ADVERTISEMENT

ಕೊರೊನಾ ಬಗ್ಗೆ ಅಸ್ಪಷ್ಟ ಮಾಹಿತಿ: ನಾಯಕರ ನಿಲುವಿಗೆ ಡಬ್ಲ್ಯುಎಚ್‌ಒ ಟೀಕೆ

ಏಜೆನ್ಸೀಸ್
Published 14 ಜುಲೈ 2020, 6:04 IST
Last Updated 14 ಜುಲೈ 2020, 6:04 IST
ಟೆಡ್ರೊಸ್‌ ಅಡೆನಾಂ ಗ್ಯಾಬ್ರಿಯೆಸಸ್
ಟೆಡ್ರೊಸ್‌ ಅಡೆನಾಂ ಗ್ಯಾಬ್ರಿಯೆಸಸ್   

ಜಿನೀವಾ: ‘ಕೊರೊನಾ ವೈರಸ್‌ ಬಗ್ಗೆ ಮಿಶ್ರ ಹೇಳಿಕೆಗಳನ್ನು ನೀಡುವ ಮೂಲಕ ಕೆಲವು ನಾಯಕರು ಜನರ ವಿಶ್ವಾಸಕ್ಕೆ ಧಕ್ಕೆ ತರುತ್ತಿದ್ದಾರೆ. ಇಂಥ ನಾಯಕರು ತಮ್ಮ ರಾಷ್ಟ್ರವನ್ನು ಕೊರೊನಾದಿಂದ ಮುಕ್ತಗೊಳಿಸಲು ವಿಫಲರಾಗುತ್ತಿದ್ದು, ಸದ್ಯದಲ್ಲಿ ಆ ರಾಷ್ಟ್ರಗಳು ಸಹಜ ಸ್ಥಿತಿಗೆ ಬರಲಾರದಂತಾಗಿದೆ’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕ ಟೆಡ್ರೊಸ್‌ ಅಡೆನಾಂ ಗ್ಯಾಬ್ರಿಯೆಸಸ್ ಟೀಕಿಸಿದ್ದಾರೆ.

‘ನಿಷೇಧಗಳನ್ನು ವಿಧಿಸುವುದರಿಂದ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಪರಿಣಾಮಗಳು ಉಂಟಾಗುತ್ತದೆ ಎಂಬುದು ನಿಜ. ಆದರೆ, ಈ ವೈರಸ್‌ ಸಾರ್ವಜನಿಕರ ಮೊದಲ ಮತ್ತು ದೊಡ್ಡ ಶತ್ರುವಾಗಿದೆ. ಕೆಲವು ಸರ್ಕಾರಗಳ ನಡೆಯನ್ನು ನೋಡಿದರೆ ಅವು ಈ ಆಪಾಯವನ್ನು ಮನಗಂಡಿಲ್ಲ ಎಂಬ ಭಾವನೆ ಮೂಡುತ್ತದೆ ಎಂದು ಅವರು ಯಾರ ಹೆಸರನ್ನೂ ಉಲ್ಲೇಖಿಸದೆ ಹೇಳಿದ್ದಾರೆ.

ಜಗತ್ತಿನಾದ್ಯಂತ ಭಾನುವಾರ ಒಂದೇ ದಿನ 2.30 ಲಕ್ಷ ಜನರಿಗೆ ಸೋಂಕು ತಗುಲಿದೆ. ಇವರಲ್ಲಿ ಶೇ 80ರಷ್ಟು ಮಂದಿ 10 ರಾಷ್ಟ್ರಗಳವರು ಮತ್ತು ಅರ್ಧಕ್ಕೂ ಹೆಚ್ಚು ಜನರು ಅಮೆರಿಕ ಮತ್ತು ಬ್ರೆಜಿಲ್‌ ರಾಷ್ಟ್ರದವರಾಗಿದ್ದಾರೆ.

ADVERTISEMENT

‘ಸೋಂಕು ಹರಡುವಿಕೆ ಕಡಿಮೆಯಾಗುತ್ತಿದ್ದಂತೆ ಕೆಲವು ರಾಷ್ಟ್ರಗಳು ಶಾಲಾ ಕಾಲೇಜುಗಳನ್ನು ತೆರೆದಿವೆ. ಆದರೆ ಕೆಲವು ರಾಷ್ಟ್ರಗಳು ವಿಸ್ತೃತ ಸುರಕ್ಷಾ ವ್ಯವಸ್ಥೆಗಳನ್ನು ಮಾಡದೆ, ಶಾಲಾಕಾಲೇಜುಗಳನ್ನು ತೆರೆಯಲು ಸೂಚಿಸುವ ಮೂಲಕ ರಾಜಕೀಯ ಫುಟ್‌ಬಾಲ್‌ ಆಡುತ್ತಿವೆ. ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ. ಹಳೆಯ ಸಾಮಾನ್ಯ ಸ್ಥಿತಿಗೆ ಹೋಗಲು ಸದ್ಯದಲ್ಲಿ ಸಾಧ್ಯವಾಗಲಾರದು. ಸಾರ್ವಜನಿಕರ ಆರೋಗ್ಯಕ್ಕೆ ಸಂಬಂಧಿಸಿದಂತೆ ಸರ್ಕಾರಗಳು ಸ್ಪಷ್ಟವಾದ ಸಂದೇಶಗಳನ್ನು ನೀಡಬೇಕಾಗಿದೆ. ಜನರು ಅಂತರ ಕಾಯ್ದುಕೊಳ್ಳಬೇಕು, ಮಾಸ್ಕ್‌ ಧರಿಸಬೇಕು ಮತ್ತು ಕೈ ತೊಳೆಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಸಾಧ್ಯವಾದಷ್ಟು ಮನೆಯಲ್ಲೇ ಇರಬೇಕು ಎಂದು ಟೆಡ್ರೊಸ್‌ ಹೇಳಿದ್ದಾರೆ.

‘ಶಾಲಾ ಕಾಲೇಜುಗಳನ್ನು ತೆರೆಯುವ ವಿಚಾರದಲ್ಲಿ ರಾಜಕೀಯ ಮಾಡಬಾರದು. ಶಿಕ್ಷಣವಿರಲಿ, ಇತರ ಆಸಕ್ತಿಯ ವಿಚಾರಗಳೇ ಇರಲಿ, ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಅವರ ಏಳಿಗೆಗೆ ಅನುಕೂಲವಾಗಬಲ್ಲಂಥ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು’ ಎಂದು ಅವರು ಹೇಳಿದರು.

ಶಾಲಾ ಕಾಲೇಜುಗಳನ್ನು ಪುನರಾರಂಭ ಮಾಡದಿದ್ದರೆ ಅನುದಾನವನ್ನು ಕಡಿತ ಮಾಡುವುದಾಗಿ ಅಮೆರಿಕದ ಶಿಕ್ಷಣ ಸಂಸ್ಥೆಗಳಿಗೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಇತ್ತೀಚೆಗೆ ಎಚ್ಚರಿಕೆ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.