ADVERTISEMENT

ಭಾರತದ ಸರಕುಗಳ ಮೇಲೆ ಶೇ 25ರಷ್ಟು ಹೆಚ್ಚುವರಿ ಸುಂಕ: ಇಂದು ಜಾರಿ

ಪಿಟಿಐ
ರಾಯಿಟರ್ಸ್
Published 26 ಆಗಸ್ಟ್ 2025, 23:20 IST
Last Updated 26 ಆಗಸ್ಟ್ 2025, 23:20 IST
<div class="paragraphs"><p>ಅಮೆರಿಕ-ಭಾರತ </p></div>

ಅಮೆರಿಕ-ಭಾರತ

   

(ಐಸ್ಟೋಕ್ ಸಾಂದರ್ಭಿಕ ಚಿತ್ರ)

ವಾಷಿಂಗ್ಟನ್‌/ ನವದೆಹಲಿ: ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಶೇ 25ರಷ್ಟು ಹೆಚ್ಚುವರಿ ಸುಂಕ ವಿಧಿಸುವ ಸಂಬಂಧ ಕರಡು ಅಧಿಸೂಚನೆಯನ್ನು ಅಮೆರಿಕ ಹೊರಡಿಸಿದೆ. ಡೊನಾಲ್ಡ್‌ ಟ್ರಂಪ್‌ ಆಡಳಿತದ ಈ ನಿರ್ಧಾರವು ಭಾರತದ ರಫ್ತುದಾರರ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗಿದೆ.

ADVERTISEMENT

ಕೆಲವೊಂದು ವಿನಾಯಿತಿಗಳನ್ನು ಹೊರತುಪಡಿಸಿದರೆ, ಅಮೆರಿಕದ ಮಾರುಕಟ್ಟೆ ಪ್ರವೇಶಿಸುವ ಭಾರತದ ಸರಕುಗಳ ಮೇಲಿನ ಒಟ್ಟು ಸುಂಕ ಈಗ ಶೇಕಡ 50 ಆಗಿದೆ. ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಅಮೆರಿಕವು ಮೊದಲು ಶೇ 25ರಷ್ಟು ಸುಂಕ ವಿಧಿಸಿತ್ತು. ಇದು ಆಗಸ್ಟ್‌ 7ರಂದು ಜಾರಿಯಾಗಿತ್ತು. 

‘ಭಾರತದ ಸರಕುಗಳ ಮೇಲಿನ ಹೊಸ ಸುಂಕ ವ್ಯವಸ್ಥೆ ಆಗಸ್ಟ್‌ 27ರ ಮಧ್ಯರಾತ್ರಿ 12.01ರ (ಭಾರತೀಯ ಕಾಲಮಾನ ಬುಧವಾರ ಬೆಳಿಗ್ಗೆ 9.31) ಬಳಿಕ ಜಾರಿಗೆ ಬರಲಿದೆ’ ಎಂದು ಅಮೆರಿಕದ ಹೋಮ್‌ಲ್ಯಾಂಡ್‌ ಸೆಕ್ಯುರಿಟಿ ಇಲಾಖೆಯು (ಕಸ್ಟಮ್ಸ್‌ ವಿಭಾಗ) ಸೋಮವಾರ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.

‘ಅಮೆರಿಕಕ್ಕೆ ಕಳುಹಿಸಲಿಕ್ಕಾಗಿ ಆಗಸ್ಟ್ 27ರ ಮಧ್ಯರಾತ್ರಿ 12.01ಕ್ಕೂ ಮೊದಲು ಹಡಗುಗಳಿಗೆ ಲೋಡ್‌ ಮಾಡಿರುವ ಭಾರತದ ಸರಕುಗಳಿಗೆ ಹೆಚ್ಚುವರಿ ಸುಂಕದಿಂದ ವಿನಾಯಿತಿ ನೀಡಲಾಗುವುದು’ ಎಂದು ಆದೇಶದಲ್ಲಿ ತಿಳಿಸಲಾಗಿದೆ. 

