ADVERTISEMENT

ಸುಂಕ ನೀತಿಗೆ ತಡೆ ನೀಡಿದ ಕೋರ್ಟ್‌: ಟ್ರಂಪ್‌ ಆಡಳಿತಕ್ಕೆ ಮುಖಭಂಗ

ರಾಯಿಟರ್ಸ್
Published 29 ಮೇ 2025, 16:46 IST
Last Updated 29 ಮೇ 2025, 16:46 IST
-
-   

ವಾಷಿಂಗ್ಟನ್: ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಹೇರಿದ್ದ ಸುಂಕಗಳಿಗೆ ಇಲ್ಲಿನ ಅಂತರರಾಷ್ಟ್ರೀಯ ವಾಣಿಜ್ಯ ನ್ಯಾಯಾಲಯ ತಡೆ ನೀಡಿ ಬುಧವಾರ ಆದೇಶಿಸಿದೆ.

‘ಟ್ರಂಪ್‌ ಅವರು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಈ ನಿರ್ಧಾರ ಕೈಗೊಂಡಿದ್ದಾರೆ‘ ಎಂದು ಹೇಳಿರುವ ಮೂವರು ನ್ಯಾಯಮೂರ್ತಿಗಳು, ಟ್ರಂಪ್‌ ಅವರು ಜನವರಿಯಲ್ಲಿ ಅಧಿಕಾರ ವಹಿಸಿಕೊಂಡ ನಂತರ ಹೇರಿದ್ದ ಬಹುತೇಕ ಎಲ್ಲ ಸುಂಕಗಳಿಗೆ ತಡೆ ನೀಡಿದ್ದಾರೆ.

ಸುಂಕ ವಿಧಿಸುವುದನ್ನು ಸ್ಥಗಿತಗೊಳಿಸುವ ಪ್ರಕ್ರಿಯೆ ಪೂರ್ಣಗೊಳಿಸುವುದಕ್ಕಾಗಿ ನ್ಯಾಯಾಲಯವು ಶ್ವೇತಭವನಕ್ಕೆ 10 ದಿನಗಳ ಕಾಲಾವಕಾಶ ನೀಡಿದೆ.

ADVERTISEMENT

ಚೀನಾ, ಕೆನಡಾ ಮತ್ತು ಮೆಕ್ಸಿಕೊ ಮೇಲೆ ಟ್ರಂಪ್‌ ಅವರು ಪ್ರತ್ಯೇಕವಾಗಿ ವಿಧಿಸಿರುವ ಸುಂಕಗಳನ್ನು ಕೂಡ ನ್ಯಾಯಾಲಯ ರದ್ದು ಮಾಡಿದೆ.

ಆದರೆ, ಆಟೊ, ಉಕ್ಕು, ಅಲ್ಯುಮಿನಿಯಂ ಉದ್ದಿಮೆಗಳಿಗೆ ಸಂಬಂಧಿಸಿ ವಿಧಿಸಲಾಗಿರುವ ಶೇ 25ರಷ್ಟು ಸುಂಕವನ್ನು ರದ್ದು ಮಾಡಿಲ್ಲ.

ನ್ಯಾಯಾಲಯದ ಈ ಆದೇಶ ಟ್ರಂಪ್‌ ಅವರಿಗಾದ ಹಿನ್ನಡೆ ಎಂದೇ ವಿಶ್ಲೇಷಲಾಗುತ್ತಿದೆ. ಇನ್ನೊಂದೆಡೆ, ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಗುರುವಾರ ಚೇತರಿಕೆ ಕಂಡು ಬಂತು.

ನ್ಯಾಯಾಲಯದ ಆದೇಶ ಪ್ರಶ್ನಿಸಿ ಟ್ರಂಪ್‌ ಆಡಳಿತ ಪರ ಅಟಾರ್ನಿಗಳು ಮೇಲ್ಮನವಿ ಸಲ್ಲಿಸಿದ್ದಾರೆ. 

ಅಮೆರಿಕ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಅಧಿಕ ಪ್ರತಿ ಸುಂಕ ಹೇರಿದ್ದರಿಂದಾಗಿ, ಅಮೆರಿಕದೊಂದಿಗೆ ವ್ಯಾಪಾರ ನಡೆಸುತ್ತಿರುವ ದೇಶಗಳು ಸಂಕಷ್ಟಕ್ಕೀಡಾಗಿದ್ದವು. ನ್ಯಾಯಾಲಯದ ಈ ಆದೇಶದಿಂದ ವಿವಿಧ ದೇಶಗಳು ನಿರಾಳವಾಗಿವೆ.

