ADVERTISEMENT

ವಿಶ್ವವಿದ್ಯಾಲಯಕ್ಕೆ ಮಹಿಳೆಯರಿಗೆ ಪ್ರವೇಶವಿಲ್ಲ: ತಾಲಿಬಾನ್‌

ಏಜೆನ್ಸೀಸ್
Published 21 ಡಿಸೆಂಬರ್ 2022, 13:04 IST
Last Updated 21 ಡಿಸೆಂಬರ್ 2022, 13:04 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಕಾಬೂಲ್‌: ಅಫ್ಗಾನಿಸ್ತಾನದ ಖಾಸಗಿ ಮತ್ತು ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿನಿಯರಿಗೆ ಪ್ರವೇಶವನ್ನು ನಿಷೇಧಿಸಿ ತಾಲಿಬಾನ್‌ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ. ಉನ್ನತ ಶಿಕ್ಷಣ ಸಚಿವಾಲಯದ ವಕ್ತಾರ ಜಿಯಾವುಲ್ಲಾ ಹಶ್ಮಿ ಈ ಆದೇಶ ಪತ್ರವನ್ನು ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ.

ಮಹಿಳೆಯರ ಹಕ್ಕು ಹಾಗೂ ಸ್ವಾತಂತ್ರ್ಯಕ್ಕೆ ಗೌರವ ಕೊಡುವುದಾಗಿ ಅಧಿಕಾರಕ್ಕೆ ಬಂದ ಆರಂಭದಲ್ಲಿ ಹೇಳಿದ್ದ ತಾಲಿಬಾನ್ ಸರ್ಕಾರ ತನ್ನ ಮಾತಿಗೆ ತಪ್ಪುತ್ತಿದೆ. ಕೆಲದಿನಗಳ ಹಿಂದಷ್ಟೇ ಮಹಿಳೆಯರಿಗೆ ಪಾರ್ಕ್, ಜಿಮ್‌, ಶಾಲೆ, ಉದ್ಯೋಗ ಕ್ಷೇತ್ರಕ್ಕೆ ನಿಷೇಧ ಹೇರಿತ್ತು. ಅಲ್ಲದೇ ಸಂಪೂರ್ಣವಾಗಿ ಇಸ್ಲಾಮಿಕ್‌ ಕಾನೂನು ಅಥವಾ ಷರಿಯಾವನ್ನು ಜಾರಿಗೊಳಿಸುವ ಮೂಲಕ ಮಹಿಳೆಯರು ಕಡ್ಡಾಯವಾಗಿ ಅಡಿಯಿಂದ ಮುಡಿಯವರೆಗೆ ವಸ್ತ್ರಧರಿಸುವಂತೆ ಆದೇಶಿಸಿತ್ತು.

ಶಾಲೆಗಳನ್ನು ಮತ್ತೆ ತೆರೆಯಲು ಮತ್ತು ಮಹಿಳೆಯರಿಗೆ ಸಾರ್ವಜನಿಕ ಸ್ಥಳದ ಹಕ್ಕನ್ನು ನೀಡುವಂತೆ ಅಂತರರಾಷ್ಟ್ರೀಯ ಸಮುದಾಯವು ತಾಲಿಬಾನ್ ನಾಯಕರನ್ನು ಒತ್ತಾಯಿಸಿದೆ.

ADVERTISEMENT

ಅಮೆರಿಕ ಆಕ್ಷೇಪ:ಮಹಿಳೆಯರಿಗೆ ಶಿಕ್ಷಣದಿಂದ ವಂಚಿಸುತ್ತಿರುವ ತಾಲಿಬಾನ್‌ ಸರ್ಕಾರದ ಅಸಮರ್ಥನೀಯ ನಿರ್ಧಾರವನ್ನು ಅಮೆರಿಕ ತೀವ್ರವಾಗಿ ಖಂಡಿಸುತ್ತದೆ. ಇಂತಹ ನಿರ್ಧಾರಗಳು ವ್ಯತಿರಿಕ್ತ ಪರಿಣಾಮ ಬೀರುತ್ತವೆ ಎಂದು ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಎಚ್ಚರಿಸಿದ್ದಾರೆ.

ಮಾನವ ಹಕ್ಕುಗಳಲ್ಲಿ ಶಿಕ್ಷಣ ಪ್ರಮುಖವಾದದ್ದು. ಅಫ್ಗಾನಿಸ್ತಾನದ ಆರ್ಥಿಕ ಬೆಳವಣಿಗೆ ಮತ್ತು ಸ್ಥಿರತೆಗೆ ಇದು ಅತ್ಯಗತ್ಯ. ವಿಶ್ವದ ಯಾವುದೇ ದೇಶವು ಮಹಿಳೆಯರು ಶಿಕ್ಷಣ ಪಡೆಯುವುದನ್ನು ನಿರ್ಬಂಧಿಸುವುದಿಲ್ಲ ಎಂದು ಬ್ಲಿಂಕನ್ ಹೇಳಿದ್ದಾರೆ.

ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಈ ನಿರ್ಧಾರವನ್ನು ಖಂಡಿಸಿದ್ದು, ಇದು ತಾಲಿಬಾನ್‌ನಿಂದ ಮತ್ತೊಂದು ‘ನಂಬಿಕೆ ದ್ರೋಹ’ವಾಗಿದೆ.ಮಹಿಳೆಯರ ಸಕ್ರಿಯ ಭಾಗವಹಿಸುವಿಕೆ ಮತ್ತು ಶಿಕ್ಷಣವಿಲ್ಲದೆ ದೇಶವು ಹೇಗೆ ಅಭಿವೃದ್ಧಿ ಹೊಂದುತ್ತದೆ. ಇದನ್ನು ಊಹಿಸುವುದೂ ಕಷ್ಟ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.