ರಷ್ಯಾದಿಂದ ತೈಲ ಖರೀದಿಸುವ ವಿಚಾರವಾಗಿ ಅಮೆರಿಕದ ಬೆದರಿಕೆಗೆ ಭಾರತ ಮಣಿಯದ ಕಾರಣ ಹೆಚ್ಚುವರಿಯಾಗಿ ಶೇ 25ರಷ್ಟು ಸುಂಕ ವಿಧಿಸುವುದಾಗಿ ಟ್ರಂಪ್‌ ಘೋಷಿಸಿದ್ದರು. ಹೆಚ್ಚುವರಿ ಸುಂಕದ ಹೊರೆ ತಪ್ಪಿಸಲಿಕ್ಕಾಗಿ ಒಪ್ಪಂದ ಮಾಡಿಕೊಳ್ಳಲು ಭಾರತಕ್ಕೆ 21 ದಿನಗಳ ಕಾಲಾವಕಾಶ ನೀಡಲಾಗಿತ್ತು. ಆದರೆ, ಯಾವುದೇ ಒಪ್ಪಂದ ಏರ್ಪಡದೇ ಇರುವುದರಿಂದ ಹೆಚ್ಚುವರಿ ಸುಂಕ ಸೇರಿ ಶೇ 50ರಷ್ಟು ಸುಂಕ ಆಕರಣೆ ಜಾರಿಗೆ ಬಂದಿದೆ.

ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಅಮೆರಿಕ ವಿಧಿಸಿರುವ ಹೆಚ್ಚುವರಿ ಸುಂಕ ನ್ಯಾಯಸಮ್ಮತವಾಗಿದ್ದು, ಇದು ‘ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಚಾರ’ ಎಂದು ಶ್ವೇತಭವನದ ವ್ಯಾಪಾರ ಸಲಹೆಗಾರ ಪೀಟರ್‌ ನವ್ರೊ ಈಚೆಗೆ ಸಮರ್ಥಿಸಿಕೊಂಡಿದ್ದರು. ಉಕ್ರೇನ್‌ ವಿರುದ್ಧದ ಯುದ್ಧದಲ್ಲಿ ಭಾರತವು ರಷ್ಯಾಕ್ಕೆ ಪರೋಕ್ಷವಾಗಿ ಹಣಕಾಸು ಒದಗಿಸುತ್ತಿದೆ ಎಂದು ಅಮೆರಿಕದ ಹಣಕಾಸು ಇಲಾಖೆ ಕಾರ್ಯದರ್ಶಿ ಸ್ಕಾಟ್‌ ಬೆಸೆಂಟ್‌ ಆರೋಪಿಸಿದ್ದರು.

ಉಕ್ರೇನ್‌–ರಷ್ಯಾ ಯುದ್ಧ ಆರಂಭವಾದ ಬಳಿಕ ಭಾರತವು ರಷ್ಯಾದಿಂದ ತೈಲ ಖರೀದಿ ಪ್ರಮಾಣವನ್ನು ಹೆಚ್ಚಿಸಿಕೊಂಡು ಲಾಭ ಗಳಿಸುತ್ತಿದೆ. ಭಾರತ ಆಮದು ಮಾಡಿಕೊಳ್ಳುತ್ತಿರುವ ಕಚ್ಚಾ ತೈಲದಲ್ಲಿ ರಷ್ಯಾದ ಪಾಲು ಶೇ 42ರಷ್ಟಿದೆ. ಯುದ್ಧದ ಬಳಿಕ ತೈಲ ಆಮದು ಪ್ರಮಾಣ ಹೆಚ್ಚಿಸಿರುವುದನ್ನು ಒಪ್ಪಲಾಗದು ಎಂದು ಬೆಸೆಂಟ್‌ ಈ ತಿಂಗಳ ಆರಂಭದಲ್ಲಿ ಹೇಳಿದ್ದರು.

