ವಾಷಿಂಗ್ಟನ್: ಜನ್ಮದತ್ತ ಪೌರತ್ವವನ್ನು ಕೊನೆಗೊಳಿಸುವ ಯೋಜನೆಯನ್ನು ಮುಂದುವರಿಸಲು ಅನುಮತಿ ಕೋರಿ ಟ್ರಂಪ್ ಆಡಳಿತ ಗುರುವಾರ ಅಮೆರಿಕ ಸುಪ್ರೀಂ ಕೋರ್ಟ್‌ನಲ್ಲಿ ತುರ್ತು ಮೇಲ್ಮನವಿಗಳನ್ನು ಸಲ್ಲಿಸಿದೆ ಎಂದು ಸಿಎನ್‌ಎನ್ ವರದಿ ಮಾಡಿದೆ.
ನೀತಿಯನ್ನು ನಿರ್ಬಂಧಿಸುವ ವ್ಯತಿರಿಕ್ತ ಆದೇಶಗಳನ್ನು ಕೆಳ ನ್ಯಾಯಾಲಯಗಳು ನೀಡಿವೆ. ಆ ಆದೇಶಗಳ ಪರಿಣಾಮವನ್ನು ನಿರ್ಬಂಧಿಸುವಂತೆ ನ್ಯಾಯಾಲಯವನ್ನು ಕೋರಲಾಗಿದೆ.
ಈ ವರ್ಷದ ಜನವರಿ ತಿಂಗಳ ಆರಂಭದಲ್ಲಿ, ಫೆಡರಲ್ ನ್ಯಾಯಾಧೀಶರೊಬ್ಬರು ಟ್ರಂಪ್ ಆಡಳಿತದ ಈ ಕಾರ್ಯನಿರ್ವಾಹಕ ಆದೇಶವನ್ನು ಬಹಿರಂಗವಾಗಿ ಅಸಂವಿಧಾನಿಕ ಎಂದು ಕರೆದಿದ್ದರು. ಅದರ ಅನುಷ್ಠಾನವನ್ನು ತಡೆದಿದ್ದರು. ಕೆಲವು ದಿನಗಳ ನಂತರ, ಮೇರಿಲ್ಯಾಂಡ್‌ನ ನ್ಯಾಯಾಧೀಶರು ಟ್ರಂಪ್ ಅವರ ಯೋಜನೆ ‘ನಮ್ಮ ರಾಷ್ಟ್ರದಲ್ಲಿ ಹುಟ್ಟಿನಿಂದ ಸಿಗುವ ಪೌರತ್ವದ 250 ವರ್ಷಗಳ ಇತಿಹಾಸಕ್ಕೆ ವಿರುದ್ಧವಾಗಿದೆ’ ಎಂದು ಒತ್ತಿ ಹೇಳಿದ್ದರು.
ಜನವರಿ 20ರಂದು ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಜನ್ಮದತ್ತ ಪೌರತ್ವ ರದ್ಧತಿ ಆದೇಶಕ್ಕೆ ಟ್ರಂಪ್ ಸಹಿ ಹಾಕಿದ್ದರು.
ಈ ಆದೇಶದ ಮೇಲೆ ರಾಷ್ಟ್ರವ್ಯಾಪಿ ಕೆಳ ನ್ಯಾಯಾಲಯಗಳು ನೀಡಿರುವ ತಡೆಯಾಜ್ಞೆಗಳನ್ನು ರದ್ದು ಮಾಡುವಂತೆ ಟ್ರಂಪ್ ಆಡಳಿತ ಸಲ್ಲಿಸಿದ್ದ ಮನವಿಯನ್ನು ಮೇಲ್ಮನವಿ ನ್ಯಾಯಾಲಯಗಳು ತಳ್ಳಿಹಾಕಿದ್ದವು.
20ಕ್ಕೂ ಹೆಚ್ಚು ರಾಜ್ಯಗಳು, ಎರಡು ವಲಸೆ ಹಕ್ಕುಗಳ ಸಂಘಟನೆಗಳು ಮತ್ತು ಏಳು ವೈಯಕ್ತಿಕ ವಾದಿಗಳ ಕೋರಿಕೆಯ ಮೇರೆಗೆ ಮೇರಿಲ್ಯಾಂಡ್, ಮೆಸಚೂಸೆಟ್ಸ್ ಮತ್ತು ವಾಷಿಂಗ್ಟನ್‌ನ ನ್ಯಾಯಾಲಯಗಳು ತಡೆಯಾಜ್ಞೆ ಆದೇಶಗಳನ್ನು ನೀಡಿದ್ದವು ಎಂದು ಸಿಎನ್‌ಎನ್ ವರದಿ ಮಾಡಿದೆ.
ಟ್ರಂಪ್ ಆಡಳಿತವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಮೇಲ್ಮನವಿಗಳು ನೀತಿಯ ಸಾಂವಿಧಾನಿಕತೆಗೆ ನೇರವಾಗಿ ಸಂಬಂಧಿಸಿದವುಗಳಲ್ಲ. ತಡೆಯಾಜ್ಞೆಗಳ ವ್ಯಾಪ್ತಿಯನ್ನು ಮಿತಿಗೊಳಿಸಲು ಮನವಿಯಲ್ಲಿ ಕೋರಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.