ನ್ಯೂಯಾರ್ಕ್: ಅಮೆರಿಕದಲ್ಲಿ ತಮ್ಮ ವಿದ್ಯಾರ್ಥಿ ವಲಸೆ ವೀಸಾವನ್ನು ರದ್ದುಗೊಳಿಸಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಕ್ರಮವನ್ನು ಭಾರತೀಯ ವಿದ್ಯಾರ್ಥಿಯೊಬ್ಬರು ಸೇರಿದಂತೆ ನಾಲ್ವರು ವಿದ್ಯಾರ್ಥಿಗಳು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ.
ಈ ಮೂಲಕ ವಿದ್ಯಾರ್ಥಿಗಳು ತಮ್ಮ ಸಂಭಾವ್ಯ ಗಡೀಪಾರು ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ.
ಮಿಚಿಗನ್ ಪಬ್ಲಿಕ್ ಯುನಿವರ್ಸಿಟಿಯ ವಿದ್ಯಾರ್ಥಿಗಳಾದ ಭಾರತದ ಚಿನ್ಮಯ್ ದೇವೋರೆ, ಚೀನಾದ ಕ್ಸಯಾಂಗ್‌ಯುನ್ ಬು ಮತ್ತು ಕಿಯುಯಿ ಯಾಂಗ್ ಹಾಗೂ ನೇಪಾಳದ ಯೋಗೇಶ್ ಜೋಶಿ ಅವರು ಗೃಹ ಇಲಾಖೆ ಮತ್ತು ವಲಸೆ ಅಧಿಕಾರಿಗಳ ವಿರುದ್ಧ ಮೊಕದ್ದಮೆ ಹೂಡಿದ್ದಾರೆ.
ವಿದ್ಯಾರ್ಥಿ ಮತ್ತು ವಿನಿಮಯ ಮಾಹಿತಿ ವ್ಯವಸ್ಥೆಯಲ್ಲಿ (ಎಸ್‌ಇವಿಐಎಸ್) ತಮ್ಮ ವಲಸೆ ಸ್ಥಿತಿಯನ್ನು ಯಾವುದೇ ಸೂಚನೆ ಮತ್ತು ವಿವರಣೆ ನೀಡದೆ ಕಾನೂನುಬಾಹಿರವಾಗಿ ತೆಗೆದುಹಾಕಲಾಗಿದೆ ಎಂದು ವಿದ್ಯಾರ್ಥಿಗಳು ಅರ್ಜಿಯಲ್ಲಿ ದೂರಿದ್ದಾರೆ.
ಎಸ್‌ಇವಿಐಎಸ್ ಎಂಬುದು ಅಮೆರಿಕದಲ್ಲಿ ವಲಸೆರಹಿತ ವಿದ್ಯಾರ್ಥಿಗಳು ಮತ್ತು ವಿನಿಮಯ ಸಂದರ್ಶಕರ ದತ್ತಾಂಶವನ್ನು ‘ಟ್ರ್ಯಾಕ್’ ಮಾಡುವ ವ್ಯವಸ್ಥೆಯಾಗಿದೆ.
ತಡೆಯಾಜ್ಞೆಗೆ ಮನವಿ: ವಿದ್ಯಾರ್ಥಿಗಳನ್ನು ಪ್ರತಿನಿಧಿಸುತ್ತಿರುವ ಮಿಚಿಗನ್‌ನ ಅಮೆರಿಕನ್ ಸಿವಿಲ್ ಲಿಬರ್ಟಿಸ್ ಯೂನಿಯನ್ (ಎಸಿಎಲ್‌ಯು), ಟ್ರಂಪ್ ಆಡಳಿತದ ಈ ಕ್ರಮಕ್ಕೆ ತುರ್ತಾಗಿ ತಡೆಯಾಜ್ಞೆ ನೀಡಿ, ವಿದ್ಯಾರ್ಥಿಗಳ ಹಿತಾಸಕ್ತಿ ಕಾಪಾಡುವಂತೆ ಮನವಿ ಮಾಡಿದೆ.
ಈ ವಿದ್ಯಾರ್ಥಿಗಳಿಗೆ ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಲು ಮತ್ತು ಬಂಧನ, ಗಡೀಪಾರು ಕ್ರಮಗಳಿಂದ ಇವರಿಗೆ ರಕ್ಷಣೆ ಒದಗಿಸಬೇಕು ಹಾಗೂ ಅವರ ವೀಸಾ ಸ್ಥಾನಮಾನವನ್ನು ಪುನರ್ ಸ್ಥಾಪಿಸುವಂತೆ ಕೋರಿದೆ.
