ADVERTISEMENT

ಮಹಿಳೆಗೆ ಮಾರಕ ಇಂಜೆಕ್ಷನ್‌ ನೀಡಿ ಶಿಕ್ಷೆ ಜಾರಿ

ಏಳು ದಶಕಗಳ ನಂತರ ಅಮೆರಿಕದಲ್ಲಿ ಮರಣದಂಡನೆ

ಏಜೆನ್ಸೀಸ್
Published 13 ಜನವರಿ 2021, 10:11 IST
Last Updated 13 ಜನವರಿ 2021, 10:11 IST
ಲೀಸಾ ಮಾಂಟ್‌ಗೊಮೇರಿ
ಲೀಸಾ ಮಾಂಟ್‌ಗೊಮೇರಿ   

ಟೆರೆ ಹೋಟ್‌: ಅಮೆರಿಕದ ಕಾನ್ಸಾನ್‌ನ ಲೀಸಾ ಮಾಂಟ್‌ಗೊಮೇರಿ ಎಂಬ ಮಹಿಳೆಗೆ ಬುಧವಾರ ಮಾರಕ ಇಂಜೆಕ್ಷನ್‌ ನೀಡಲಾಯಿತಲ್ಲದೇ, ಮಹಿಳೆ ಮೃತಪಟ್ಟಿದ್ಧಾಳೆ ಎಂದು ಬೆಳಿಗ್ಗೆ 1.31ಕ್ಕೆ ಘೋಷಿಸಲಾಯಿತು.

ಏಳು ದಶಕಗಳ ನಂತರ ಅಮೆರಿಕದಲ್ಲಿ ಅಪರಾಧಿಗೆ ಮರಣದಂಡನೆ ಜಾರಿ ಮಾಡಿರುವುದು ಗಮನಾರ್ಹ. ಇಂಡಿಯಾನಾದ ಟೆರೆ ಹೋಟ್‌ನ ಜೈಲಿನಲ್ಲಿ ಈ ಶಿಕ್ಷೆಯನ್ನು ಜಾರಿಗೊಳಿಸಲಾಯಿತು.

ಬಾಬಿ ಜೊ ಸ್ಟಿನ್ನೆಟ್‌ ಎಂಬ 23 ವರ್ಷದ ಗರ್ಭಿಣಿ ಮಹಿಳೆ ಮಿಸ್ಸೌರಿಯಲ್ಲಿ ವಾಸಿಸುತ್ತಿದ್ದರು. 2004ರಲ್ಲಿ ಈ ಮಹಿಳೆಯನ್ನು ಉಸಿರುಗಟ್ಟಿಸಿ ಕೊಂದು, ಗರ್ಭದಲ್ಲಿದ್ದ ಹೆಣ್ಣು ಮಗುವನ್ನು ಚಾಕುವಿನಿಂದ ಕತ್ತರಿಸಿದ ಅಪರಾಧಕ್ಕಾಗಿ ಲೀಸಾಗೆ ಮರಣದಂಡನೆ ವಿಧಿಸಲಾಗಿತ್ತು.

ADVERTISEMENT

ಶಿಕ್ಷೆ ಜಾರಿಗೊಳಿಸಿದ ನಂತರ ಪ್ರತಿಕ್ರಿಯಿಸಿದ ಲೀಸಾ ಪರ ವಕೀಲೆ ಕೆಲ್ಲಿ ಹೆನ್ರಿ, ‘ಮರಣದಂಡನೆಯನ್ನು ತಡೆಯುವಲ್ಲಿ ಆಡಳಿತ ವಿಫಲವಾಗಿರುವುದು ಇಂದು ಜಗಜ್ಜಾಹೀರಾಯಿತು. ಲೀಸಾಗೆ ಮರಣದಂಡನೆಯನ್ನು ಜಾರಿಗೊಳಿಸಿದ ಸಂದರ್ಭದಲ್ಲಿ ಹಾಜರಿದ್ದ ಪ್ರತಿಯೊಬ್ಬರು ಅವಮಾನದಿಂದ ತಲೆ ತಗ್ಗಿಸಬೇಕು‘ ಎಂದರು.

ಮರಣದಂಡನೆಯನ್ನು ರದ್ದುಪಡಿಸುವಂತೆ ಒತ್ತಾಯಿಸಿ ಜನರು ಜೈಲಿನ ಹೊರಗೆ ಪ್ರತಿಭಟನೆಯನ್ನೂ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.