ಶ್ವೇತಭವನ ಪ್ರತಿಕ್ರಿಯೆ: ‘ರಾಷ್ಟ್ರದ ತುರ್ತುಗಳ ಕುರಿತು ನಿರ್ಧಾರ ಕೈಗೊಳ್ಳುವುದು  ಚುನಾಯಿತರಲ್ಲದ ನ್ಯಾಯಮೂರ್ತಿಗಳ ಕೆಲಸವಲ್ಲ’ ಎಂದು ಶ್ವೇತಭವನದ ವಕ್ತಾರ ಕುಶ್‌ ದೇಸಾಯಿ ಹೇಳಿದ್ದಾರೆ.

‘‘ಅಮೆರಿಕ ಮೊದಲು’ ಎಂಬ ನೀತಿಯ ಭಾಗವಾಗಿ ಟ್ರಂಪ್‌ ಅವರು ತಮಗಿರುವ ಅಧಿಕಾರ ಬಳಸಿ ಸುಂಕಗಳ ಕುರಿತ ನಿರ್ಧಾರ ಕೈಗೊಂಡಿದ್ದರು’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಶ್ವ ಸಮುದಾಯ ಮತ್ತು ಅಮೆರಿಕದ ಭಾಗೀದಾರರ ಅಹವಾಲುಗಳಿಗೆ ಅಮೆರಿಕ ಕಿವಿಗೊಡಬೇಕು. ಏಕಪಕ್ಷೀಯವಾಗಿ ಹಾಗೂ ತಪ್ಪಾಗಿ ಹೇರಿರುವ ಸುಂಕಗಳನ್ನು ಸಂಪೂರ್ಣ ಹಿಂಪಡೆಯಬೇಕು
ಹಿ ಯಾಂಗ್‌ಷಿಯಾನ್, ಚೀನಾ ವಾಣಿಜ್ಯ ಸಚಿವಾಲಯ ವಕ್ತಾರೆ
ಅಮೆರಿಕದ ಅಂತರರಾಷ್ಟ್ರೀಯ ವಾಣಿಜ್ಯ ನ್ಯಾಯಾಲಯ ನೀಡಿರುವ ತೀರ್ಪನ್ನು ಅಧ್ಯಯನ ಮಾಡಿದ ನಂತರ ಪ್ರತಿಕ್ರಿಯಿಸುವೆ
ರೋಸಿ ಅಕಝಾವಾ, ಸುಂಕಗಳ ಕುರಿತ ರಾಯಭಾರಿ, ಜಪಾನ್‌
ಟ್ರಂಪ್‌ ಆಡಳಿತ ವಿಧಿಸಿರುವ ಸುಂಕಗಳ ಕುರಿತ ವಿಚಾರಣೆ ಇನ್ನೂ ಮುಗಿದಿಲ್ಲ. ಹೀಗಾಗಿ, ಅಮೆರಿಕದಲ್ಲಿ ನಡೆಯುತ್ತಿರುವ ನ್ಯಾಯಾಂಗ ಪ್ರಕ್ರಿಯೆ ಕುರಿತು ಪ್ರತಿಕ್ರಿಯಿಸುವುದಿಲ್ಲ. ಪರಸ್ಪರರಿಗೆ ಅನುಕೂಲವಾಗುವಂತಹ ಒಪ್ಪಂದಗಳಿಗೆ ಐರೋಪ್ಯ ಒಕ್ಕೂಟ ಹಾಗೂ ಅಮೆರಿಕ ಮುಂದಾಗಬೇಕು
ಜರ್ಮನಿ ಹಣಕಾಸು ಸಚಿವಾಲಯ ವಕ್ತಾರ
ಸುಂಕಗಳ ಕುರಿತು ನ್ಯಾಯಾಲಯ ನೀಡಿರುವ ತೀರ್ಪು ಅಮೆರಿಕದ ಆಂತರಿಕ ವಿಚಾರ. ಅಲ್ಲದೇ, ಇದು ಕಾನೂನು ಪ್ರಕ್ರಿಯೆಯ ಆರಂಭಿಕ ಹಂತವಾಗಿದೆ
ಬ್ರಿಟನ್‌ ಸರ್ಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.