ಅಮೆರಿಕದ  ಹೋಮ್‌ಲ್ಯಾಂಡ್‌ ಸೆಕ್ಯುರಿಟಿ ಇಲಾಖೆ (ಕಸ್ಟಮ್ಸ್‌ ವಿಭಾಗ) ಹೊರಡಿಸಿರುವ ಕರಡು ಅಧಿಸೂಚನೆ ಕುರಿತು ಭಾರತದ ಹಣಕಾಸು ಸಚಿವಾಲಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ‘ಅಮೆರಿಕವು ಹೆಚ್ಚುವರಿ ಸುಂಕ ವಿಧಿಸುವ ನಿರ್ಧಾರವನ್ನು ಮುಂದೂಡುವ ಬಗ್ಗೆ ಸರ್ಕಾರಕ್ಕೆ ಯಾವುದೇ ಭರವಸೆ ಇಲ್ಲ’ ಎಂದು ಹಣಕಾಸು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಹೆಚ್ಚುವರಿ ಸುಂಕದಿಂದ ತೊಂದರೆಗೆ ಒಳಗಾಗುವ ರಫ್ತುದಾರರಿಗೆ ಹಣಕಾಸಿನ ನೆರವು ನೀಡಲಾಗುವುದು ಮತ್ತು ಚೀನಾ, ದಕ್ಷಿಣ ಅಮೆರಿಕ ಹಾಗೂ ಪಶ್ಚಿಮ ಏಷ್ಯಾ ಸೇರಿದಂತೆ ಪರ್ಯಾಯ ಮಾರುಕಟ್ಟೆಗಳತ್ತ ಗಮನ ಹರಿಸಲು ರಫ್ತುದಾರರನ್ನು ಪ್ರೋತ್ಸಾಹಿಸಲಾಗುತ್ತದೆ’ ಎಂದಿದ್ದಾರೆ.

ಅಮೆರಿಕದ ನಿರ್ಧಾರದಿಂದ ತೊಂದರೆಗೆ ಒಳಗಾಗಬಹುದಾದ ಕ್ಷೇತ್ರಗಳಿಗೆ ಬೆಂಬಲವಾಗಿ ನಿಲ್ಲಲು ಕ್ರಮ ಕೈಗೊಳ್ಳಲಾಗುವುದು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಗವರ್ನರ್ ಸಂಜಯ್ ಮಲ್ಹೋತ್ರಾ ಸೋಮವಾರ ಹೇಳಿದ್ದರು.

ಟ್ರಂಪ್‌ ಅವರು ಹೆಚ್ಚುವರಿ ಸುಂಕ ವಿಧಿಸುವ ನಿರ್ಧಾರ ಘೋಷಿಸಿದ ಮರುದಿನವೇ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದರು. ‘ಭಾರತವು ತನ್ನ ರೈತರು, ಮೀನುಗಾರರು ಮತ್ತು ಹೈನುಗಾರರ ಹಿತಾಸಕ್ತಿಯೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ’ ಎಂದಿದ್ದರು.

ಶೇ 55ರಷ್ಟು ಸರಕುಗಳ ಮೇಲೆ ಪರಿಣಾಮ

l ಭಾರತವು ಅಮೆರಿಕಕ್ಕೆ ರಫ್ತು ಮಾಡುವ ಒಟ್ಟು ಸರಕಿನಲ್ಲಿ ಶೇ 55ರಷ್ಟು ಸರಕುಗಳ ಮೇಲೆ ಹೆಚ್ಚುವರಿ ಸುಂಕ ಪರಿಣಾಮ ಬೀರಬಹುದು ಎಂದು ರಫ್ತುದಾರರ ಒಕ್ಕೂಟ ಅಂದಾಜಿಸಿದೆ

l ಹಣಕಾಸು ಸಚಿವಾಲಯದ ಮೂಲಗಳ ಪ್ರಕಾರ, 48 ಬಿಲಿಯನ್‌ ಡಾಲರ್‌ಗೂ (₹4.20 ಲಕ್ಷ ಕೋಟಿ) ಹೆಚ್ಚಿನ ಮೊತ್ತದ ವ್ಯಾಪಾರದ ಮೇಲೆ ಪರಿಣಾಮ ಆಗಲಿದೆ

l  ಭಾರತವನ್ನು ಹೊರತುಪಡಿಸಿದರೆ
ಅಮೆರಿಕದಿಂದ ಶೇ 50ರಷ್ಟು ಆಮದು ಸುಂಕ ಎದುರಿಸುತ್ತಿ ರುವ ದೇಶ ಬ್ರೆಜಿಲ್‌ ಮಾತ್ರ

ಯಾವೆಲ್ಲಾ ಸರಕು?

