ADVERTISEMENT

ನ್ಯೂಯಾರ್ಕ್‌ನ ಬೀದಿಯೊಂದಕ್ಕೆ 'ಗಣೇಶ್ ಟೆಂಪಲ್ ಸ್ಟ್ರೀಟ್' ಎಂದು ನಾಮಕರಣ

ಪಿಟಿಐ
Published 4 ಏಪ್ರಿಲ್ 2022, 7:04 IST
Last Updated 4 ಏಪ್ರಿಲ್ 2022, 7:04 IST
   

ನ್ಯೂಯಾರ್ಕ್: ಅಮೆರಿಕದ ನ್ಯೂಯಾರ್ಕ್‌ನ ಹೆಸರಾಂತ ಮತ್ತು ಪ್ರಮುಖ ದೇವಾಲಯದ ಹೊರಗಿನ ಬೀದಿಗೆ 'ಗಣೇಶ್ ಟೆಂಪಲ್ ಸ್ಟ್ರೀಟ್' ಎಂದು ಹೆಸರಿಡಲಾಗಿದ್ದು, ಅಲ್ಲಿ ನೆಲೆಸಿರುವ ಹಿಂದುಗಳಿಗೆ ಇದೊಂದು ಭಾವನಾತ್ಮಕ ಕ್ಷಣವಾಗಿ ಮಾರ್ಪಟ್ಟಿತ್ತು.

1977ರಲ್ಲಿ ಸ್ಥಾಪಿತವಾದ ಉತ್ತರ ಅಮೆರಿಕದ ಹಿಂದೂ ಟೆಂಪಲ್ ಸೊಸೈಟಿಯ ಶ್ರೀ ಮಹಾ ವಲ್ಲಭ ಗಣಪತಿ ದೇವಸ್ಥಾನವು ಅಮೆರಿಕದ ಮೊದಲ ಮತ್ತು ಅತ್ಯಂತ ಹಳೆಯ ಹಿಂದೂ ದೇವಾಲಯವೆಂದು ಪರಿಗಣಿಸಲ್ಪಟ್ಟಿದೆ.

ಈ ಪ್ರಸಿದ್ಧ ದೇವಾಲಯವು ಕ್ವೀನ್ಸ್ ಕೌಂಟಿಯ ಫ್ಲಶಿಂಗ್‌ನಲ್ಲಿದೆ. ದೇವಾಲಯದ ಹೊರಗಿನ ಬೀದಿಗೆ ಧಾರ್ಮಿಕ ಸ್ವಾತಂತ್ರ್ಯ ಮತ್ತು ಗುಲಾಮಗಿರಿ-ವಿರೋಧಿ ಚಳುವಳಿಯ ಅಮೆರಿಕದ ಪ್ರಮುಖ ಪ್ರವರ್ತಕ ಜಾನ್ ಬೌನ್ ಅವರ ಸ್ಮರಣೆಯಾಗಿ ಬೌನ್ ಸ್ಟ್ರೀಟ್ ಎಂದು ಹೆಸರಿಡಲಾಗಿತ್ತು. ಇದೀಗ, ಶನಿವಾರ ನಡೆದ ವಿಶೇಷ ಸಮಾರಂಭದಲ್ಲಿ, ಸಾಂಪ್ರದಾಯಿಕ ಗಣೇಶ ದೇವಸ್ಥಾನದ ಗೌರವಾರ್ಥವಾಗಿ ಅದೇ ಬೀದಿಗೆ 'ಗಣೇಶ್ ಟೆಂಪಲ್ ಸ್ಟ್ರೀಟ್' ಎಂದೂ ಸಹ ನಾಮಕರಣ ಮಾಡಲಾಗಿದೆ.

ADVERTISEMENT

ಬೀದಿ ಫಲಕವನ್ನು ಅನಾವರಣಗೊಳಿಸಿದ ವಿಶೇಷ ಸಮಾರಂಭದಲ್ಲಿ ನ್ಯೂಯಾರ್ಕ್‌ನ ಭಾರತದ ಕಾನ್ಸುಲ್ ಜನರಲ್ ರಣಧೀರ್ ಜೈಸ್ವಾಲ್, ಕ್ವೀನ್ಸ್ ಬರೋ ಅಧ್ಯಕ್ಷ ಡೊನೊವನ್ ರಿಚರ್ಡ್ಸ್, ನ್ಯೂಯಾರ್ಕ್ ನಗರದ ಮೇಯರ್ ಎರಿಕ್ ಆಡಮ್ಸ್ , ಇಂಡೊ-ಅಮೆರಿಕನ್ ಸಮುದಾಯದ ಸದಸ್ಯ ದಿಲೀಪ್ ಚೌಹಾಣ್ ಉಪಸ್ಥಿತರಿದ್ದರು.

ಸಹ-ನಾಮಕರಣ ಕಾರ್ಯಕ್ರಮವು ಕೇವಲ ಆಚರಣೆಯಾಗಿಲ್ಲ.ಆದರೆ, ಇದು ‘ದಶಕಗಳ ಕಾಲ ಈ ಮೈಲಿಗಲ್ಲನ್ನು ತಲುಪಲು ಪಟ್ಟ ಕಠಿಣ ಪರಿಶ್ರಮವನ್ನು ತೋರಿಸುತ್ತದೆ. ಇದು ಇಂಡೊ-ಅಮೆರಿಕನ್ ಸಮುದಾಯದ ಬಗ್ಗೆ ಬೆಳವಣಿಗೆ ಬಗ್ಗೆ ಮಾತನಾಡುತ್ತದೆ’ಎಂದಿದ್ದಾರೆ.

ಪುರೋಹಿತರು ಮತ್ತು ಬಹಳಷ್ಟು ಜನರ ಸಮ್ಮುಖದಲ್ಲಿ ರಸ್ತೆ ಫಲಕವನ್ನು ಅನಾವರಣಗೊಳಿಸಿದ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ರಿಚರ್ಡ್ಸ್, ‘#ಫ್ಲಶಿಂಗ್‌ನಲ್ಲಿರುವ ಬೋನ್ ಸ್ಟ್ರೀಟ್ ಈಗ ಗಣೇಶ್ ಟೆಂಪಲ್ ಸ್ಟ್ರೀಟ್ ಆಗಿದೆ! ಆಚರಣೆಗೆ ಎಂತಹ ದಿನ. ಡಾ. ಉಮಾ ಮೈಸೂರುಕರ್ ಮತ್ತು ಉತ್ತರ ಅಮೆರಿಕದ ಹಿಂದೂ ಟೆಂಪಲ್ ಸೊಸೈಟಿಯ ಪ್ರತಿಯೊಬ್ಬರಿಗೂ ನಮ್ಮ ಕುಟುಂಬಗಳನ್ನು ಆಧ್ಯಾತ್ಮಿಕವಾಗಿ ಬೆಂಬಲಿಸಲು ಅವರು ಮಾಡಿರುವ ಎಲ್ಲ ಕೆಲಸಕ್ಕೂ ಅಭಿನಂದನೆಗಳು’ಎಂದು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.