ADVERTISEMENT

ರಾಹುಲ್‌ಗೆ ತಂತ್ರಜ್ಞಾನದ ಆಳ ಜ್ಞಾನವಿದೆ: ಅಮೆರಿಕ ಉದ್ಯಮಿಗಳ ಪ್ರಶಂಸೆ

ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಕುರಿತು ಸಿಲಿಕಾನ್‌ ವ್ಯಾಲಿ ಉದ್ಯಮಿಗಳ ಜತೆ ಸಭೆ

ಪಿಟಿಐ
Published 4 ಜೂನ್ 2023, 13:20 IST
Last Updated 4 ಜೂನ್ 2023, 13:20 IST
ವಾಷಿಂಗ್ಟನ್‌ನ ನ್ಯಾಷನಲ್ ಪ್ರೆಸ್ ಕ್ಲಬ್‌ನಲ್ಲಿ ಪತ್ರಕರ್ತರೊಂದಿಗೆ ಸಂವಾದ ನಡೆಸಿದ ರಾಹುಲ್‌ ಗಾಂಧಿ
ವಾಷಿಂಗ್ಟನ್‌ನ ನ್ಯಾಷನಲ್ ಪ್ರೆಸ್ ಕ್ಲಬ್‌ನಲ್ಲಿ ಪತ್ರಕರ್ತರೊಂದಿಗೆ ಸಂವಾದ ನಡೆಸಿದ ರಾಹುಲ್‌ ಗಾಂಧಿ    

ಸಿಲಿಕಾನ್‌ ವ್ಯಾಲಿ: ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರಿಗೆ ತಂತ್ರಜ್ಞಾನದ ಬಗ್ಗೆ ಆಳವಾದ ಜ್ಞಾನ ಹೊಂದಿದ್ದಾರೆ. ಸಾಮಾನ್ಯ ಮನುಷ್ಯನ ಮತ್ತು ಔದ್ಯೋಗಿಕ ಕ್ಷೇತ್ರದ ಮೇಲೆ ಅದು ಬೀರುವ ಪರಿಣಾಮವನ್ನು ವಿವರಿಸಲು ಸಮರ್ಥರಿದ್ದಾರೆ ಎಂದು ಸಿಲಿಕಾನ್‌ ವ್ಯಾಲಿಯ ಸ್ಟಾರ್ಟ್‌ ಅಪ್‌ ಫಿಕ್ಸ್‌ನಿಕ್ಸ್‌ ಸಂಸ್ಥಾಪಕ ಶಾನ್‌ ಶಂಕರನ್‌ ಹೇಳಿದ್ದಾರೆ.

ಅಮೆರಿಕ ಪ್ರವಾಸದಲ್ಲಿರುವ ರಾಹುಲ್‌ ಗಾಂಧಿಯವರಿಗಾಗಿ ಕೃತಕ ಬುದ್ಧಿಮತ್ತೆ (ಎ.ಐ) ಮತ್ತು ಇತರ ಅತ್ಯಾಧುನಿಕ ತಂತ್ರಜ್ಞಾನಗಳ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸಿಲಿಕಾನ್ ವ್ಯಾಲಿಯ ಸ್ಟಾರ್ಟ್ ಅಪ್ ಉದ್ಯಮಿಗಳ ಜತೆ ಸಭೆಯನ್ನು ಭಾರತೀಯ ಅಮೆರಿಕನ್‌ ಉದ್ಯಮಿಯೂ ಆದ ಶಾನ್‌ ಶಂಕರನ್‌ ಆಯೋಜಿಸಿದ್ದರು.

‘ಅವರು (ರಾಹುಲ್‌) ಎಲ್ಲವನ್ನೂ ತಿಳಿದಿರುವುದಾಗಿ ಎಂದಿಗೂ ಹೇಳುವುದಿಲ್ಲ. ಆದರೆ, ಅವರಲ್ಲಿ ಕುತೂಹಲವಿತ್ತು (ಸಭೆಯ ಸಮಯದಲ್ಲಿ)  ಎಂದು ಶ್ಲಾಘಿಸಿದ್ದಾರೆ.

