ADVERTISEMENT

ಶ್ರೀಲಂಕಾದಲ್ಲಿ ಸಂಪುಟ ವಿಸ್ತರಣೆ: ಪ್ರತಿಪಕ್ಷ ಟೀಕೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2022, 10:51 IST
Last Updated 11 ಸೆಪ್ಟೆಂಬರ್ 2022, 10:51 IST
ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ
ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ    

ಕೊಲಂಬೊ: ತೀವ್ರ ಆರ್ಥಿಕ ಸಂಕಷ್ಟ ನಡುವೆ ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಅವರು 37 ರಾಜ್ಯ ಸಚಿವರೊಂದಿಗೆ ಸಚಿವಸಂಪುಟವಿಸ್ತರಣೆ ಮಾಡಿರುವುದಕ್ಕೆ ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಿದ್ದಾರೆ. ಈಗ ಮತ್ತೆ 12 ಸಂಪುಟ ಸಚಿವರನ್ನು ಶೀಘ್ರದಲ್ಲೇ ನೇಮಿಸುವ ಕುರಿತು ಚರ್ಚೆ ನಡೆಯುತ್ತಿದೆ.

ವಿಕ್ರಮಸಿಂಘೆ ಗುರುವಾರ ನೇಮಕ ಮಾಡಿರುವ 37 ಕಿರಿಯ ಸಚಿವರ ಪೈಕಿ ಆಡಳಿತಾರೂಢ ಶ್ರೀಲಂಕಾ ಪೊದುಜನ ಪೆರಮುನಾ (ಎಸ್‌ಎಲ್‌ಪಿಪಿ) ಮತ್ತು ಶ್ರೀಲಂಕಾ ಫ್ರೀಡಂ ಪಾರ್ಟಿಯನ್ನು (ಎಸ್‌ಎಲ್‌ಎಫ್‌ಪಿ) ಹೆಚ್ಚು ಮಂದಿ ಪ್ರತಿನಿಧಿಸುತ್ತಾರೆ.

20 ಸದಸ್ಯರ ಸಂಪುಟಕ್ಕೆ ಹೆಚ್ಚುವರಿಯಾಗಿ 37 ಹೊಸ ಹುದ್ದೆ ಸೇರ್ಪಡೆಯಾಗಿದೆ. ಅಧ್ಯಕ್ಷರ ಕ್ರಮವನ್ನು ಪ್ರತಿಪಕ್ಷಗಳು ತೀವ್ರವಾಗಿ ಖಂಡಿಸಿವೆ. ಇತ್ತೀಚಿನ ತೆರಿಗೆ ಹೆಚ್ಚಳ ಜನರಿಗೆ ಹೊರೆಯಾಗಿದೆ ಎಂದು ಟೀಕಿಸಿವೆ.

ADVERTISEMENT

‘ಬೆಲೆ ಏರಿಕೆಯಿಂದ ಜೀವನ ನಿರ್ವಹಣೆ ಕಷ್ಟ. ಜನರ ನೋವನ್ನು ಸರ್ಕಾರ ಪರಿಗಣಿಸುವುದಿಲ್ಲ’ ಎಂದು ಪ್ರಮುಖ ವಿರೋಧ ಪಕ್ಷ ಎಸ್‌ಜೆಬಿ ನಾಯಕ ಸಜಿತ್ ಪ್ರೇಮದಾಸ ಹೇಳಿದರು.

ಹೊಸ ರಾಜ್ಯ ಸಚಿವರು ಯಾವುದೇ ಸವಲತ್ತುಗಳಿಲ್ಲದೆ ಕೆಲಸ ಮಾಡುತ್ತಿರುವುದರಿಂದ ದೇಶಕ್ಕೆ ಹೊರೆಯಾಗುವುದಿಲ್ಲ ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಪ್ರಸನ್ನ ರಣತುಂಗ ಹೇಳಿದ್ದಾರೆ.

ದೇಶದಲ್ಲಿ ಸಾಮಾನ್ಯ ಜನರು ಎದುರಿಸುತ್ತಿರುವ ಸಂಕಷ್ಟ ಗಮನದಲ್ಲಿಟ್ಟುಕೊಂಡು ವೆಚ್ಚ ಕಡಿಮೆ ಮಾಡುವಂತೆ ರಾಜ್ಯ ಸಚಿವರಿಗೆ ಕಟ್ಟುನಿಟ್ಟಾಗಿ ತಿಳಿಸಲಾಗಿದೆ ಎಂದು ವಿಕ್ರಮಸಿಂಘೆ ಅವರ ಕಚೇರಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.