ADVERTISEMENT

ಎಟಿಪಿ ಡಬಲ್ಸ್ ಟೂರ್: ಅತ್ಯಂತ ಹಿರಿಯ ಟೆನಿಸ್ ಚಾಂಪಿಯನ್; 43 ಪ್ರಾಯದ ಬೋಪಣ್ಣ!

ರಾಯಿಟರ್ಸ್
Published 19 ಮಾರ್ಚ್ 2023, 11:38 IST
Last Updated 19 ಮಾರ್ಚ್ 2023, 11:38 IST
ಇಂಡಿಯನ್‌ ವೆಲ್ಸ್ ಟೂರ್ನಿಯ ಡಬಲ್ಸ್ ಟ್ರೋಫಿಗೆ ಮುತ್ತಿಕ್ಕಿದ ಬೋಪಣ್ಣ ಜೋಡಿ –ಎಪಿ ಚಿತ್ರ
ಇಂಡಿಯನ್‌ ವೆಲ್ಸ್ ಟೂರ್ನಿಯ ಡಬಲ್ಸ್ ಟ್ರೋಫಿಗೆ ಮುತ್ತಿಕ್ಕಿದ ಬೋಪಣ್ಣ ಜೋಡಿ –ಎಪಿ ಚಿತ್ರ   

ವಾಷಿಂಗ್ಟನ್: ಇಲ್ಲಿನ ಇಂಡಿಯನ್‌ ವೆಲ್ಸ್‌ನಲ್ಲಿ ನಡೆದ ಬಿಎನ್‌ಪಿ ಪರಿಬಾಸ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ಫೈನಲ್‌ ಪಂದ್ಯವನ್ನು ಭಾರತದ ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೋಡಿ ಶನಿವಾರ ಗೆದ್ದುಕೊಂಡಿತು. ಈ ಮೂಲಕ 43 ವರ್ಷದ ಬೋಪಣ್ಣ ಅವರು ಎಟಿಪಿ 1000 ಟೂರ್‌ನ ಅತ್ಯಂತ ಹಿರಿಯ ಚಾಂಪಿಯನ್ ಎಂಬ ಕೀರ್ತಿಗೆ ಪಾತ್ರರಾದರು.

ಬೋಪಣ್ಣ– ಮ್ಯಾಥ್ಯೂ ಜೋಡಿಯು, ಅಗ್ರ ಶ್ರೇಯಾಂಕಿತ ಜತೆಗಾರರಾದ ಡಚ್‌ನ ವೆಸ್ಲಿ ಕೂಲೋಫ್‌– ಬ್ರಿಟನ್‌ನ ನೀಲ್ ಸ್ಕಪ್‌ಸ್ಕಿ ವಿರುದ್ಧ 6-3, 2-6, 10-8 ಸೆಟ್‌ಗಳಿಂದ ಸೋಲಿಸಿತು. ಈ ಪಂದ್ಯವೂ ಸೇರಿ ಒಟ್ಟು ಎರಡು ಬಾರಿ ಇಂಡಿಯನ್ ವೆಲ್ಸ್ ಟೂರ್ನಿಯ ಡಬಲ್ಸ್ ಪಂದ್ಯವನ್ನು ಭೋಪಣ್ಣ– ಮ್ಯಾಥ್ಯೂ ಗೆದ್ದುಕೊಂಡಿದೆ, ಇದು ಅವರ ಈ ವರ್ಷದ ಮೊದಲ ಪ್ರಶಸ್ತಿಯಾಗಿದೆ.

ಗೆದ್ದ ಖುಷಿಯನ್ನು ಹಂಚಿಕೊಂಡ ಬೋಪಣ್ಣ ’ಇಂಡಿಯನ್ ವೆಲ್ಸ್ ಟೆನಿಸ್‌ನ ಸ್ವರ್ಗ. ನಾನಿಲ್ಲಿ ವರ್ಷದ ಲಾಗಾಯ್ತು ಭಾಗವಹಿಸುತ್ತಿದ್ದು, ಇದರಲ್ಲಿ ಆಡುವುದೇ ಸಂತೋಷ. ಮ್ಯಾಥ್ಯೂ ಜತೆ ಸೇರಿ ಬಿಎನ್‌ಪಿ ಪಾರಿಬಾಸ್ ಟ್ರೋಫಿ ಗೆದ್ದಿರುವುದು ಇನ್ನೂ ಖುಷಿ ಕೊಟ್ಟಿದೆ’ ಎಂದರು.

ADVERTISEMENT

ಈ ವೇಳೆ ವಯಸ್ಸಿನ ಕುರಿತಾದ ಸಂದರ್ಶಕರ ಪ್ರಶ್ನೆಯೊಂದಕ್ಕೆ ಟೆನಿಸ್ ಲೋಕದ ಹಿರಿಯ ಆಟಗಾರ ಬೋಪಣ್ಣ ’ಬಿಡುವಿನ ಸಂದರ್ಭದಲ್ಲಿ ಕಾಫಿ ಕುಡಿಯುವುದೇ ನನ್ನ ಚೈತನ್ಯದ ಗುಟ್ಟು’ ಎಂದು ನಗುತ್ತಾ ಉತ್ತರಿಸಿದರು. ಕಾರಣ, ಅವರ ಕುಟುಂಬ ಕೊಡಗಿನಲ್ಲಿ ಕಾಫಿ ತೋಟವನ್ನು ಹೊಂದಿದೆ.

ಅಲ್ಲದೇ, ಡಬಲ್ಸ್‌ನಲ್ಲಿ ಭಾರತದ ಶ್ರೇಷ್ಠ ಮಾಜಿ ಆಟಗಾರ ಮಹೇಶ್ ಭೂಪತಿ ಅವರ ಟೆನಿಸ್ ವೃತ್ತಿ ಜೀವನದ ವಯೋಚೈತನ್ಯವನ್ನು ಬೋಪಣ್ಣ ಈ ಸಂದರ್ಭ ಸ್ಮರಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.