
(ಚಿತ್ರ –X/@ARCSAfghanistan)
ಕಾಬೂಲ್: ಉತ್ತರ ಅಫ್ಗಾನಿಸ್ತಾನದ ಮಜಾರ್-ಎ ಶರೀಫ್ ನಗರದ ಬಳಿ ಇಂದು (ಸೋಮವಾರ) ಮುಂಜಾನೆ 6.3 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಕನಿಷ್ಠ 20 ಮಂದಿ ಮೃತಪಟ್ಟಿದ್ದಾರೆ. 300ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಪ್ರಾಂತೀಯ ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು 5 ಲಕ್ಷ ಜನಸಂಖ್ಯೆ ಹೊಂದಿರುವ ಮಜಾರ್-ಎ ಶರೀಫ್ ನಗರದ ಬಳಿ 28 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಭೂ ವಿಜ್ಞಾನ ಸಂಸ್ಥೆ ತಿಳಿಸಿದೆ.
ಭೂಕಂಪದಲ್ಲಿ ಸುಮಾರು 320 ಜನ ಗಾಯಗೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯದ ವಕ್ತಾರ ಶರಫತ್ ಜಮಾನ್ ಹೇಳಿದ್ದಾರೆ.
ಹೆಚ್ಚಿನ ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಿ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಅಫ್ಘಾನಿಸ್ತಾನದ ವಿಪತ್ತು ನಿರ್ವಹಣಾ ಸಂಸ್ಥೆಯ ವಕ್ತಾರ ಯೂಸುಫ್ ಹಮ್ಮದ್ ಹೇಳಿದ್ದಾರೆ.
ಸಾವುನೋವು ಮತ್ತು ಹಾನಿ ಬಗ್ಗೆ ಶೀಘ್ರವೇ ಖಚಿತ ಮಾಹಿತಿ ಹಂಚಿಕೊಳ್ಳಲಾಗುವುದು ಎಂದು ದೇಶದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.
2023ರಲ್ಲಿ ದೇಶದಲ್ಲಿ ಸಂಭವಿಸಿದ್ದ ಭೂಕಂಪದಲ್ಲಿ ಕನಿಷ್ಠ ಸಾವಿರ ಮಂದಿ ಸಾವಿಗೀಡಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.