ADVERTISEMENT

ಇಂಧನ ಕೊರತೆ: ಶ್ರೀಲಂಕಾದ ಪೆಟ್ರೋಲ್‌ ಬಂಕ್‌ಗಳಲ್ಲಿ ಸೇನೆ ನಿಯೋಜನೆ

ಇಂಧನ ಕೊರತೆಯಿಂದ ಹೆಚ್ಚಾದ ವಾಹನ ಸವಾರರ ಪ್ರತಿಭಟನೆ

ಏಜೆನ್ಸೀಸ್
Published 22 ಮಾರ್ಚ್ 2022, 13:04 IST
Last Updated 22 ಮಾರ್ಚ್ 2022, 13:04 IST
ಕೊಲಂಬೊದ ಪೆಟ್ರೋಲ್ ಬಂಕ್‌ ಒಂದರಲ್ಲಿ ಸೇನಾ ಸಿಬ್ಬಂದಿ ನಿಯೋಜನೆಗೊಂಡಿರುವುದು  –ಎಎಫ್‌ಪಿ ಚಿತ್ರ
ಕೊಲಂಬೊದ ಪೆಟ್ರೋಲ್ ಬಂಕ್‌ ಒಂದರಲ್ಲಿ ಸೇನಾ ಸಿಬ್ಬಂದಿ ನಿಯೋಜನೆಗೊಂಡಿರುವುದು  –ಎಎಫ್‌ಪಿ ಚಿತ್ರ   

ಕೊಲಂಬೊ: ಶ್ರೀಲಂಕಾದಲ್ಲಿ ಇಂಧನ ಕೊರತೆಯಿಂದ ಪೆಟ್ರೋಲ್‌ ಬಂಕ್‌ಗಳಲ್ಲಿ ಸರದಿ ಸಾಲು ಉದ್ದವಾಗುತ್ತಿದ್ದು, ದೊಂಬಿಗಳೂ ಆರಂಭವಾಗಿವೆ. ಇದನ್ನು ನಿಯಂತ್ರಿಸಲು ಬಂಕ್‌ಗಳಲ್ಲಿ ಸೇನಾ ಸಿಬ್ಬಂದಿ ನಿಯೋಜಿಸಲಾಗಿದೆ.

ಕಳೆದ ಏಳು ದಶಕಗಳಲ್ಲಿ ಕಂಡರಿಯದಂತಹ ಆರ್ಥಿಕ ಬಿಕ್ಕಟ್ಟನ್ನು ದೇಶ ಎದುರಿಸುತ್ತಿದ್ದು, ಪೆಟ್ರೋಲ್‌, ಡೀಸೆಲ್‌ ಜತೆಗೆ ಜತೆಗೆ ಅಡುಗೆ ಅನಿಲ, ಸೀಮೆ ಎಣ್ಣೆಗೂ ತೀವ್ರ ಅಭಾವ ಉಂಟಾಗಿದೆ. ‘ಸೋಮವಾರ ಕೊಲಂಬೊದಲ್ಲಿನ ಮುಖ್ಯ ಇಂಧನ ಪೂರೈಕೆ ಘಟಕಕ್ಕೇ ಪ್ರತಿಭಟನಾಕಾರರು ದಿಗ್ಬಂಧನ ವಿಧಿಸಿದ್ದರು.

ಇನ್ನೊಂದು ಪ್ರಕರಣದಲ್ಲಿ ಬಂಕ್‌ ಒಂದರಲ್ಲಿ ಇಂಧನ ತುಂಬಿಸಲು ಸರದಿಯಲ್ಲಿ ನಿಂತಿದ್ದ ಸವಾರರೊಬ್ಬರನ್ನು ಕೊಲ್ಲಲಾಗಿತ್ತು. ಈ ಹಿನ್ನೆಲೆಯಲ್ಲಿ ಸೇನೆ ನಿಯೋಜಿಸಲು ನಿರ್ಧರಿಸಲಾಗಿದೆ’ ಎಂದು ಸರ್ಕಾರದ ವಕ್ತಾರ ರಮೇಶ್ ಪತಿರಾನ ತಿಳಿಸಿದರು.

ADVERTISEMENT

ದೇಶದ ವಿದೇಶಿ ವಿನಿಯಮ ಕೊರತೆಯಿಂದಾಗಿ ಜನರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದ್ದು, ಪರೀಕ್ಷೆ ಬರೆಯುವ ಹಾಳೆ, ಶಾಯಿಯ ಕೊರತೆಯಾಗಿರುವುದರಿಂದ ಲಕ್ಷಾಂತರ ವಿದ್ಯಾರ್ಥಿಗಳ ಅವಧಿ ಪರೀಕ್ಷೆಯನ್ನೇ ರದ್ದುಪಡಿಸಲಾಗಿದೆ.

ಶ್ರೀಲಂಕಾದಲ್ಲಿ ಪ್ರವಾಸೋದ್ಯಮವೇ ಪ್ರಮುಖ ಆದಾಯದ ಮೂಲವಾಗಿದ್ದು, ಕೋವಿಡ್‌ನಿಂದಾಗಿ ಪ್ರವಾಸೋದ್ಯಮ ಸಂಪೂರ್ಣ ನೆಲಕಚ್ಚಿದೆ. ವಿದೇಶಗಳಲ್ಲಿ ಕೆಲಸ ಮಾಡುವ ಲಂಕಾ ಪ್ರಜೆಗಳ ಪ್ರಮಾಣವೂ ಕಡಿಮೆಯಾಗಿದೆ. ಇದರಿಂದಾಗಿ ಹಣದ ಚಲಾವಣೆ ಕಡಿಮೆಯಾಗಿ ದೇಶ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.