ADVERTISEMENT

ಜೈಲು ಶಿಕ್ಷೆ: ಸೋಮವಾರ ರಾಹುಲ್‌ ಗಾಂಧಿ ಮೇಲ್ಮನವಿ ಸಲ್ಲಿಕೆ

ಐಎಎನ್ಎಸ್
Published 2 ಏಪ್ರಿಲ್ 2023, 11:09 IST
Last Updated 2 ಏಪ್ರಿಲ್ 2023, 11:09 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ    

ನವದೆಹಲಿ: ಮಾನನಷ್ಟ ಮೊಕದ್ದಮೆಯಲ್ಲಿ ತಮಗೆ ಜೈಲು ಶಿಕ್ಷೆ ವಿಧಿಸಿ ಸೂರತ್‌ ನ್ಯಾಯಾಲಯ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಸೆಷನ್ಸ್‌ ನ್ಯಾಯಾಲಯಕ್ಕೆ ಸೋಮವಾರ ಮೇಲ್ಮನವಿ ಸಲ್ಲಿಸಲಿದ್ದಾರೆ.

ರಾಹುಲ್‌ ಅವರು ಖುದ್ದಾಗಿ ನ್ಯಾಯಾಲಯಕ್ಕೆ ತೆರಳಿ, ಮೇಲ್ಮನವಿಯನ್ನು ಸಲ್ಲಿಸುವರು. ಪಕ್ಷದ ರಾಜ್ಯ ಹಾಗೂ ರಾಷ್ಟ್ರೀಯ ಹಿರಿಯ ನಾಯಕರು ರಾಹುಲ್ ಅವರಿಗೆ ಸಾಥ್‌ ನೀಡಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

ಶಿಕ್ಷೆ ಪ್ರಕಟವಾಗಿ ಹತ್ತು ದಿನಗಳ ನಂತರ ರಾಹುಲ್‌ ಗಾಂಧಿ ಅವರು ಮೇಲ್ಮನವಿ ಸಲ್ಲಿಸುತ್ತಿದ್ದಾರೆ. ಮೇಲ್ಮನವಿ ಸಲ್ಲಿಸುವಲ್ಲಿನ ಈ ವಿಳಂಬವನ್ನು ಪ್ರಶ್ನಿಸಿದ್ದ ಬಿಜೆಪಿ, ಇದೇ ವಿಷಯವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿತ್ತು.

ADVERTISEMENT

ಆದರೆ, ಮೇಲ್ಮನವಿ ಸಲ್ಲಿಸುವುದಕ್ಕೆ ಸಂಬಂಧಿಸಿ ಪಕ್ಷವು ಎಚ್ಚರಿಕೆಯ ಹೆಜ್ಜೆಗಳನ್ನಿಡಲು ನಿರ್ಧರಿಸಿದೆ. ಅದರಲ್ಲೂ, ಯಾವುದೇ ನ್ಯೂನತೆಗಳು ಇಲ್ಲದಂತೆ ಮೇಲ್ಮನವಿಯನ್ನು ಸಿದ್ಧಪಡಿಸಲು ಮುಂದಾಗಿದ್ದಾಗಿ ಕಾಂಗ್ರೆಸ್‌ನ ಹಲವಾರು ಮುಖಂಡರು ಹೇಳಿದ್ದರು.

ರಾಹುಲ್‌ ವಿರುದ್ಧ ದೇಶದ ವಿವಿಧ ನ್ಯಾಯಾಲಯಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಹೀಗಾಗಿ, ಪಕ್ಷ ಸಲ್ಲಿಸುವ ಮೇಲ್ಮನವಿಯಲ್ಲಿ ಯಾವುದಾದರೂ ದೋಷಗಳು ನುಸುಳಿದ್ದ ಪಕ್ಷದಲ್ಲಿ, ವಿರೋಧಿಗಳು ಅದನ್ನೇ ಅಸ್ತ್ರವನ್ನಾಗಿಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ, ಈ ವಿಷಯದಲ್ಲಿ ಅವಸರ ಮಾಡದಿರಲು ನಿರ್ಧರಿಸಲಾಗಿದೆ ಎಂದು ಮುಖಂಡರು ಹೇಳಿದ್ದರು.

‘ಎಲ್ಲ ಕಳ್ಳರಿಗೂ ಮೋದಿ ಎಂಬ ಉಪನಾಮ ಏಕಿದೆ’ ಎಂದು ರಾಹುಲ್‌ ಅವರು ಪ್ರಶ್ನಿಸಿದ್ದರು. ಲೋಕಸಭೆಗೆ 2019ರಲ್ಲಿ ನಡೆದ ಚುನಾವಣಾ ಪ್ರಚಾರ ಸಂದರ್ಭದಲ್ಲಿ ರಾಹುಲ್‌ ಅವರು ಕೋಲಾರದಲ್ಲಿ ಮಾಡಿದ ಭಾಷಣದಲ್ಲಿ ಈ ಹೇಳಿಕೆ ಕೊಟ್ಟಿದ್ದರು. ಅದನ್ನು ಪ್ರಶ್ನಿಸಿ ಸೂರತ್‌ (ಪಶ್ಚಿಮ) ಕ್ಷೇತ್ರದ ಶಾಸಕ ಪೂರ್ಣೇಶ್‌ ಮೋದಿ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ್ದ ಸೂರತ್‌ ನ್ಯಾಯಾಲಯವು ರಾಹುಲ್‌ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಮಾರ್ಚ್‌ 23ರಂದು ತೀರ್ಪು ನೀಡಿದೆ.

ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿದ್ದ ನ್ಯಾಯಾಲಯ, ತೀರ್ಪನ್ನು 30 ದಿನಗಳ ಕಾಲ ಅಮಾನತನಲ್ಲಿಟ್ಟಿದೆ. ಆದರೆ, ಜೈಲು ಶಿಕ್ಷೆ ಪ್ರಕಟಿಸಿದ ಬೆನ್ನಲ್ಲೇ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿತ್ತು. ಇದರ ಬೆನ್ನಲ್ಲೇ, ಕಾಂಗ್ರೆಸ್‌ನಿಂದ ದೇಶದ ವಿವಿಧೆಡೆ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.