ADVERTISEMENT

ಭಯೋತ್ಪಾದಕರ ಆಸ್ತಿ ಮುಟ್ಟುಗೋಲು: ಪಾಕ್‌ಗೆ ಅಮೆರಿಕ ತಾಕೀತು

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2019, 20:15 IST
Last Updated 16 ಫೆಬ್ರುವರಿ 2019, 20:15 IST
   

ವಾಷಿಂಗ್ಟನ್‌: ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿಷೇಧಿಸಿರುವ ಭಯೋತ್ಪಾದಕ ಸಂಘಟನೆಗಳು ಮತ್ತು ಅವುಗಳ ನಾಯಕರಿಗೆ ಸೇರಿದ ಹಣ, ಆಸ್ತಿಯನ್ನು ತಕ್ಷಣವೇ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಅಮೆರಿಕವು ಪಾಕಿಸ್ತಾನಕ್ಕೆ ಶುಕ್ರವಾರ ತಾಕೀತು ಮಾಡಿದೆ.

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದ ಆವಂತಿಪೋರಾದಲ್ಲಿ ಸಿಆರ್‌ಪಿಎಫ್‌ ಯೋಧರ ಮೇಲೆ ನಡೆದ ಆತ್ಮಾಹುತಿ ದಾಳಿಯ ಹೊಣೆ ಹೊತ್ತಿರುವ ಪಾಕ್‌ ಮೂಲದ ಜೈಷ್‌ ಎ ಮೊಹಮ್ಮದ್‌ (ಜೆಇಎಂ) ಉಗ್ರ ಸಂಘಟನೆ ಮಾತ್ರವಲ್ಲದೆ ತನ್ನ ನೆಲದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಇನ್ನೂ ಹಲವು ಉಗ್ರ ಸಂಘಟನೆಗಳ ವಿರುದ್ಧ ಪಾಕಿಸ್ತಾನ ತಡ ಮಾಡದೆ, ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಅದು ಹೇಳಿದೆ.

‘ಜೆಇಎಂ ಉಗ್ರ ಸಂಘಟನೆಯನ್ನು ವಿಶ್ವಸಂಸ್ಥೆ 2002ರಲ್ಲೇ ನಿಷೇಧಿಸಿದೆ. ಇದಕ್ಕೂ ಹಿಂದೆ 2001ರ ಡಿಸೆಂಬರ್‌ನಲ್ಲಿ ಅಮೆರಿಕ ಈ ಉಗ್ರ ಸಂಘಟನೆ ನಿಷೇಧಿಸಿದೆ. ಆದರೂ, ಅದು ಇಂದಿಗೂ ಪಾಕ್‌ ನೆಲದಲ್ಲಿ ಕಾರ್ಯಾಚರಿಸುತ್ತಿದೆ. ಈ ಉಗ್ರ ಸಂಘಟನೆಯಿಂದ ಭವಿಷ್ಯದಲ್ಲಿ ಮತ್ತೆಂದೂ ದಾಳಿಗಳು ಆಗದಂತೆ ತೆಗೆದುಕೊಳ್ಳುವ ಎಲ್ಲ ಮುನ್ನೆಚ್ಚರಿಕೆಯ ಕ್ರಮಗಳನ್ನು ನಾವು ಸಂಪೂರ್ಣ ಬೆಂಬಲಿಸುತ್ತೇವೆ’ ಎಂದು ಅಮೆರಿಕದ ವಿದೇಶಾಂಗ ವಕ್ತಾರರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.