ADVERTISEMENT

ಕೋವಿಡ್‌ನಿಂದ ಸತ್ತವರ ಅಂತ್ಯಕ್ರಿಯೆ: ಹಿಂದೂ ಪುರೋಹಿತರಿಂದ ದುಬಾರಿ ದರ

ದಕ್ಷಿಣ ಆಫ್ರಿಕಾ

ಪಿಟಿಐ
Published 24 ಜನವರಿ 2021, 12:36 IST
Last Updated 24 ಜನವರಿ 2021, 12:36 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಜೊಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್‌–19ನಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸಲು ಅಲ್ಲಿ ನೆಲೆಸಿರುವ ಹಿಂದೂ ಪುರೋಹಿತರು ದುಬಾರಿ ದರ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

‘ಶವ ಸಂಸ್ಕಾರ ನಡೆಸಲು ಪುರೋಹಿತರು 79 ಅಮೆರಿಕನ್‌ ಡಾಲರ್‌ನಿಂದ (₹5,766) 131 ಅಮೆರಿಕನ್‌ ಡಾಲರ್‌ನಷ್ಟು (₹9,562) ಶುಲ್ಕ ಪಡೆಯುತ್ತಿದ್ದಾರೆ’ ಎಂದು ದಕ್ಷಿಣ ಆಫ್ರಿಕಾ ಹಿಂದೂ ಧರ್ಮ ಸಂಸ್ಥೆಯ ಸದಸ್ಯ ಪ್ರದೀಪ್‌ ರಾಮ್‌ಲಾಲ್‌ ದೂರಿದ್ದಾರೆ.

‘ಧರ್ಮ ಗ್ರಂಥಗಳ ಪ್ರಕಾರ ಅಂತ್ಯ ಸಂಸ್ಕಾರ ನೆರವೇರಿಸುವುದು ನಮ್ಮ ಕರ್ತವ್ಯ. ಮೃತರ ಕುಟುಂಬದವರು ಸ್ವ ಇಚ್ಛೆಯಿಂದ ಪುರೋಹಿತರಿಗೆ ಹಣ ನೀಡಿದರೆ ಅದನ್ನು ಪಡೆದುಕೊಳ್ಳುವುದರಲ್ಲಿ ತಪ್ಪೇನಿಲ್ಲ. ಆದರೆ ಪುರೋಹಿತರೇ ದುಪ್ಪಟ್ಟು ದರ ನಿಗದಿಮಾಡುವುದು ಸರಿಯಲ್ಲ’ ಎಂದು ಡರ್ಬನ್‌ನಲ್ಲಿರುವ ಕ್ಲೇರ್‌ ಎಸ್ಟೇಟ್‌ ಕ್ರೆಮೆಟೋರಿಯಮ್‌ನ ವ್ಯವಸ್ಥಾಪಕರೂ ಆಗಿರುವ ಪ್ರದೀಪ್‌, ವೀಕ್ಲಿ ಪೋಸ್ಟ್‌ ಪತ್ರಿಕೆಗೆ ತಿಳಿಸಿದ್ದಾರೆ.

ADVERTISEMENT

‘ಪುರೋಹಿತರು ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವ ಕುರಿತು ನಮಗೆ ಹಲವು ದೂರುಗಳು ಬಂದಿವೆ. ಅಂತ್ಯ ಸಂಸ್ಕಾರ ಮುಗಿಸಿದ ಬಳಿಕ ಪಾರ್ಕಿಂಗ್‌ ಸ್ಥಳಕ್ಕೆ ತೆರಳಿದ ಪುರೋಹಿತರೊಬ್ಬರು ತಮ್ಮ ಜೇಬಿನಲ್ಲಿದ್ದ ಹಣ ಎಣಿಸಿಕೊಳ್ಳುತ್ತಿದ್ದುದ್ದನ್ನು ನಾನೇ ನೋಡಿದ್ದೇನೆ’ ಎಂದೂ ಅವರು ಹೇಳಿದ್ದಾರೆ.

‘ನಮ್ಮ ಬಳಿ ಅನೇಕ ವಿಡಿಯೊಗಳಿವೆ. ಮೃತರ ಕುಟುಂಬದವರು ಅವುಗಳ ನೆರವಿನಿಂದ ಶವ ಸಂಸ್ಕಾರ ನಡೆಸಬಹುದು. ಒಂದೊಮ್ಮೆ ಪುರೋಹಿತರೇ ಬೇಕು ಎಂದಾದರೆ ಝೂಮ್‌ ಮತ್ತು ವಾಟ್ಸ್‌ಆ್ಯಪ್‌ ವಿಡಿಯೊ ಕರೆಯ ಮೂಲಕ ಅಂತ್ಯಕ್ರಿಯೆ ನಡೆಸುವ ವ್ಯವಸ್ಥೆ ಮಾಡಲಾಗುತ್ತದೆ’ ಎಂದಿದ್ದಾರೆ.

‘ಮಾನ್ಯತೆ ಪಡೆದಿರುವ ಪುರೋಹಿತರ ಪಟ್ಟಿಯನ್ನು ನಮ್ಮ ಫೇಸ್‌ಬುಕ್‌ ಪುಟದಲ್ಲಿ ಹಾಕಲಾಗಿದೆ. ಮೃತರ ಕುಟುಂಬದವರು ಅವರನ್ನು ಸಂಪರ್ಕಿಸಿ ಯಾವುದೇ ಶುಲ್ಕ ನೀಡದೇ ಅಂತ್ಯಕ್ರಿಯೆ ನಡೆಸಬಹುದು’ ಎಂದು ದಕ್ಷಿಣ ಆಫ್ರಿಕಾ ಹಿಂದೂ ಮಹಾಸಭಾ ಅಧ್ಯಕ್ಷ ಅಶ್ವಿನ್‌ ತ್ರಿಕಮ್‌ಜೀ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.