ADVERTISEMENT

ಕೃತಕ ಬುದ್ಧಿಮತ್ತೆಯಂತಹ ತಂತಜ್ಞಾನಗಳನ್ನು ನಿಷೇಧಿಸುವ ಬದಲು, ನಿಯಂತ್ರಿಸುವುದರ ಪರವಿದ್ದಾರೆ ರಾಹುಲ್‌ ಗಾಂಧಿ ಎಂದು ಶಂಕರನ್‌ ಹೇಳಿದ್ದಾರೆ. 

ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್‌ ಗಾಂಧಿ ಅವರು, ‘ಶಂಕರನ್‌ ಹೇಳಿದಂತೆ, ಇಂತಹ ತಂತ್ರಜ್ಞಾನವನ್ನು ಬ್ಯಾಂಕಿಂಗ್ ಸೇರಿ ವಿವಿಧ ಕ್ಷೇತ್ರಗಳಲ್ಲಿ ಅಳವಡಿಸಿಕೊಳ್ಳಲು ತಮ್ಮ ತಂದೆ ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಅನುಕರಿಸಲು ಪ್ರಯತ್ನಿಸುವೆ’ ಎಂದು ಹೇಳಿದರು. 

‘ಅವರು (ರಾಹುಲ್ ಗಾಂಧಿ) ಭಾರತದ ಪ್ರಧಾನಿಯಾದರೆ, ಅವರ ದೃಷ್ಟಿಕೋನದಲ್ಲಿ ನಾವೀನ್ಯತೆಗೆ (ಬೆಳವಣಿಗೆ ಮತ್ತು ಅಭಿವೃದ್ಧಿ) ಯಾವ ರೀತಿ ಮತ್ತಷ್ಟು ಒತ್ತು ನೀಡಬಹುದೆಂದು ಎದುರು ನೋಡುತ್ತಿದ್ದೇವೆ’ ಎಂದು ಶಂಕರನ್‌ ಹೇಳಿದರು.

‘ಕೃತಕ ಬುದ್ಧಿಮತ್ತೆ ಮತ್ತು ಮಾನವ ಅಭಿವೃದ್ಧಿ’ ವಿಷಯ ಕುರಿತು ಸಿಲಿಕಾನ್ ವ್ಯಾಲಿಯ ಸ್ಟಾರ್ಟ್‌ ಅಪ್‌ ಉದ್ಯಮಿಗಳೊಂದಿಗೆ ರಾಹುಲ್‌ ಗಾಂಧಿ ಅವರ ಸಂವಾದ ಕಾರ್ಯಕ್ರಮವನ್ನು ಶಂಕರನ್‌ ಆಯೋಜಿಸಿದ್ದರು. ಶಂಕರನ್‌ ಅವರ, ಸಿಲಿಕಾನ್‌ ವ್ಯಾಲಿ ಮೂಲದ ಫಿಕ್ಸ್‌ನಿಕ್ಸ್‌ ಸ್ಟಾರ್ಟ್‌ ಅಪ್‌ ಜಿಆರ್‌ಸಿ– ಸಂಬಂಧಿತ (ಆಡಳಿತ, ಅಪಾಯ, ಅನುಸರಣೆ) ನೀತಿ–ನಿರ್ಧಾರಗಳನ್ನು ಸರಳೀಕರಿಸುವ ಕ್ಲೌಡ್ ಆಧಾರಿತ ಸೇವೆಗಳನ್ನು ಒದಗಿಸುತ್ತದೆ. 

ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಂಡ ನಂತರ, ಸಾಮಾನ್ಯ ಪಾಸ್‌ಪೋರ್ಟ್‌ ಮೇಲೆ ಮೊದಲ ಬಾರಿಗೆ ಅಮೆರಿಕ ಪ್ರವಾಸ ಕೈಗೊಂಡಿರುವ ರಾಹುಲ್‌ ಗಾಂಧಿ ಅವರಿಗೆ ಅಮೆರಿಕವು ಅಸಾಧಾರಣ ಸಾಮರ್ಥ್ಯದ ವ್ಯಕ್ತಿಗಳಿಗೆ ನೀಡಲಾಗುವ ಅಪರೂಪದ ‘ಒ1 ವೀಸಾ’ ನೀಡಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.