ADVERTISEMENT

ಪಾಕಿಸ್ತಾನದಲ್ಲಿ ಬಸ್ ಸ್ಫೋಟ: ಚೀನಾದ 9 ಕಾರ್ಮಿಕರು ಸೇರಿ 13 ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 14 ಜುಲೈ 2021, 8:42 IST
Last Updated 14 ಜುಲೈ 2021, 8:42 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಪೇಶಾವರ: ವಾಯುವ್ಯ ಪಾಕಿಸ್ತಾನದ ಬಸ್‌ನಲ್ಲಿ ಸ್ಫೋಟ ಸಂಭವಿಸಿದ್ದು, 9 ಮಂದಿ ಚೀನಾದ ಕಾರ್ಮಿಕರು ಸೇರಿ 13 ಮಂದಿ ಮೃತಪಟ್ಟಿದ್ದಾರೆ ಎಂದು ಸರ್ಕಾರ ಮತ್ತು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಫೋಟದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪಾಕಿಸ್ತಾನದ ಅಧಿಕಾರಿಗಳು ಹೇಳಿದರೆ, ಇಸ್ಲಾಮಾಬಾದ್‌ನ ಚೀನಾದ ರಾಯಭಾರ ಕಚೇರಿ ತನ್ನ ದೇಶದ ಪ್ರಜೆಗಳು ’ದಾಳಿಗೆ’ ಒಳಗಾಗಿದ್ದಾರೆ ಎಂದು ಹೇಳಿದೆ.

ಚೀನಾದ ಎಂಜಿನಿಯರ್‌ಗಳು, ಸರ್ವೇಯರ್‌ಗಳು ಮತ್ತು ಮೆಕ್ಯಾನಿಕಲ್ ಸಿಬ್ಬಂದಿಯನ್ನು ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ದಸು ಅಣೆಕಟ್ಟು ನಿರ್ಮಾಣ ಸ್ಥಳಕ್ಕೆ ಬಸ್‌ನಲ್ಲಿ ಕರೆದೊಯ್ಯಲಾಗುತ್ತಿತ್ತು ಎಂದು ಸ್ಥಳೀಯ ಸರ್ಕಾರಿ ಅಧಿಕಾರಿಯೊಬ್ಬರು ಎಎಫ್‌ಪಿಗೆ ತಿಳಿಸಿದ್ದಾರೆ.

ADVERTISEMENT

‘ಸ್ಫೋಟದಿಂದ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಬಳಿಕ ಬಸ್ ಕಂದಕಕ್ಕೆ ಬಿದ್ದಿತು’ ಎಂದು ಅವರು ಹೇಳಿದರು.

ಚೀನಾದ ಇನ್ನೂ 28 ಪ್ರಜೆಗಳು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸಹ ಈ ಘಟನೆಯನ್ನು ದೃಢಪಡಿಸಿದ್ದು, ‘ಇದು ಭಾರಿ ಸ್ಫೋಟವಾಗಿದೆ ಆದರೆ ಸ್ಫೋಟದ ಸ್ವರೂಪ ಇನ್ನೂ ತಿಳಿದುಬಂದಿಲ್ಲ’ ಎಂದು ಹೇಳಿದ್ದಾರೆ.

ಮೂಲಸೌಕರ್ಯ ಯೋಜನೆಗಳ ಮೇಲ್ವಿಚಾರಣೆ ಮತ್ತು ನಿರ್ಮಾಣಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವ ಚೀನಾದ ಕಾರ್ಮಿಕರ ಸುರಕ್ಷತೆಯು ಪಾಕಿಸ್ತಾನದಲ್ಲಿ ಬಹಳ ಹಿಂದಿನಿಂದಲೂ ಕಳವಳಕಾರಿಯಾಗಿದೆ.

ಚೀನಾದ ಸಂಸ್ಥೆಗಳು ತಮ್ಮ ಭದ್ರತಾ ಕಾರ್ಯವಿಧಾನಗಳನ್ನು ಬಲಪಡಿಸುವಂತೆ ಚೀನಾ ರಾಯಭಾರ ಕಚೇರಿ ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.