ಅಮೆರಿಕವು ಭಾರತದಿಂದ ಆಮದು ಮಾಡಿಕೊಳ್ಳುತ್ತಿರುವ ಜವಳಿ, ಸಿದ್ಧ ಉಡುಪು, ಮುತ್ತು/ಹರಳು, ಆಭರಣಗಳು, ಸೀಗಡಿ, ಚರ್ಮದ ಉತ್ಪನ್ನಗಳು, ಪಾದರಕ್ಷೆ, ಡೇರಿ ಉತ್ಪನ್ನಗಳು, ರಾಸಾಯನಿಕಗಳು ಹಾಗೂ ಎಲೆಕ್ಟ್ರಿಕಲ್‌ ಮತ್ತು ಮೆಕ್ಯಾನಿಕಲ್‌ ಯಂತ್ರೋಪಕರಣಗಳ ಮೇಲೆ ಹೆಚ್ಚಿನ ಸುಂಕದ ಹೊರೆ ಬೀಳಲಿದೆ. 

ಔಷಧ, ತೈಲ ಉತ್ಪನ್ನಗಳು ಮತ್ತು ಎಲೆಕ್ಟ್ರಾನಿಕ್‌ ವಸ್ತುಗಳನ್ನು ಹೆಚ್ಚುವರಿ ಸುಂಕದ ವ್ಯಾಪ್ತಿಯಿಂದ ಹೊರಗಿಡಲಾಗಿದೆ.

ಭಾರತದ ಪ್ರತಿಸ್ಪರ್ಧಿಗಳಿಗೆ ಲಾಭ

ಹೆಚ್ಚುವರಿ ಸುಂಕ ಜಾರಿಯಾಗಿರುವುದಿಂದ ಅಮೆರಿಕದ ಜತೆ ದ್ವಿಪಕ್ಷೀಯ ವ್ಯಾಪಾರ ಸಂಬಂಧ ಹೊಂದಿರುವ ಭಾರತದ ಪ್ರತಿಸ್ಪರ್ಧಿ ದೇಶಗಳಿಗೆ ಲಾಭವಾಗಲಿದೆ. ಅಮೆರಿಕದ ಮಾರುಕಟ್ಟೆಯಲ್ಲಿ ಭಾರತದ
ಪ್ರತಿಸ್ಪರ್ಧಿಗಳಾಗಿರುವ ಮ್ಯಾನ್ಮಾರ್ (ಶೇ 40), ಥಾಯ್ಲೆಂಡ್‌ ಮತ್ತು ಕಾಂಬೋಡಿಯ (ಶೇ 26), ಬಾಂಗ್ಲಾದೇಶ (ಶೇ 35), ಇಂಡೊನೇಷ್ಯಾ (ಶೇ 32), ಚೀನಾ ಮತ್ತು ಶ್ರೀಲಂಕಾ (ಶೇ 30),
ಮಲೇಷ್ಯಾ (ಶೇ 25), ಫಿಲಿಪ್ಪೀನ್ಸ್ ಮತ್ತು ವಿಯೆಟ್ನಾಂ (ಶೇ 20) ದೇಶಗಳ ಸರಕುಗಳಿಗೆ ಕಡಿಮೆ ಸುಂಕ ವಿಧಿಸಲಾಗುತ್ತಿದೆ.

ಭಾರತಕ್ಕೆ ವಿಧಿಸಿರುವ ಸುಂಕದ ಪ್ರಮಾಣ ಹೆಚ್ಚಾಗಿರುವುದರಿಂದ ಅಮೆರಿಕದಲ್ಲಿ ಭಾರತದ ಸರಕುಗಳ ಮಾರಾಟದ ಬೆಲೆ ಹೆಚ್ಚಾಗಲಿದೆ. ಇದರಿಂದ ಆ ವಸ್ತುಗಳಿಗೆ ಬೇಡಿಕೆ ಕಡಿಮೆ ಆಗಬಹುದು.

ಅಮೆರಿಕದ ಗ್ರಾಹಕರು ಈಗಾಗಲೇ ಹೊಸ ಆರ್ಡರ್‌ಗಳನ್ನು ನಿಲ್ಲಿಸಿದ್ದಾರೆ. ಹೆಚ್ಚುವರಿ ಸುಂಕದಿಂದಾಗಿ ಸೆಪ್ಟೆಂಬರ್‌ನಿಂದ ರಫ್ತು ಪ್ರಮಾಣ ಶೇ 20-30ರಷ್ಟು ಕಡಿಮೆಯಾಗಬಹುದು
ಪಂಕಜ್‌ ಛಡ್ಡಾ,ಅಧ್ಯಕ್ಷರು, ಎಂಜಿನಿಯರಿಂಗ್‌ ರಫ್ತು ಉತ್ತೇಜನ ಮಂಡಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.