ADVERTISEMENT

ಗಂಗಾನದಿ ಸ್ವಚ್ಛತೆಗೆ ಶ್ರಮಿಸುತ್ತಿರುವ ನವೋದ್ಯಮಕ್ಕೆ ವಿಶ್ವಸಂಸ್ಥೆ ಗೌರವ

UN honours Indian startup which recycles floral waste from temples to clean Ganga

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2018, 18:08 IST
Last Updated 12 ಡಿಸೆಂಬರ್ 2018, 18:08 IST

ಕಟೊವೈಸ್‌ (ಪೋಲಂಡ್‌) : ದೇವಸ್ಥಾನದಿಂದ ನದಿ ಸೇರುವ ಸಾವಿರಾರು ಟನ್ ಹೂವಿನ ತ್ಯಾಜ್ಯವನ್ನು ಮರುಬಳಕೆ ಮಾಡುವ ಮೂಲಕ ಗಂಗಾ ನದಿಯನ್ನು ಸ್ವಚ್ಛಗೊಳಿಸಲು ಶ್ರಮಿಸುತ್ತಿರುವ ಭಾರತದ ನವೋದ್ಯಮವೊಂದನ್ನು ವಿಶ್ವಸಂಸ್ಥೆಯಲ್ಲಿ ಗೌರವಿಸಲಾಗಿದೆ.

ಮಂಗಳವಾರ ನಡೆದ ವಿಶ್ವಸಂಸ್ಥೆ ಹವಾಮಾನ ಬದಲಾವಣೆ ಸಮಾವೇಶದ ವಿಶೇಷ ಸಮಾರಂಭದಲ್ಲಿ ಭಾರತದ ಈ ನವೋದ್ಯಮದ ಜತೆಗೆ 13 ದೇಶಗಳಿಗೆ ‘ಯುನೈಟೆಡ್‌ ನೇಷನ್ಸ್‌ ಕ್ಲೈಮೇಟ್‌ ಆಕ್ಷನ್‌ ಅವಾರ್ಡ್‌’ ನೀಡಿ ಗೌರವಿಸಲಾಗಿದೆ.

ದೇಗುಲಗಳ ತ್ಯಾಜ್ಯದ ಸಮಸ್ಯೆಗೆ ಉತ್ತರ ಪ್ರದೇಶ ಮೂಲದ ‘ಹೆಲ್ಪ್ ಅಸ್‌ ಗ್ರಿನ್’ ನವೋದ್ಯಮವು ‘ಫ್ಲವರ್‌ರಿಸೈಕ್ಲಿಂಗ್‌ (ಹೂವು ಮರುಬಳಕೆ) ಹೆಸರಿನಲ್ಲಿ ವಿಶ್ವದ ಮೊದಲ ಲಾಭದಾಯಕ ಪರಿಹಾರವನ್ನು ರೂಪಿಸಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

ADVERTISEMENT

ಈ ನವೋದ್ಯಮ ಆರಂಭವಾದಾಗಿನಿಂದ ಇಲ್ಲಿಯವರೆಗೆ 1,260 ಮಹಿಳೆಯರು ಇದನ್ನು ಬೆಂಬಲಿಸಿದ್ದಾರೆ. ಅಲ್ಲದೆ, ಇದರಲ್ಲಿ 19 ಮಕ್ಕಳು ತಮ್ಮ ತಾಯಂದಿರ ಜತೆಗೆ ಪೌರಕಾರ್ಮಿಕರಂತೆ ಕೆಲಸ ಮಾಡಿ, ಶಾಲೆಗೂ ಹೋಗುತ್ತಿದ್ದಾರೆ.

ಉತ್ತರ ಪ್ರದೇಶದ ದೇವಾಲಯಗಳಿಂದ ಪ್ರತಿ ದಿನವೂ 8.4 ಟನ್ ಹೂವಿನ ತ್ಯಾಜ್ಯವನ್ನು ಈ ನವೋದ್ಯಮ ಸಂಗ್ರಹಿಸುತ್ತಿದೆ. ಈ ಪವಿತ್ರವಾದ ಹೂವುಗಳು ‘ಫ್ಲವರ್‌ರಿಸೈಕ್ಲಿಂಗ್‌’ ತಂತ್ರಜ್ಞಾನದ ಮೂಲಕ ಕರಕುಶಲ ವಸ್ತುಗಳಾಗಿ ಮಾರ್ಪಡುತ್ತಿವೆ. ಊದಿನ ಕಡ್ಡಿ, ಸಾವಯವ ಎರೆಹುಳು ಗೊಬ್ಬರ ಹಾಗೂ ಪೊಟ್ಟಣ ಕಟ್ಟಲು ಬಳಕೆ ಮಾಡುವ ಸುಲಭವಾಗಿ ಕರಗುವ ವಸ್ತುಗಳಾಗಿ ತಯಾರಾಗುತ್ತಿವೆ.

ವಿಶ್ವಸಂಸ್ಥೆ ಪ್ರಕಾರ, 11,060 ಟನ್‌ ದೇವಾಲಯದ ತ್ಯಾಜ್ಯವನ್ನು ಈ ನವೋದ್ಯಮ ಮಹಿಳೆಯರ ಕರಕುಶಲದ ಕೆಲಸದ ಮೂಲಕ ಮರು ಬಳಕೆಗೆ ಬರುವಂತೆ ಮಾಡಿದೆ.

ದೇವಾಲಯದ ತ್ಯಾಜ್ಯದ ಮೂಲಕ ನದಿ ಸೇರುವ 110 ಮೆಟ್ರಿಕ್ ಟನ್‌ ರಾಸಾಯನಿಕ ಕೀಟನಾಶಕ ತಡೆಯಲಾಗಿದೆ. 73 ಪೌರ ಕಾರ್ಮಿಕ ಕುಟುಂಬಗಳ ಆದಾಯ ಕನಿಷ್ಠ ಆರು ಪಟ್ಟು ಹೆಚ್ಚಾಗಿದೆ. 365 ಕುಟುಂಬಗಳ ಜೀವನಮಟ್ಟ ಹೆಚ್ಚಾಗಿದೆ. ಅಲ್ಲದೆ, ಅವರ ಸ್ಥಿರ ಆದಾಯವೂ ಹೆಚ್ಚಿದೆ ಎಂದು ಅದು ಹೇಳಿದೆ.

ದೇವಾಲಯಕ್ಕೆ ಅರ್ಪಿಸುವ ಹೂವುಗಳು ಕೊಳೆತು ತ್ಯಾಜ್ಯಗಳಾಗಿ ನದಿ ಸೇರುತ್ತಿವೆ. ಕೊಳೆತ ಹೂವಿನಿಂದ ಬಿಡುಗಡೆಯಾಗುವ ಆರ್ಸೆನಿಕ್, ಸೀಸ ಮತ್ತು ಕ್ಯಾಡ್ಮಿಯಂನಂತಹ ಕೀಟನಾಶಕಗಳು, ವಿಷ ಪದಾರ್ಥ ನದಿಯ ನೀರನ್ನು ಮಾಲಿನ್ಯಗೊಳಿಸಿ, ಜಲಚರಗಳಿಗೂ ಕಂಟಕವಾಗುತ್ತಿದೆ. ಅಲ್ಲದೆ, ನೀರಿನ ಮೂಲಕ ಅಗಾಧ ಪ್ರಮಾಣದಲ್ಲಿ ರೋಗ ಹರಡಲು ಕಾರಣವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.