ADVERTISEMENT

ಟ್ರಂಪ್‌ ಕರೆ ಮೇರೆಗೆ ವೈಟ್‌ಹೌಸ್‌ನಲ್ಲಿ ಪುರೋಹಿತರೊಬ್ಬರಿಂದ ಶಾಂತಿಮಂತ್ರ ಪಠಣ

ಪಿಟಿಐ
Published 9 ಮೇ 2020, 16:46 IST
Last Updated 9 ಮೇ 2020, 16:46 IST
   

ವಾಷಿಂಗ್ಟನ್‌: ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಪ್ರತಿಯೊಬ್ಬರ ಆರೋಗ್ಯ, ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ಹಿಂದೂ ಪುರೋಹಿತರೊಬ್ಬರು ಶ್ವೇತಭವನದ ರೋಸ್ ಗಾರ್ಡನ್‌ನಲ್ಲಿ ಗುರುವಾರ ಶಾಂತಿ ಮಂತ್ರ ಪಠಿಸಿದರು.

ನ್ಯೂಜೆರ್ಸಿಯ ಬಿಎಪಿಎಸ್ ಸ್ವಾಮಿನಾರಾಯಣ ಮಂದಿರದ ಪುರೋಹಿತ ಹರೀಶ್ ಬ್ರಹ್ಮಭಟ್

ಅಮೆರಿಕದ ರಾಷ್ಟ್ರೀಯ ಪ್ರಾರ್ಥನಾ ಸೇವೆಯ ದಿನ ವೈಟ್‌ ಹೌಸ್‌ನಲ್ಲಿ ಎಲ್ಲ ಧರ್ಮಗಳ ಧರ್ಮಗುರುಗಳಿಂದ ಈ ಶಾಂತಿ ಪ್ರಾರ್ಥನೆ ಮಾಡಿಸಲಾಗುತ್ತದೆ. ಅದರಂತೆ ಹಿಂದು ಪುರೋಹಿತರೊಬ್ಬರಿಂದ ಶಾಂತಿ ಮಂತ್ರ ಪಠಣೆ ನಡೆಯಿತು.

ನ್ಯೂಜೆರ್ಸಿಯ ಬಿಎಪಿಎಸ್ ಸ್ವಾಮಿನಾರಾಯಣ ಮಂದಿರದ ಪುರೋಹಿತ ಹರೀಶ್ ಬ್ರಹ್ಮಭಟ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಹ್ವಾನದ ಮೇರೆಗೆ‌ ವೈಟ್‌ಹೌಸ್‌ನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಂತ್ರ ಪಠಣೆ ನೆರವೇರಿಸಿದರು.

ADVERTISEMENT

‘ಕೊರೊನಾ ವೈರಸ್‌ ಮತ್ತು ಲಾಕ್‌ಡೌನ್‌ನಿಂದ ತೊಂದರೆಗೊಳಗಾಗಿರುವ ಈ ಕಾಲದಲ್ಲಿ, ಜನರು ಆತಂಕಕ್ಕೊಳಗಾಗುವುದು ಅಥವಾ ಅವರ ಶಾಂತಿಗೆ ಭಂಗವಾಗುವುದು ಸಹಜ. ಶಾಂತಿ ಮಂತ್ರವು, ಲೌಕಿಕ ಸಂಪತ್ತು, ಯಶಸ್ಸು, ಖ್ಯಾತಿಯನ್ನೂ ಮೀರಿ ಶಾಂತಿಗಾಗಿ ಸಲ್ಲಿಸುವ ಪ್ರಾರ್ಥನೆಯಾಗಿದೆ. ಇದು ಶಾಂತಿಯನ್ನು ಕೋರುವ ಹಿಂದೂ ಪ್ರಾರ್ಥನೆ. ಯಜುರ್ವೇದ ಮೂಲದ ವೈದಿಕ ಮಂತ್ರ’ ಎಂದು ವೈಟ್‌ ಹೌಸ್‌ನ ರೋಸ್‌ ಗಾರ್ಡನ್‌ನಲ್ಲಿ ಹರೀಶ್‌ ಬ್ರಹ್ಮಭಟ್ ಹೇಳಿದ್ದಾರೆ.

ಪ್ರಾರ್ಥನೆ, ಮಂತ್ರ ಪಠಣೆಗಾಗಿ ಟ್ರಂಪ್ ಅವರು ಹರೀಶ್‌ ಬ್ರಹ್ಮಭಟ್ ಅವರಿಗೆ ಧನ್ಯವಾದ ಅರ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.