ADVERTISEMENT

ಚೀನಾ ರಕ್ಷಣಾ ಸಚಿವರ ಭೇಟಿಯಾದ ರಾಜನಾಥ್‌ ಸಿಂಗ್: ಗಡಿಯಲ್ಲಿ ಶಾಂತಿ ಸ್ಥಾಪನೆ ಚರ್ಚೆ

ಪಿಟಿಐ
Published 27 ಜೂನ್ 2025, 16:09 IST
Last Updated 27 ಜೂನ್ 2025, 16:09 IST
ರಾಜನಾಥ್‌ ಸಿಂಗ್‌ ಅವರು ಡಾಂಗ್‌ ಜುನ್‌ ಅವರನ್ನು ಭೇಟಿಯಾದರು –ಪಿಟಿಐ ಚಿತ್ರ
ರಾಜನಾಥ್‌ ಸಿಂಗ್‌ ಅವರು ಡಾಂಗ್‌ ಜುನ್‌ ಅವರನ್ನು ಭೇಟಿಯಾದರು –ಪಿಟಿಐ ಚಿತ್ರ   

ಚಿಂಗ್‌ಡಾವ್/ ನವದೆಹಲಿ: ಭಾರತ ಮತ್ತು ಚೀನಾ ನಡುವಿನ ವಿವಾದಗಳನ್ನು ವ್ಯವಸ್ಥಿತ ಯೋಜನೆ ಮೂಲಕ ಬಗೆಹರಿಸಲು ಎರಡೂ ದೇಶಗಳು ಮುಂದಾಗಬೇಕು ಎಂಬ ಪ್ರಸ್ತಾವವನ್ನು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಚೀನಾದ ರಕ್ಷಣಾ ಸಚಿವ ಡಾಂಗ್‌ ಜುನ್‌ ಅವರ ಮುಂದಿಟ್ಟಿದ್ದಾರೆ.

ಶಾಂಘೈ ಸಹಕಾರ ಒಕ್ಕೂಟದ (ಎಸ್‌ಸಿಒ) ಶೃಂಗಸಭೆಯ ಸಂದರ್ಭದಲ್ಲಿ ರಾಜನಾಥ್‌ ಮತ್ತು ಡಾಂಗ್ ಅವರು ಚೀನಾದ ಚಿಂಗ್‌ಡಾವ್‌ನಲ್ಲಿ ಗುರುವಾರ ದ್ವಿಪಕ್ಷೀಯ ಮಾತುಕತೆ ನಡೆಸಿದರು. ವಾಸ್ತವ ನಿಯಂತ್ರಣ ರೇಖೆಯುದ್ದಕ್ಕೂ (ಎಲ್‌ಎಸಿ) ಶಾಂತಿ ಕಾಪಾಡುವ ಅಗತ್ಯತೆಯ ಕುರಿತು ಇಬ್ಬರೂ ಈ ವೇಳೆ ವಿಸ್ತೃತ ಚರ್ಚೆ ನಡೆಸಿದ್ದಾರೆ.

ಡಾಂಗ್ ಜತೆಗಿನ ಮಾತುಕತೆ ‘ರಚನಾತ್ಮಕ’ವಾಗಿತ್ತು ಎಂದು ರಾಜನಾಥ್‌ ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ.

ADVERTISEMENT

‘ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ದ್ವಿಪಕ್ಷೀಯ ಸಂಬಂಧಗಳ ಕುರಿತ ವಿಷಯಗಳ ಬಗ್ಗೆ ನಾವು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದೇವೆ. ಸುಮಾರು ಆರು ವರ್ಷಗಳ ನಂತರ ಕೈಲಾಸ ಮಾನಸ ಸರೋವರ ಯಾತ್ರೆ ಪುನರಾರಂಭಗೊಂಡಿರುವುದಕ್ಕೆ ನನ್ನ ಸಂತಸವನ್ನು ಅವರಲ್ಲಿ ವ್ಯಕ್ತಪಡಿಸಿದೆ’ ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

‘ಗಡಿಯಲ್ಲಿ ಉದ್ವಿಗ್ನತೆ ಕಡಿಮೆ ಮಾಡಲು ಮತ್ತು ಗಡಿ ರೇಖೆ ಗುರುತಿಸಲು ಅಸ್ತಿತ್ವದಲ್ಲಿರುವ ಕಾರ್ಯವಿಧಾನಗಳನ್ನು ಮರುಸ್ಥಾಪಿಸುವುದೂ ಒಳಗೊಂಡಿರುವ ವ್ಯವಸ್ಥಿತ ಯೋಜನೆ ಮೂಲಕ ವಿವಾದಗಳನ್ನು ಬಗೆಹರಿಸಬೇಕೆಂಬ ನಿಲುವು ವ್ಯಕ್ತಪಡಿಸಿದ್ದೇನೆ’ ಎಂದಿದ್ದಾರೆ.

ಪಹಲ್ಗಾಮ್‌ ಭಯೋತ್ಪಾದಕರ ದಾಳಿ ಹಾಗೂ ಭಾರತವು ಕೈಗೊಂಡ ‘ಆಪರೇಷನ್‌ ಸಿಂಧೂರ’ದ ಬಗ್ಗೆ ರಾಜನಾಥ್ ಅವರು ಡಾಂಗ್‌ ಅವರಿಗೆ ವಿವರಿಸಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಪ್ರಕಟಣೆ ತಿಳಿಸಿದೆ.

‘ಭಾರತವು ಚೀನಾದೊಂದಿಗೆ ಸಂಘರ್ಷವನ್ನು ಬಯಸುವುದಿಲ್ಲ. ಪರಸ್ಪರ ಮಾತುಕತೆ ಮೂಲಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು, ಸಂವಹನ ಹೆಚ್ಚಿಸಲು ಮತ್ತು ದ್ವಿಪಕ್ಷೀಯ ಸಂಬಂಧ ಬಲಪಡಿಸಲು ಸಿದ್ಧವಾಗಿದೆ’ ಎಂದು ರಾಜನಾಥ್‌ ಅವರು ಡಾಂಗ್‌ ಅವರೊಂದಿಗಿನ ಮಾತುಕತೆ ವೇಳೆ ತಿಳಿಸಿದ್ದಾರೆ’ ಎಂದು ಚೀನಾ ರಕ್ಷಣಾ ಸಚಿವಾಲಯದ ಪ್ರಕಟಣೆ ಹೇಳಿದೆ.

ಭಾರತ– ಚೀನಾ ದ್ವಿಪಕ್ಷೀಯ ಸಂಬಂಧದಲ್ಲಿ ಹೊಸ ವಿವಾದಗಳು ಉಂಟಾಗದಂತೆ ನೋಡಿಕೊಳ್ಳುವುದು ಎರಡೂ ಕಡೆಯವರ ಜವಾಬ್ದಾರಿಯಾಗಿದೆ
ರಾಜನಾಥ್‌ ಸಿಂಗ್‌ ರಕ್ಷಣಾ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.