ ಡ್ರೋನ್ ಡಾಳಿ!
ಬೆಂಗಳೂರು: ಉಕ್ರೇನ್ ಗಡಿಯಿಂದ ಸುಮಾರು 4 ಸಾವಿರ ಕಿ.ಮೀ ದೂರ ಇರುವ ರಷ್ಯಾದ ಸೈಬೀರಿಯಾದಲ್ಲಿನ ಸೇನಾನೆಲೆ ಮೇಲೆ ಉಕ್ರೇನ್ ಪಡೆಗಳು ಭಾನುವಾರ ಡ್ರೋನ್ ದಾಳಿ ನಡೆಸಿರುವುದು ರಷ್ಯಾವನ್ನು ತೀವ್ರವಾಗಿ ಕೆರಳಿಸಿದೆ.
ಈ ದಾಳಿಯಲ್ಲಿ ಯುಸೊಲ್‌ಸ್ಕಿ ಜಿಲ್ಲೆಯ ಸ್ರೆಡ್ನಿ ಗ್ರಾಮದ ಬಳಿಯ ವಾಯುನೆಲೆಗಳಲ್ಲಿ ನಿಂತಿದ್ದ ರಷ್ಯಾದ 40ಕ್ಕೂ ಅಧಿಕ ಯುದ್ಧವಿಮಾನಗಳು ನಾಶವಾಗಿವೆ ಎನ್ನಲಾಗಿದೆ.
ರಷ್ಯಾದ ಮೇಲೆ ಈ ರೀತಿಯ ದೊಡ್ಡ ದಾಳಿಯನ್ನು ಉಕ್ರೇನ್‌ನಲ್ಲಿ ಸಂಭ್ರಮಿಸಲಾಗುತ್ತಿದೆ. ಇದು ರಷ್ಯಾಕ್ಕೆ ಮುಟ್ಟಿನೋಡಿಕೊಳ್ಳುವಂತಹ ಪೆಟ್ಟು ಎಂದು ಚರ್ಚೆಯಾಗುತ್ತಿದೆ.
ಉಕ್ರೇನ್ ನಡೆಸಿರುವ ಬಹುದೊಡ್ಡ ದಾಳಿಯನ್ನು ‘ಆಪರೇಷನ್ ಸ್ಪೈಡರ್ ವೆಬ್ (“Spiderweb”) ಎಂದು ಕರೆಯಲಾಗುತ್ತಿದ್ದು ಜಗತ್ತಿನ ಸೇನಾನಾಯಕರ ಗಮನ ಸೆಳೆದಿದೆ.
‘ಉಕ್ರೇನ್ ಗಡಿಯಿಂದ ಬಹಳ ದೂರದಲ್ಲಿರುವ ಈ ವಾಯುನೆಲೆಗಳನ್ನು ಗುರಿಯಾಗಿಸಿ ನಡೆಸಿದ ಕಾರ್ಯಾಚರಣೆ ಯನ್ನು ಕಾರ್ಯಗತಗೊಳಿಸಲು ಒಂದರಿಂದ ಒಂದೂವರೆ ವರ್ಷದಿಂದ ಸಿದ್ಧತೆ ನಡೆದಿತ್ತು. ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರೇ ಸ್ವತಃ ಈ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದ್ದರು’ ಎಂದು ಅಧಿಕಾರಿ ಯೊಬ್ಬರು ತಿಳಿಸಿದ್ದಾರೆ.
ಇನ್ನು ದಾಳಿಯನ್ನು ಕೊಂಡಾಡಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಸೇನಾ ಜನರಲ್ ಮುಲೈಕ್ ಅವರನ್ನು ತಮ್ಮ ಕಚೇರಿಗೆ ಕರೆಯಿಸಿ ಅಭಿನಂದಿಸಿದ್ದಾರೆ. ವಿಶೇಷವೆಂದರೆ ಈ ವೇಳೆ ಝಲನೆಸ್ಕಿ ಮುಖದಲ್ಲಿ ನಗು ಮೂಡಿತ್ತು.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು ಇದು ಉಕ್ರೇನ್‌ನ ವೈಭವ ಎಂದು ಹೇಳಿದ್ದಾರೆ.
ಇದು ಸಣ್ಣಮಾತಲ್ಲ. ಇಂತಹ ನಿಖರ ಕಾರ್ಯಾಚರಣೆಗೆ ಒಂದೂವರೆ ವರ್ಷ ನಮ್ಮ ಸೇನಾಪಡೆಗಳು ಶ್ರಮಪಟ್ಟಿವೆ. ರಷ್ಯಾಕ್ಕೆ ನಮ್ಮ ಶಕ್ತಿ ಏನು ಎಂಬುದು ಅರ್ಥವಾಗಿದೆ. ಅವರೇ ಯುದ್ಧ ಶುರು ಮಾಡಿದ್ದು, ಇನ್ನಾದರೂ ಅವರೇ ಯುದ್ಧ ನಿಲ್ಲಿಸಬೇಕು ಎಂದಿದ್ದಾರೆ.
ಇನ್ನೊಂಡೆಡೆ ಕೆರಳಿರುವ ರಷ್ಯಾ, ಉಕ್ರೇನ್ ಮೇಲೆ ಡ್ರೋನ್ ದಾಳಿಯನ್ನು ಮುಂದುವರೆಸಿದೆ. ಇತ್ತೀಚಿನ ಮಾಹಿತಿ ಪ್ರಕಾರ ರಷ್ಯಾ, ಉಕ್ರೇನ್‌ನ 150 ಡ್ರೋನ್‌ಗಳನ್ನು ಹೊಡೆದುರಳಿಸಿದೆ. ರಷ್ಯಾ ನಡೆಸಿದ ದಾಳಿಗೆ ಉಕ್ರೇನ್‌ನಲ್ಲಿ ಏಳು ಜನ ಭಾನುವಾರ ಮೃತಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.