ಭಾರತೀಯ ವಿದ್ಯಾರ್ಥಿ ಗಡೀಪಾರಿಗೆ ತಡೆ
ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ಭಾರತದ 21 ವರ್ಷದ ವಿದ್ಯಾರ್ಥಿಯ ವೀಸಾ ರದ್ದುಗೊಳಿಸಿ ಗಡೀಪಾರಿಗೆ ಮುಂದಾಗಿದ್ದ ಟ್ರಂಪ್ ಆಡಳಿತದ ಕ್ರಮಕ್ಕೆ ಅಮೆರಿಕದ ಫೆಡರಲ್ ನ್ಯಾಯಾಧೀಶರು ತಾತ್ಕಾಲಿಕವಾಗಿ ತಡೆ ನೀಡಿದ್ದಾರೆ.
ಮಿಸ್ಕಾನ್–ಮ್ಯಾಡಿಸನ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್ ಪದವಿ ವ್ಯಾಸಂಗ ಮಾಡುತ್ತಿರುವ ಕ್ರಿಶ್‌ಲಾಲ್ ಇಸ್ಸರ್‌ದಾಸಾನಿ ವಿರುದ್ಧ ಟ್ರಂಪ್ ಆಡಳಿತ ಕ್ರಮ ತೆಗೆದುಕೊಂಡಿತ್ತು. ಈ ವಿದ್ಯಾರ್ಥಿಯು 2021ರಿಂದ ‘ಎಫ್–1’ ವಿದ್ಯಾರ್ಥಿ ವೀಸಾದೊಂದಿಗೆ ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ‘ಕ್ರಿಶ್‌ಲಾಲ್ ಅವರು ಉತ್ತಮ ಶೈಕ್ಷಣಿಕ ಸ್ಥಿತಿಯನ್ನು ಕಾಯ್ದುಕೊಂಡಿದ್ದು ಅಂತಿಮ ವರ್ಷದ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಮೇ 10ಕ್ಕೆ ಅವರ ಪದವಿ ಅವಧಿ ಮುಗಿಯಲಿದೆ’ ಎಂಬ ಮಾಹಿತಿಯನ್ನು ನ್ಯಾಯಾಲಯದ ಗಮನಕ್ಕೆ ತರಲಾಗಿತ್ತು. ವಿದ್ಯಾರ್ಥಿ ವೀಸಾ ರದ್ದುಗೊಳಿಸುವ ಮತ್ತು ಬಂಧಿಸುವ ಅಥವಾ ಪರೋಕ್ಷವಾಗಿ ಇತರ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ತಾತ್ಕಾಲಿಕ ತಡೆ ನೀಡಿದ ನ್ಯಾಯಾಲಯವು ವಿಚಾರಣೆಯನ್ನು ಇದೇ 28ಕ್ಕೆ ಮುಂದೂಡಿತು. ವಿದೇಶಿ ವಿದ್ಯಾರ್ಥಿಗಳ ವೀಸಾಗಳನ್ನು ರದ್ದುಗೊಳಿಸುವ ಕುರಿತ ಟ್ರಂಪ್ ಆಡಳಿತದ ಆದೇಶದ ವಿರುದ್ಧ ರಾಷ್ಟ್ರಮಟ್ಟದಲ್ಲಿ ದೊರೆತ ಪ್ರಮುಖ ಜಯಗಳಲ್ಲಿ ಇದೂ ಒಂದು ಎಂದು ಮ್ಯಾಡಿಸನ್ ವಕೀಲರಾದ ಶಬ್ನಮ್ ಲೊಟ್ಫಿ ಪ್ರತಿಕ್ರಿಯಸಿದ್ದಾರೆ.
ದೇಶದಾದ್ಯಂತ ಸುಮಾರು 1300 ವಿದ್ಯಾರ್ಥಿಗಳ ವೀಸಾವನ್ನು ದಿಢೀರನೇ ರದ್ದುಗೊಳಿಸಲಾಗಿದೆ. ಈ ಮೂಲಕ ಟ್ರಂಪ್ ಆಡಳಿತವು ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ನಡೆಸುತ್ತಿರುವ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿದೆ ಎಂದು ಸಿಎನ್ಎನ್ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.