ADVERTISEMENT

ಬ್ರಿಟನ್‌ ವಿಮಾನ ನಿಲ್ದಾಣಗಳಲ್ಲಿ ಇ– ಗೇಟ್‌ಗಳು ಸ್ಥಗಿತ: ಪ್ರಯಾಣಿಕರಿಗೆ ತೊಂದರೆ

ಪಿಟಿಐ
Published 27 ಮೇ 2023, 16:17 IST
Last Updated 27 ಮೇ 2023, 16:17 IST
.
.   

ಲಂಡನ್‌: ಬ್ರಿಟನ್‌ ದೇಶದಾದ್ಯಂತ ವಿಮಾನ ನಿಲ್ದಾಣಗಳಲ್ಲಿ  ಸ್ವಯಂಚಾಲಿತ ಗೇಟ್‌ಗಳು ತಾಂತ್ರಿಕ ತೊಂದರೆಯಿಂದಾಗಿ ಸ್ಥಗಿತಗೊಂಡಿದ್ದು ಪ್ರಯಾಣಿಕರು ಪರದಾಡುವಂತಾಗಿದೆ.

ವಾರಾಂತ್ಯದಲ್ಲಿ ಬ್ರಿಟನ್‌ಗೆ ಬಂದಿರುವ ಪ್ರಯಾಣಿಕರು ದೇಶ ಪ್ರವೇಶಿಸಲು ಪ್ರಯಾಸಪಡುತ್ತಿದ್ದಾರೆ.

ಉದ್ದನೆಯ ಸರತಿ ಸಾಲಿನಲ್ಲಿ ನಿಂತಿರುವ ಫೋಟೊಗಳನ್ನು ಪ್ರಯಾಣಿಕರು ಹಂಚಿಕೊಂಡಿದ್ದಾರೆ. ಪ್ರಯಾಣಿಕರ ಪಾಸ್‌ಪೋರ್ಟ್‌ ಪರಿಶೀಲನೆಯನ್ನು ಎಲೆಕ್ಟ್ರಾನಿಕ್ ಪಾಸ್‌ಪೋರ್ಟ್ ಸ್ಕ್ಯಾನರ್‌ಗಳನ್ನು ಹೊಂದಿರುವ ಸ್ವಯಂಚಾಲಿತ ಗೇಟ್‌ಗಳ ಬದಲಿಗೆ ವಿಮಾನನಿಲ್ದಾಣ ಸಿಬ್ಬಂದಿಯೇ ನಿರ್ವಹಿಸುವಂತಾಗಿದೆ.   

ADVERTISEMENT

ಈ ಕುರಿತು ಹೇಳಿಕೆ ನೀಡಿರುವ, ಗಡಿ ಮತ್ತು ವಲಸೆ ಜವಾಬ್ದಾರಿಯನ್ನೂ ಹೊತ್ತಿರುವ ಗೃಹ ಖಾತೆಯ ಕಚೇರಿಯು, ‘ಬ್ರಿಟನ್‌ಗೆ ಬರುತ್ತಿರುವ ಎಲ್ಲ ಪ್ರಯಾಣಿಕರಿಗೂ ತೊಂದರೆಯಾಗುತ್ತಿದೆ ಎಂಬುದು ನಮಗೂ ಗೊತ್ತು.  ತಾಂತ್ರಿಕ ದೋಷವನ್ನು ಸರಿಪಡಿಸಲು ನಾವು ಪ್ರಯತ್ನಿಸುತ್ತಿದ್ದೇವೆ’ ಎಂದು ಹೇಳಿದೆ.

ಮ್ಯಾಂಚೆಸ್ಟರ್‌, ಹೀಥ್ರೂ ಸೇರಿದಂತೆ ವಿವಿಧ ವಿಮಾನನಿಲ್ದಾಣಗಳಲ್ಲಿನ ಉದ್ದ ಸಾಲಿನ ಚಿತ್ರಗಳನ್ನು ಪ್ರಯಾಣಿಕರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡುತ್ತಿದ್ದಂತೆ, ನಿಲ್ದಾಣದ ಅಧಿಕಾರಿಗಳು ಪ್ರಯಾಣಿಕರಲ್ಲಿ ಕ್ಷಮೆ ಕೋರಿದ್ದಾರೆ ಅಲ್ಲದೆ ತಾಳ್ಮೆಯಿಂದಿರುವಂತೆ ಮನವಿ ಮಾಡಿದ್ದಾರೆ.

ಬ್ರಿಟನ್‌ನಲ್ಲಿ ಬಹುತೇಕ ಶಾಲೆಗಳಿಗೆ ಮುಂದಿನ ವಾರವಿಡೀ ರಜೆ ಇರುವ ಕಾರಣ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ.

ಬ್ರಿಟನ್‌ನ ಹಲವು ವಿಮಾನನಿಲ್ದಾಣ ಮತ್ತು ರೈಲು ನಿಲ್ದಾಣಗಳಲ್ಲಿ ಸುಮಾರು 270 ಎಲೆಕ್ಟ್ರಾನಿಕ್‌ ಪಾಸ್‌ಪೋರ್ಟ್‌ ಗೇಟ್‌ಗಳಿವೆ. ಬ್ರಿಟನ್‌, ಐರೋಪ್ಯ ಒಕ್ಕೂಟದ ಸದಸ್ಯತ್ವವಿರುವ ಯಾವುದೇ ದೇಶ ಹಾಗೂ ಅಮೆರಿಕದ 12 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರು ಪಾಸ್‌ಪೋರ್ಟ್‌ ಹೊಂದಿದ್ದರೆ ಈ ಗೇಟುಗಳು ಅವರಿಗೆ ತೆರೆದುಕೊಳ್ಳುತ್ತವೆ. ಬ್ರಿಟನ್‌ ಪ್ರವೇಶಿಸುವವರಲ್ಲಿ ಶೇ 86ರಷ್ಟು ಮಂದಿ ಎಲೆಕ್ಟ್ರಾನಿಕ್‌ ಗೇಟ್‌ಗಳ ಬಳಕೆಗೆ ಅರ್ಹರಾಗಿರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.