ADVERTISEMENT

ತೀವ್ರ ಪ್ರತಿಭಟನೆ ಹಿನ್ನೆಲೆ ಶ್ರೀಲಂಕಾದಲ್ಲಿ ಮತ್ತೆ ತುರ್ತು ಪರಿಸ್ಥಿತಿ ಘೋಷಣೆ

ಏಜೆನ್ಸೀಸ್
Published 7 ಮೇ 2022, 2:33 IST
Last Updated 7 ಮೇ 2022, 2:33 IST
   

ಕೊಲಂಬೊ: ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಶುಕ್ರವಾರ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ಐದು ವಾರಗಳಲ್ಲಿ ಎರಡನೇ ಬಾರಿಗೆ ಕಠಿಣ ಕಾನೂನನ್ನು ಜಾರಿಗೊಳಿಸಲಾಗಿದೆ.

ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅಧ್ಯಕ್ಷರ ರಾಜೀನಾಮೆಗೆ ಒತ್ತಾಯಿಸಿ ದೇಶವ್ಯಾಪಿ ಹಲವು ವಾರಗಳಿಂದ ಪ್ರತಿಭಟನೆ ನಡೆಯುತ್ತಿವೆ. ಸಾವಿರಾರು ಪ್ರತಿಭಟನಾಕಾರರು ರಾಜಧಾನಿಯಲ್ಲಿರುವ ಅವರ ಖಾಸಗಿ ನಿವಾಸಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದ ಒಂದು ದಿನದ ನಂತರ, ಏಪ್ರಿಲ್ 1 ರಂದು ಮೊದಲ ಬಾರಿಗೆ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು. ಬಳಿಕ, ಏಪ್ರಿಲ್ 14ರಂದು ರದ್ದುಗೊಳಿಸಲಾಗಿತ್ತು.

ಇದೀಗ, ಮತ್ತೆ ಪ್ರತಿಭಟನೆಗಳು ತೀವ್ರಗೊಂಡಿದ್ದು, ಶುಕ್ರವಾರ ಅಂಗಡಿ– ಮುಂಗಟ್ಟುಗಳನ್ನು ಮುಚ್ಚಿ, ಸಾರ್ವಜನಿಕ ಸಾರಿಗೆ ಬಂದ್ ಮಾಡಲಾಗಿತ್ತು. ಪ್ರತಿಭಟನೆ ತೀವ್ರ ಸ್ವರೂಪ ಪಡೆದ ಬಳಿಕ ಕಠಿಣ ನಿಯಮಗಳನ್ನು ಜಾರಿಗೊಳಿಸುತ್ತಿರುವುದಾಗಿ ಅಧ್ಯಕ್ಷರ ವಕ್ತಾರರು ತಿಳಿಸಿದ್ದಾರೆ.

ADVERTISEMENT

ರಾಜಪಕ್ಸ ರಾಜೀನಾಮೆಗೆ ಒತ್ತಾಯಿಸಿ ಶುಕ್ರವಾರ ರಾಷ್ಟ್ರೀಯ ಸಂಸತ್ತಿಗೆ ನುಗ್ಗಲು ಪ್ರಯತ್ನಿಸುತ್ತಿದ್ದ ವಿದ್ಯಾರ್ಥಿಗಳನ್ನು ಚದುರಿಸಲು ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿ ಪ್ರಯೋಗಿಸಿದ್ದಾರೆ.

ತುರ್ತು ಪರಿಸ್ಥಿತಿಯ ಆದೇಶವು ಭದ್ರತಾ ಪಡೆಗಳಿಗೆ ನ್ಯಾಯಾಂಗದ ಮೇಲ್ವಿಚಾರಣೆ ಇಲ್ಲದೆ ಶಂಕಿತರನ್ನು ಬಂಧಿಸಿ, ದೀರ್ಘಾವಧಿಯವರೆಗೆ ವಶದಲ್ಲಿಟ್ಟುಕೊಳ್ಳುವ ಅಧಿಕಾರವನ್ನು ನೀಡುತ್ತದೆ.

ಇದು ಪೊಲೀಸರ ಜೊತೆಗೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸೇನೆಯ ನಿಯೋಜನೆಗೂ ಸಹ ಅನುವು ಮಾಡಿಕೊಡುತ್ತದೆ.

ಅತ್ಯಾವಶ್ಯಕ ಸೇವೆಗಳು ಮತ್ತು ಸಾರ್ವಜನಿಕ ಕಾನೂನು ಸುವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ತುರ್ತು ಪರಿಸ್ಥಿತಿ ಘೋಷಣೆಯ ತಮ್ಮ ಕಾರ್ಯನಿರ್ವಾಹಕ ಅಧಿಕಾರವನ್ನು ಅಧ್ಯಕ್ಷ ಗೊಟಬಯ ರಾಜಪಕ್ಸ ಬಳಸಿದ್ದಾರೆ.

ಶುಕ್ರವಾರ ಮಧ್ಯರಾತ್ರಿಯಿಂದಲೇ ತುರ್ತು ಪರಿಸ್ಥಿತಿ ಜಾರಿಗೆ ಬಂದಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.