ADVERTISEMENT

ಪಾರ್ಟಿಗೇಟ್‌ ಹಗರಣ: ಮತ್ತೆ ಕ್ಷಮೆಯಾಚಿಸಿದ ಬ್ರಿಟನ್‌ ಮಾಜಿ ಪ್ರಧಾನಿ ಜಾನ್ಸನ್‌

ಪಿಟಿಐ
Published 23 ಮಾರ್ಚ್ 2023, 11:52 IST
Last Updated 23 ಮಾರ್ಚ್ 2023, 11:52 IST
ಬೋರಿಸ್‌ ಜಾನ್ಸನ್‌–ಎಎಫ್‌ಪಿ ಚಿತ್ರ
ಬೋರಿಸ್‌ ಜಾನ್ಸನ್‌–ಎಎಫ್‌ಪಿ ಚಿತ್ರ   

ಲಂಡನ್‌: ಬ್ರಿಟನ್‌ ಮಾಜಿ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು ‘ಪಾರ್ಟಿಗೇಟ್‌’ ಹಗರಣಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ಕ್ಷಮೆಯಾಚಿಸಿದ್ದಾರೆ.

‘ಕೋವಿಡ್‌ ಪಿಡುಗಿನ ಹಿನ್ನೆಲೆಯಲ್ಲಿ ಜಾರಿಯಲ್ಲಿದ್ದ ನಿರ್ಬಂಧಗಳನ್ನು ಉಲ್ಲಂಘಿಸಿ, ಸಂತೋಷಕೂಟಗಳನ್ನು ಆಯೋಜಿಸಿದ್ದ ಬಗ್ಗೆ ಸಂಸತ್‌ಗೆ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಕ್ಷಮೆ ಯಾಚಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.

ಹಗರಣಕ್ಕೆ ಸಂಬಂಧಿಸಿ ಅವರು ಸಂಸತ್‌ನ ಕೆಳಮನೆಯ (ಹೌಸ್‌ ಆಫ್‌ ಕಾಮನ್ಸ್‌) ಹಕ್ಕುಬಾಧ್ಯತಾ ಸಮಿತಿ ಎದುರು ಹಾಜರಾದ ಸಂದರ್ಭದಲ್ಲಿ, ಕ್ಷಮೆ ಯಾಚಿಸಿದ್ದಾರೆ.

ADVERTISEMENT

ಈ ವೇಳೆ ಅವರು, ‘ಈ ವಿಷಯದಲ್ಲಿ ನಾನು ಸದನದ ದಿಕ್ಕು ತಪ್ಪಿಸುವ ಮೂಲಕ ಪ್ರಮಾದ ಎಸಗಿದ್ದು, ಇದಕ್ಕಾಗಿ ಕ್ಷಮೆ ಕೋರುತ್ತೇನೆ. ಆದರೆ, ಅಜಾಗರೂಕತೆ ಅಥವಾ ಉದ್ದೇಶಪೂರ್ವಕವಾಗಿ ಹೀಗೆ ಮಾಡಿದ್ದೇನೆ ಎಂದು ಹೇಳುವುದು ಸುಳ್ಳು’ ಎಂದು ಹೇಳಿಕೆ ನೀಡಿದ್ದಾರೆ.

ಜಾನ್ಸನ್‌ ಅವರು ಪ್ರಧಾನಿಯಾಗಿದ್ದಾಗ, ಕೋವಿಡ್‌ ನಿರ್ಬಂಧಗಳನ್ನು ಉಲ್ಲಂಘಿಸಿ ಸಂತೋಷಕೂಟ ನಡೆಸಿದ್ದರು. ಇದನ್ನು ‘ಪಾರ್ಟಿಗೇಟ್‌’ ಎಂದೇ ಕರೆಯಲಾಗುತ್ತದೆ.

ಸಮಿತಿಯು ವಿಚಾರಣಾ ವರದಿಯನ್ನು ಸಂಸತ್‌ನಲ್ಲಿ ಮಂಡಿಸಲಿದ್ದು, ಜಾನ್ಸನ್‌ ವಿರುದ್ಧ ಕೈಗೊಳ್ಳಬೇಕಾದ ಕ್ರಮಕ್ಕೆ ಸಂಬಂಧಿಸಿ ಸಂಸದರು ಮತ ಚಲಾಯಿಸಲಿದ್ದಾರೆ.

ಜಾನ್ಸನ್‌ ಅವರನ್ನು 10 ದಿನ ಅಥವಾ ಅದಕ್ಕಿಂತ ಹೆಚ್ಚು ದಿನಗಳ ಕಾಲ ಅಮಾನತು ಮಾಡುವುದಕ್ಕೆ ಸಂಸತ್‌ನ ಅನುಮೋದನೆ ದೊರೆತಲ್ಲಿ, ಜಾನ್ಸನ್‌ ಪ್ರತಿನಿಧಿಸುವ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.