ADVERTISEMENT

100 ರಾಷ್ಟ್ರಗಳಿಗೆ 20 ಕೋಟಿ ಡೋಸ್‌ ಕೋವಿಡ್ ಲಸಿಕೆ ದೇಣಿಗೆಯಾಗಿ ನೀಡಿದ ಅಮೆರಿಕ

ಪಿಟಿಐ
Published 21 ಅಕ್ಟೋಬರ್ 2021, 6:09 IST
Last Updated 21 ಅಕ್ಟೋಬರ್ 2021, 6:09 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್‌: ಅಮೆರಿಕ ಸರ್ಕಾರ 20 ಕೋಟಿ ಡೋಸ್‌ಗಳಷ್ಟು ಕೊರೊನಾ ಲಸಿಕೆಯನ್ನು 100ಕ್ಕೂ ಹೆಚ್ಚು ದೇಶಗಳಿಗೆ ದೇಣಿಗೆಯಾಗಿ ನೀಡಿದೆ ಎಂದು ಗುರುವಾರ ಶ್ವೇತಭವನದ ಪ್ರಕಟಣೆ ತಿಳಿಸಿದೆ.

ವಿಶ್ವದ ಬೇರೆ ಬೇರೆ ರಾಷ್ಟ್ರಗಳಲ್ಲಿ ಜನರು ಇನ್ನೂ ಮೊದಲ ಡೋಸ್‌ ತೆಗೆದುಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಇರುವಾಗ ಅಮೆರಿಕದಲ್ಲಿ ಬೂಸ್ಟರ್‌ ಲಸಿಕೆಯ ಡೋಸ್‌ಗಳನ್ನು ನೀಡುತ್ತಿರುವುದಕ್ಕೆ ಅಧ್ಯಕ್ಷ ಜೋ ಬೈಡನ್ ಅವರು ವಿಶ್ವದ ಹಲವು ನಾಯಕರಿಂದ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು.

ಈ ಹಿನ್ನೆಲೆಯಲ್ಲಿ ಅಮೆರಿಕ ತನ್ನ ಕೋವಿಡ್ ಲಸಿಕೆಯ ದೇಣಿಗೆಯನ್ನು ಹೆಚ್ಚಿಸಿದೆ. ಕಳೆದ ವಾರ ಅಮೆರಿಕ ಜಾನ್‌ಸನ್ ಅಂಡ್ ಜಾನ್‌ಸನ್ ಕಂಪನಿಯ ಲಸಿಕೆಯನ್ನು ಆಫ್ರಿಕಾ ಒಕ್ಕೂಟಕ್ಕೆ ದೇಣಿಗೆಯಾಗಿ ನೀಡಿರುವುದಾಗಿ ಅಧ್ಯಕ್ಷ ಬೈಡನ್, ಕೀನ್ಯಾ ಅಧ್ಯಕ್ಷ ಉಹುರು ಕೆನ್ಯಟ್ಟಾಗೆ ತಿಳಿಸಿದ್ದಾರೆ.

ADVERTISEMENT

‘ಇಲ್ಲಿವರೆಗೂ ಅಮೆರಿಕ 20 ಕೋಟಿ ಡೋಸ್‌ಗಳಷ್ಟು ಕೋವಿಡ್ ಲಸಿಕೆಗಳನ್ನು 100ಕ್ಕೂ ಹೆಚ್ಚು ದೇಶಗಳಿಗೆ ದೇಣಿಗೆಯಾಗಿ ನೀಡುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದೆ‘ ಎಂದು ಶ್ವೇತಭವನ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.

‘ಅಮೆರಿಕ ಮತ್ತು ಅಂತರರಾಷ್ಟ್ರೀಯ ಕೋವಾಕ್ಸ್‌ ಲಸಿಕೆ ಹಂಚಿಕೆ ಕಾರ್ಯಕ್ರಮ ಜಂಟಿಯಾಗಿ ಮುಂದಿನ ವರ್ಷದವರೆಗೂ ಅಗತ್ಯವಿರುವ ದೇಶಗಳಿಗೆ 100 ಕೋಟಿಗೂ ಹೆಚ್ಚು ಡೋಸ್‌ಗಳಷ್ಟು ಲಸಿಕೆಗಳನ್ನು ಪೂರೈಸುವ ಬದ್ಧತೆ ಹೊಂದಿರುವುದಾಗಿ‘ ಹೇಳಿಕೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.