
ನವದೆಹಲಿ: ತೀವ್ರ ಆಡಳಿತ ವಿರೋಧಿ ಹೋರಾಟ ಮತ್ತು ಪ್ರತಿಭಟನಾಕಾರರನ್ನು ಹತ್ತಿಕ್ಕುತ್ತಿರುವ ಇರಾನ್ ವಿರುದ್ಧ ದಾಳಿ ಮಾಡುವುದಾಗಿ ಹೇಳುತ್ತಲೇ ಇದ್ದ ಅಮೆರಿಕ ಈಗ ದಾಳಿಯ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಇರಾನ್ ಮೇಲೆ ದಾಳಿಗೆ ಅಮೆರಿಕ ಪಡೆಗಳು ದಕ್ಷಿಣ ಚೀನಾ ಸಮುದ್ರದಿಂದ ಪಶ್ಚಿಮ ಏಷ್ಯಾ ಕಡೆಗೆ ತೆರಳಿವೆ. ಹಿಂದೂ ಮಹಾಸಾಗರ ವಲಯದಲ್ಲಿ ಮಿಲಿಟರಿ ಬೀಡುಬಿಟ್ಟಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಇಸ್ರೇಲ್ ಮೇಲೆ ಇರಾನ್ ಡ್ರೋನ್ ದಾಳಿ ತಡೆಯಲು ನಿಯೋಜಿಸಲಾಗಿದ್ದ ಎಫ್–15ಇ ಸ್ಟ್ರೈಕ್ ಈಗಲ್ ಜೆಟ್‌ಗಳು ಈಗಾಗಲೇ ಪಶ್ಚಿಮ ಏಷ್ಯಾದಲ್ಲಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ಧಾರೆ. ಅವರು ಹಂಚಿಕೊಂಡಿರುವ ಚಿತ್ರದಲ್ಲಿ ಹೆಸರು ಉಲ್ಲೇಖಿಸದ ಅಜ್ಞಾತ ಜಾಗದಲ್ಲಿ ಜೆಟ್ ಲ್ಯಾಂಡ್ ಆಗಿರುವುದು ಕಂಡುಬಂದಿದೆ.
ವಾಯುಮಾರ್ಗದ ಮಧ್ಯೆ ಫೈಟರ್ ಜೆಟ್‌ಗಳಿಗೆ ಇಂಧನ ತುಂಬಿಸುವ ಕೆಸಿ–135 ಏರಿಯಲ್ ರೀಫ್ಯೂಯಲರ್‌ಗಳ ಶಿಫ್ಟಿಂಗ್ ಸೇರಿದಂತೆ ಇದೊಂದು ಬೃಹತ್ ಸೇನಾ ಜಮಾವಣೆಯ ಭಾಗವಾಗಿದೆ ಎಂದು ಅಮೆರಿಕ ಮಾಧ್ಯಮಗಳು ವರದಿ ಮಾಡಿವೆ.
ಹೆಚ್ಚುವರಿ ಕ್ಷಿಪಣಿ ನಿರೋಧಕ ವ್ಯವಸ್ಥೆಗಳಾದ THAAD ಮತ್ತು Patriot ಅನ್ನು ಪಶ್ಚಿಮ ಏಷ್ಯಾದ ಅಮೆರಿಕದ ಮಿತ್ರರಾಷ್ಟ್ರಗಳಾದ ಇಸ್ರೇಲ್, ಕತಾರ್‌ನಲ್ಲಿ ನಿಯೋಜಿಸಿರುವುದು ಅತ್ಯಂತ ಪ್ರಮುಖ ಬೆಳವಣಿಗೆ ಎಂದು ಅಮೆರಿಕ ಮಾಧ್ಯಮಗಳು ತಿಳಿಸಿವೆ.
ಇರಾನ್‌ನಲ್ಲಿ ಬೆಲೆ ಏರಿಕೆ ಮತ್ತು ದುರಾಡಳಿತ ವಿರುದ್ಧ ಜನ ದಂಗೆ ಎದ್ದಿದ್ದಾರೆ. ಪರಮೋಚ್ಛ ನಾಯಕ ಅಯತೊಲ್ಲಾ ಖಮೇನಿ ವಿರುದ್ಧ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಪ್ರತಿಭಟನಾನಿರತರಿಗೆ ಗುಂಡಿಕ್ಕುವ ಮತ್ತು ಗಲ್ಲಿಗೇರಿಸುವ ಕೃತ್ಯಕ್ಕೆ ಇರಾನ್ ಮುಂದಾಗಿದೆ. ಸಂಘರ್ಷದಲ್ಲಿ 2,427 ಮಂದಿ ನಾಗರಿಕರು ಮತ್ತು ಭದ್ರತಾ ಸಿಬ್ಬಂದಿ ಸೇರಿ 3,117 ಮಂದಿ ಮೃತಪಟ್ಟಿದ್ದಾರೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.
ಆದರೆ, ಮೃತರ ಸಂಖ್ಯೆ 20,000ಕ್ಕೂ ಹೆಚ್ಚಿದೆ ಎಂದು ಬಲಪಂಥೀಯ ಸಂಘಟನೆಗಳು ಹೇಳಿವೆ.
ಪ್ರತಿಭಟನಾಕಾರರನ್ನು ಹತ್ತಿಕ್ಕಿದರೆ, ಗಲ್ಲಿಗೇರಿಸಿದರೆ ವಿಶ್ವ ಭೂಪಟದಿಂದ ಇರಾನ್ ಅನ್ನು ಅಳಿಸಿಹಾಕುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್‌ಗೆ ನಿರಂತರವಾಗಿ ಎಚ್ಚರಿಕೆ ನೀಡುತ್ತಿದ್ದಾರೆ. ಅಲ್ಲದೆ, ಪ್ರತಿಭಟನೆ ಮುಂದುವರಿಸುವಂತೆ ಪ್ರತಿಭಟನಾಕಾರರಿಗೆ ಕುಮ್ಮಕ್ಕು ನೀಡಿ. ಶೀಘ್ರದಲ್ಲೇ ನೆರವು ನೀಡುವುದಾಗಿ ಭರವಸೆ ನೀಡಿದ್ದರು.
ತಮ್ಮ ಬೆದರಿಕೆಗೆ ಮಣಿದ ಇರಾನ್ 840 ಪ್ರತಿಭಟನಾಕಾರರ ಮರಣದಂಡನೆ ಶಿಕ್ಷೆಯಿಂದ ಹಿಂದೆ ಸರಿದಿದೆ ಎಂದೂ ಟ್ರಂಪ್ ಹೇಳಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.