ADVERTISEMENT

ಭಾರತೀಯ ಕಾರ್ಮಿಕರ ನೇಮಕಾತಿ ಕುರಿತಾದ ಹೇಳಿಕೆ: ತೈವಾನ್‌ ಸಚಿವೆಯಿಂದ ಕ್ಷಮೆ

ಏಜೆನ್ಸೀಸ್
Published 6 ಮಾರ್ಚ್ 2024, 3:17 IST
Last Updated 6 ಮಾರ್ಚ್ 2024, 3:17 IST
<div class="paragraphs"><p>ತೈವಾನ್‌ ಕಾರ್ಮಿಕ ಸಚಿವೆ</p></div>

ತೈವಾನ್‌ ಕಾರ್ಮಿಕ ಸಚಿವೆ

   

ಬೀಜಿಂಗ್‌/ ತೈಪೆ: ಭಾರತೀಯ ಕಾರ್ಮಿಕರ ಕುರಿತು ತೈವಾನ್‌ನ ಕಾರ್ಮಿಕ ಸಚಿವೆ ಹ್ಸು ಮಿಂಗ್‌–ಚುನ್‌ ಅವರು ಜನಾಂಗೀಯ ಅವಹೇಳನದಂಥ ಹೇಳಿಕೆ ನೀಡಿದ್ದರು. ಈ ಕುರಿತು ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ಅವರು ಕ್ಷಮೆ ಕೇಳಿದ್ದಾರೆ.

ಭಾರತದ ಕಾರ್ಮಿಕರನ್ನು ತೈವಾನ್‌ನ ಕಾರ್ಖಾನೆಗಳಿಗೆ ನೇಮಕ ಮಾಡುವ ಕುರಿತು ಹ್ಸು ಅವರು ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದರು. ಆ ವೇಳೆ ಭಾರತದ ಈಶಾನ್ಯ ರಾಜ್ಯಗಳ ಕಾರ್ಮಿಕರನ್ನು ಮೊದಲಿಗೆ ಕರೆಸಿಕೊಳ್ಳಲಾಗುವುದು ಎಂದಿದ್ದರು.

ADVERTISEMENT

‘ಭಾರತದ ಈಶಾನ್ಯ ರಾಜ್ಯದವರ ಚರ್ಮದ ಬಣ್ಣ, ಆಹಾರ ಪದ್ಧತಿ ನಮ್ಮನ್ನು ಹೋಲುತ್ತದೆ. ಅವರಲ್ಲಿ ಬಹುತೇಕರು ಕ್ರಿಶ್ಚಿಯನ್ನರು. ಉತ್ಪಾದನೆ, ನಿರ್ಮಾಣ ಮತ್ತು ಕೃಷಿ ಕೆಲಸಗಳಲ್ಲಿ ನಿಪುಣರಾಗಿರುತ್ತಾರೆ ಎಂದಿದ್ದರು’ ಎಂದು ತೈವಾನ್‌ನ ಸೆಂಟ್ರಲ್‌ ನ್ಯೂಸ್‌ ಏಜೆನ್ಸಿ ವರದಿ ಮಾಡಿತ್ತು.

ಅವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಅಲ್ಲಿಯ ಡೆಮಾಕ್ರೆಟಿಕ್‌ ಪ್ರೊಗ್ರೆಸಿವ್‌ ಪಕ್ಷದ ಶಾಸಕ ಚೆನ್‌ ಕೌನ್‌ಟಿಂಗ್‌ ಅವರು, ‘ಜನಾಂಗ ಮತ್ತು ಚರ್ಮದ ಬಣ್ಣವು ವಲಸಿಗ ಕಾರ್ಮಿಕರ ನೇಮಕಾತಿಗೆ ಮಾನದಂಡ ಆಗಬಾರದು’ ಎಂದು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದರು.

ಮಂಗಳವಾರ ಬೆಳಿಗ್ಗೆ ನಡೆದ ಶಾಸಕಾಂಗ ಸಭೆಯಲ್ಲಿ ಈ ಕುರಿತು ಕ್ಷಮೆ ಕೇಳಿರುವ ಹ್ಸು ಅವರು, ‘ಸಮಾನತೆಯನ್ನು ಮನಸ್ಸಿನಲ್ಲಿರಿಸಿಕೊಂಡು ತೈವಾನ್‌ನ ಕಾರ್ಮಿಕ ನೀತಿಗಳನ್ನು ರೂಪಿಸಲಾಗಿದೆ. ನಾವು ಯಾರ ಕುರಿತೂ ತಾರತಮ್ಯ ಧೋರಣೆ ಹೊಂದಿಲ್ಲ’ ಎಂದಿದ್ದಾರೆ.

ಜೊತೆಗೆ, ಭಾರತೀಯ ಕಾರ್ಮಿಕರ ಸಾಮರ್ಥ್ಯ ಮತ್ತು ವೃತ್ತಿಪರತೆ ಕುರಿತು ಟಿ.ವಿ ವಾಹಿನಿ ಸಂದರ್ಶನದಲ್ಲಿ ಹೊಗಳಿಕೆಯ ಮಾತುಗಳನ್ನಾಡಿದ್ದೆ. ಆದರೆ ಅದನ್ನು ಪ್ರಸಾರ ಮಾಡಿಲ್ಲ ಎಂದು ಆಕ್ಷೇಪಿಸಿದ್ದಾರೆ.

ಭಾರತ ಮತ್ತು ತೈವಾನ್‌ ನಡುವೆ ಫೆಬ್ರುವರಿ 16ರಂದು ‘ಕಾರ್ಮಿಕರ ಸಹಕಾರ’ ಒಪ್ಪಂದ ಏರ್ಪಟ್ಟಿದೆ. ಇದರಿಂದಾಗಿ ಉಭಯ ದೇಶಗಳ ನಡುವೆ ಮಾನವ ಸಂಪನ್ಮೂಲ ವಿನಿಮಯ ನಡೆಯಲಿದೆ. ಕಾರ್ಮಿಕರ ಕೊರತೆ ಎದುರಿಸುತ್ತಿರುವ ತೈವಾನ್‌ಗೆ ಈ ಒಪ್ಪಂದದಿಂದ ಅನುಕೂಲವಾಗಲಿದೆ ಎಂದು ತೈವಾನ್‌ ವಿದೇಶಾಂಗ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.