ADVERTISEMENT

ಅಮೆರಿಕ–ಯುರೋಪ್‌ ಮೈತ್ರಿ ಮುರಿಯಲು ಟ್ರಂಪ್‌ ಆಡಳಿತ ಯತ್ನ: ಪೋಪ್‌ ಲಿಯೊ–14

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 16:44 IST
Last Updated 10 ಡಿಸೆಂಬರ್ 2025, 16:44 IST
ಪೋಪ್‌ ಲಿಯೊ14
ಪೋಪ್‌ ಲಿಯೊ14   

ರೋಮ್‌ ಅಮೆರಿಕ ಮತ್ತು ಯುರೋಪ್‌ ನಡುವಿನ ಬಹುಕಾಲದ ಮೈತ್ರಿಯನ್ನು ವಿಭಜಿಸುವಂಥ ಯತ್ನವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೇತೃತ್ವದ ಆಡಳಿತ ಮಾಡುತ್ತಿದೆ ಎಂದು ಪೋಪ್‌ ಲಿಯೊ–14 ಅವರು ಅಸಮಾಧಾನ ವ್ಯಕ್ತಪ‍ಡಿಸಿದ್ದಾರೆ.

ಅಮೆರಿಕದ ಶಾಂತಿ ಯೋಜನೆ, ಭದ್ರತೆ ಕುರಿತು ಐರೋಪ್ಯ ರಾಷ್ಟ್ರಗಳೊಂದಿಗೆ ಮಾತುಕತೆ ನಡೆಸುವ ಉದ್ದೇಶದಿಂದ ಪ್ರವಾಸ ಕೈಗೊಂಡಿರುವ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ, ಪೋಪ್‌ ಲಿಯೊ–14 ಅವರನ್ನೂ ಮಂಗಳವಾರ ಭೇಟಿಯಾಗಿದ್ದಾರೆ. 

ಈ ಭೇಟಿಯ ಬಳಿಕ ಅಮೆರಿಕದ ಶಾಂತಿ ಪ್ರಸ್ತಾವದ ಪ್ರಕ್ರಿಯೆಗಳಲ್ಲಿ ಐರೋಪ್ಯ ರಾಷ್ಟ್ರಗಳನ್ನು ಕಡೆಗಣಿಸಲಾಗುತ್ತಿದೆ ಎನ್ನುವ ವಿಚಾರದ ಬಗ್ಗೆ ಮಾಧ್ಯಮಗಳು ಪೋಪ್‌ ಅವರನ್ನು ಪ್ರಶ್ನಿಸಿವೆ.

ADVERTISEMENT

ಪ್ರತಿಕ್ರಿಯಿಸಿರುವ ಅವರು, ‘ಯುರೋಪ್‌ನಲ್ಲೇ ಯುದ್ಧ ನಡೆಯುತ್ತಿರುವಾಗ ಯುರೋಪ್ ಅನ್ನೇ ಹೊರಗಿಟ್ಟು ಶಾಂತಿ ಪ್ರಸ್ತಾವ ರೂಪಿಸುವುದು ಅವಾಸ್ತವಿಕ ಪ್ರಕ್ರಿಯೆಯಾಗುತ್ತದೆ. ಪ್ರಸಕ್ತ ಮತ್ತು ಭವಿಷ್ಯದ ಭದ್ರತೆಗೆ ಖಾತರಿಯ ಅಗತ್ಯವಿದೆ. ಹೀಗಾಗಿ ಯುರೋ‍ಪ್‌ ಶಾಂತಿ ಯೋಜನೆಯ ಭಾಗವಾಗಲೇಬೇಕು. ಆದರೆ, ಎಲ್ಲರೂ ಇದನ್ನು ಅರ್ಥೈಸಿಕೊಳ್ಳುವುದಿಲ್ಲ’ ಎಂದಿದ್ದಾರೆ.

ಇದೇ ವೇಳೆ, ಅಮೆರಿಕ –ಯುರೋಪ್‌ ಮೈತ್ರಿ ಸಂಬಂಧಿಸಿದಂತೆ ಟ್ರಂಪ್ ಆಡಳಿತ ಹೊಂದಿರುವ ನಿಲುವಿನ ಬಗ್ಗೆಯೂ ಮಾತನಾಡಿ, ‘ನಾನು ಕೇಳಿದ ಹಾಗೂ ಓದಿದ ಪ್ರಕಾರ, ಟ್ರಂಪ್‌ ಆಡಳಿತದ ನಿಲುವುಗಳು ಯುರೋಪ್‌ ಮತ್ತು ಅಮೆರಿಕದ ನಡುವಿನ ಬಹುಕಾಲದ ಮೈತ್ರಿಯ ವಿಚಾರದಲ್ಲಿ ಬಹುದೊಡ್ಡ ಬದಲಾವಣೆಗಳಿಗೆ ಕಾರಣವಾಗಲಿವೆ. ಇಂದಿನ ಮತ್ತ ಭವಿಷ್ಯದ ಮೈತ್ರಿಯನ್ನು ಮುರಿಯಲು ಇದು ಕಾರಣವಾಗುತ್ತದೆ ಎಂದು ನನಗೆ ಅನಿಸುತ್ತದೆ’ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.