
ವಾಷಿಂಗ್ಟನ್: ಸ್ಥಗಿತಗೊಂಡಿರುವ ಅಮೆರಿಕ ಆಡಳಿತ ವ್ಯವಸ್ಥೆಯನ್ನು ಪುನರಾರಂಭಿಸುವ ಮಸೂದೆಯನ್ನು ಸೋಮವಾರ ಸೆನೆಟ್ ಅಂಗೀಕರಿಸಿದೆ.
ಈ ಮೂಲಕ ಅಮೆರಿಕದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅತೀ ಹೆಚ್ಚು ದಿನ (46 ದಿನ) ಸ್ಥಗಿತಗೊಂಡಿದ್ದ ಸರ್ಕಾರ ಮತ್ತೆ ಕಾರ್ಯಾಚರಿಸಲು ಸಜ್ಜಾಗಿದೆ.
ಡೆಮಾಕ್ರಟಿಕ್ ಪಕ್ಷದ ಕೆಲ ಸದಸ್ಯರು ತಮ್ಮ ಪಕ್ಷದೊಳಗಿನ ಭಿನ್ನಾಭಿಪ್ರಾಯದ ನಡುವೆಯೂ ರಿಪಬ್ಲಿಕ್ ಸದಸ್ಯರ ಜೊತೆಗೆ ಒಪ್ಪಂದಕ್ಕೆ ಸಮ್ಮತಿಸಿದ್ದರಿಂದ ಈ ಬೆಳವಣಿಗೆ ನಡೆದಿದೆ.
ಸೆನೆಟ್‌ನಲ್ಲಿ ಅಂಗೀಕಾರಗೊಂಡಿರುವ ಮಸೂದೆಯು ಜಾರಿಗೆ ಬರಬೇಕಾದರೆ ಸಂಸತ್ತಿನಲ್ಲಿ ಅಂಗೀಕಾರಗೊಂಡು ಅಧ್ಯಕ್ಷರ ಅಂಕಿತ ಬೀಳಬೇಕು. ಸಂಸತ್ ಸದಸ್ಯರು ಮತಚಲಾವಣೆಗಾಗಿ ವಾಷಿಂಗ್ಟನ್‌ಗೆ ಆಗಮಿಸಬೇಕಾಗಿರುವುದರಿಂದ ಸರ್ಕಾರ ಇನ್ನೂ ಕೆಲ ದಿನ ಸ್ಥಗಿತಗೊಂಡಿರುತ್ತದೆ. ಆದರೆ ಅಧಿಕೃತ ಸೂಚನೆಯ ಪ್ರಕಾರ ಬುಧವಾರ ಮಧ್ಯಾಹ್ನದ ಬಳಿಕ ಸಂಸತ್ತಿನಲ್ಲಿ ಮತದಾನ ಆರಂಭಗೊಳ್ಳಬಹುದು.
ಮಸೂದೆಗೆ ಬೆಂಬಲ ವ್ಯಕ್ತಪಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಶೀಘ್ರದಲ್ಲಿ ಸರ್ಕಾರವನ್ನು ಪುನರಾರಂಭಿಸುತ್ತೇವೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.