ADVERTISEMENT

ಟ್ರಂಪ್ ನಡೆ ಅನಿರೀಕ್ಷಿತವಲ್ಲ: ಪ್ರಮೀಳಾ ಜಯಪಾಲ್

ಪಿಟಿಐ
Published 10 ನವೆಂಬರ್ 2020, 11:42 IST
Last Updated 10 ನವೆಂಬರ್ 2020, 11:42 IST
ಪ್ರಮೀಳಾ ಜಯಪಾಲ್
ಪ್ರಮೀಳಾ ಜಯಪಾಲ್   

ವಾಷಿಂಗ್ಟನ್: ‘ಅಮೆರಿಕದ ಪ್ರಮುಖ ಸುದ್ದಿಜಾಲಗಳು ಚುನಾವಣೆಯಲ್ಲಿ ಜೋ ಬೈಡನ್ ಅವರು ವಿಜೇತರೆಂದು ಘೋಷಿಸಿದರೂ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಗೆಲುವನ್ನು ಒಪ್ಪಿಕೊಳ್ಳದಿರುವುದು ಅನಿರೀಕ್ಷಿತವೇನಲ್ಲ’ ಎಂದು ಅಮೆರಿಕದ ಜನಪ್ರತಿನಿಧಿಗಳ ಸಂಸದೆ, ಡೆಮಾಕ್ರಟಿಕ್ ಪಕ್ಷದ ಪ್ರಮೀಳಾ ಜಯಪಾಲ್ ಹೇಳಿದ್ದಾರೆ.

‘ನಾಲ್ಕು ವರ್ಷಗಳಿಂದಲೂ ಟ್ರಂಪ್ ಅವರ ಹಾಸ್ಯಾಸ್ಪದ ನಡವಳಿಕೆಯನ್ನು ಗಮನಿಸುತ್ತಾ ಬಂದಿರುವವರಿಗೆ ಟ್ರಂಪ್ ಅವರ ಈ ನಡೆ ಅನಿರೀಕ್ಷಿತವೇನಲ್ಲ’ ಎಂದು ಪ್ರಮೀಳಾ ಸಿಎನ್‌ಎನ್ ಇಂಟರ್‌ನ್ಯಾಷನಲ್‌ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

‘ಜೋ ಬೈಡನ್ ನಮ್ಮ ಮುಂದಿನ ಅಧ್ಯಕ್ಷರಾಗಲಿದ್ದಾರೆ ಎಂಬುದು ವಾಸ್ತವ. ಇದನ್ನು ಬದಲಾಯಿಸಲು ಟ್ರಂಪ್‌ಗೆ ಸಾಧ್ಯವಿಲ್ಲ. ಬೈಡನ್ ತಮ್ಮ ನಾಯಕತ್ವ ಎಂಥದ್ದು ಎಂಬುದನ್ನು ಈಗಾಗಲೇ ಸಾಬೀತುಪಡಿಸುತ್ತಿದ್ದಾರೆ. ಅಮೆರಿಕವು ಮುಂದೆ ಸಾಗಬೇಕಿದೆ’ ಎಂದೂ ಅವರು ಹೇಳಿದ್ದಾರೆ.

ADVERTISEMENT

‘2016ರಲ್ಲಿ ಅಮೆರಿಕದ ಜನಪ್ರತಿನಿಧಿಗಳ ಸಭೆಗೆ ಆಯ್ಕೆಯಾದ ಮೊದಲ ಭಾರತೀಯ–ಅಮೆರಿಕನ್ ಮಹಿಳೆ ನಾನಾದರೆ, ಕಮಲಾ ಎರಡನೇ ಭಾರತೀಯ–ಅಮೆರಿಕನ್ ಕಪ್ಪು ಮಹಿಳಾ ಸಂಸದೆ. ಇದೀಗ ಅವರು ಅಮೆರಿಕದ ಮೊದಲ ಮಹಿಳಾ ಉಪಾಧ್ಯಕ್ಷೆಯಾಗುತ್ತಿರುವುದು ಸಂತಸ ಮೂಡಿಸಿದೆ’ ಎಂದಿದ್ದಾರೆ.

‘ವರ್ಣ ತಾರತಮ್ಯ ಮತ್ತು ಲಿಂಗಭೇದವನ್ನು ಕಮಲಾ ಚೆನ್ನಾಗಿ ಅರಿತಿದ್ದಾರೆ. ನಾನು ಮತ್ತು ಕಮಲಾ ಅನೇಕ ಯೋಜನೆಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದೇವೆ. ಉಪಾಧ್ಯಕ್ಷೆಯಾಗಿ ಕಮಲಾ ಉತ್ತಮ ಕೆಲಸ ಮಾಡುತ್ತಾರೆಂಬ ನಿರೀಕ್ಷೆ ಇದೆ. ಟ್ರಂಪ್ ಅವರಿಂದ ಯಾವುದೇ ಪ್ರಗತಿ ಸಾಧ್ಯವಿಲ್ಲವೆಂದು ನಾನು ದೃಢವಾಗಿ ನಂಬಿದ್ದೇನೆ’ ಎಂದೂ ಪ್ರಮೀಳಾ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.