ADVERTISEMENT

ತಿಮೋರ್‌ ಜತೆ ಉತ್ತಮ ಸ್ನೇಹ ಸಂಬಂಧ: ರಾಷ್ಟ್ರಪತಿ ದ್ರೌಪದಿ ಮುರ್ಮು ಅಭಿಮತ

ಪಿಟಿಐ
Published 10 ಆಗಸ್ಟ್ 2024, 15:19 IST
Last Updated 10 ಆಗಸ್ಟ್ 2024, 15:19 IST
ತಿಮೋರ್ ಲೆಸ್ಟ್‌ನ ಅಧ್ಯಕ್ಷ ಜೊಸ್‌ ರಮೊಸ್‌ ಹೊರ್ಟಾ ಅವರು ಶನಿವಾರ ಡಿಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರ ‘ಗ್ರ್ಯಾಂಡ್‌ ಕಾಲರ್‌ ಆಫ್‌ ದ ಆರ್ಡರ್‌ ಆಫ್‌ ತಿಮೊರ್‌ ಲೆಸ್ಟ್’ ಅನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ನೀಡಿ ಗೌರವಿಸಿದರು–ಪಿಟಿಐ ಚಿತ್ರ
ತಿಮೋರ್ ಲೆಸ್ಟ್‌ನ ಅಧ್ಯಕ್ಷ ಜೊಸ್‌ ರಮೊಸ್‌ ಹೊರ್ಟಾ ಅವರು ಶನಿವಾರ ಡಿಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರ ‘ಗ್ರ್ಯಾಂಡ್‌ ಕಾಲರ್‌ ಆಫ್‌ ದ ಆರ್ಡರ್‌ ಆಫ್‌ ತಿಮೊರ್‌ ಲೆಸ್ಟ್’ ಅನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ನೀಡಿ ಗೌರವಿಸಿದರು–ಪಿಟಿಐ ಚಿತ್ರ   

ಡಿಲಿ(ತಿಮೋರ್‌ ಲೆಸ್ಟ್‌): ‘ಪ್ರಜಾಪ್ರಭುತ್ವ ಹಾಗೂ ಬಹುತ್ವದ ಮೌಲ್ಯಗಳ ಹಂಚಿಕೆಯ ಬದ್ಧತೆಯ ಆಧಾರದ ಮೇಲೆ ತಿಮೋರ್‌ ಲೆಸ್ಟ್‌ ದೇಶದ ‌ಜತೆಗೆ ಭಾರತವು ಉತ್ತಮ ಸ್ನೇಹ ಸಂಬಂಧವನ್ನು ಬಯಸುತ್ತದೆ’ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ಇಲ್ಲಿ ತಿಳಿಸಿದರು.

ತಿಮೋರ್ ಲೆಸ್ಟ್‌ನ ಅಧ್ಯಕ್ಷ ಜೊಸ್‌ ರಮೊಸ್‌ ಹೊರ್ಟಾ ಜೊತೆಗೆ ದ್ವಿಪಕ್ಷೀಯ ಸಹಕಾರ ಸಂಬಂಧ ವೃದ್ಧಿ ಕುರಿತು ವಿಸ್ತೃತ ಚರ್ಚೆ ನಡೆಸಿದ ಬಳಿಕ ಈ ವಿಷಯ ತಿಳಿಸಿದರು.

ಶನಿವಾರ ಇಲ್ಲಿಗೆ ಬಂದಿಳಿದ ಮುರ್ಮು ಅವರನ್ನು ಅಧ್ಯಕ್ಷೀಯ ನಿವಾಸದಲ್ಲಿ ಗೌರವ ವಂದನೆ ನೀಡಿ ‌ಬರಮಾಡಿಕೊಳ್ಳಲಾಯಿತು. ಭಾರತದ ರಾಷ್ಟ್ರಪತಿಯೊಬ್ಬರು ಮೊಟ್ಟ ಮೊದಲ ಬಾರಿಗೆ ಈ ದೇಶಕ್ಕೆ ಭೇಟಿ ನೀಡಿದ ಗೌರವಕ್ಕೂ ಪಾತ್ರರಾದರು.

ADVERTISEMENT

ಈ ವೇಳೆ ತಿಮೋರ್ ಲೆಸ್ಟ್‌ನ ಅಧ್ಯಕ್ಷ ಜೊಸ್‌ ರಮೊಸ್‌ ಹೊರ್ಟಾ ಅವರು ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರ ‘ಗ್ರ್ಯಾಂಡ್‌ ಕಾಲರ್‌ ಆಫ್‌ ದ ಆರ್ಡರ್‌ ಆಫ್‌ ತಿಮೊರ್‌ ಲೆಸ್ಟ್’ ಅನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ನೀಡಿ ಗೌರವಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ಡಿಲಿಯಲ್ಲಿ ಭಾರತವು ಆದಷ್ಟು ಬೇಗ ತನ್ನ ಶಾಶ್ವತ ರಾಯಭಾರ ಕಚೇರಿಯನ್ನು ಆರಂಭಿಸಲಿದೆ. ಅದೇ ರೀತಿ, ತಿಮೋರ್‌ ಲೆಸ್ಟ್ ದೇಶವು ತನ್ನ ರಾಯಭಾರ ಕಚೇರಿಯನ್ನು ದೆಹಲಿಯಲ್ಲಿ ಆರಂಭಿಸುವುದನ್ನು ಭಾರತ ಎದುರು ನೋಡುತ್ತಿದೆ, ಮುಂದಿನ ದಿನಗಳಲ್ಲಿ ದೆಹಲಿ– ಡಿಲಿ ನಡುವಿನ ಗಟ್ಟಿಯಾದ ಸ್ನೇಹ ಸಂಬಂಧ ಬೆಳೆಯಲಿದೆ’ ಎಂದು ಭರವಸೆ ನೀಡಿದರು. 

‘ಐ.ಟಿ, ಡಿಜಿಟಲ್‌ ತಂತ್ರಜ್ಞಾನ, ಆರೋಗ್ಯ, ಔಷಧ ಕ್ಷೇತ್ರ, ಕೃಷಿ‌ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವೃದ್ಧಿ ಕುರಿತು ಉಭಯ ನಾಯಕರು ಮಾತುಕತೆ ನಡೆಸಿದರು’ ಎಂದು ವಿದೇಶಾಂಗ ಇಲಾಖೆ ವಕ್ತಾರ ರಣ್‌ಧೀರ್ ಜೈಸ್ವಾಲ್‌ ಅವರು ‘ಎಕ್ಸ್‌’ನಲ್ಲಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.