ADVERTISEMENT

ವೈಷಮ್ಯದ ಬೆಂಕಿಯಲ್ಲಿ ಉರಿದ ಜೀವಗಳು!

ಐ.ಎಂ.ವಿಠಲಮೂರ್ತಿ
Published 24 ನವೆಂಬರ್ 2013, 19:30 IST
Last Updated 24 ನವೆಂಬರ್ 2013, 19:30 IST
ವೈಷಮ್ಯದ ಬೆಂಕಿಯಲ್ಲಿ ಉರಿದ ಜೀವಗಳು!
ವೈಷಮ್ಯದ ಬೆಂಕಿಯಲ್ಲಿ ಉರಿದ ಜೀವಗಳು!   

ಬೆಳಗಾವಿ, ಗದಗ, ವಿಜಾಪುರ ಭಾಗದ ಜನರ ಮುಗ್ಧತೆ, ಮಿತಿಯಿಲ್ಲದ ಪ್ರೀತಿ, ವಾಸ್ತುಶಿಲ್ಪ ಸೌಂದರ್ಯ, ಸವಿಯಾದ ಊಟೋ­­­ಪಚಾರಗಳ ಕುರಿತು ನಿರೂಪಿಸಿದ್ದೆ. ಆದರೆ, ಅದೇ ಊರಿನ ಜನರಲ್ಲಿ ಕ್ರೌರ್ಯ ಸ್ಫೋಟ­ಗೊಂಡಾಗ, ಬುದ್ಧಿಯನ್ನು ಸಿಟ್ಟು ಮತ್ತು ಸೇಡಿನ ಕೈಗೆ ಕೊಟ್ಟಾಗ ನಡೆಯಬಹುದಾದ ಅಮಾ­ನುಷ ಕೃತ್ಯಗಳನ್ನು ಊಹಿಸುವುದೂ ಕಷ್ಟ. ಇಂಥ ಕ್ರೌರ್ಯ ಪರಾಕಾಷ್ಠೆ ತಲುಪಿದ ದುರಂತ ಕಥೆಗಳು ನಮ್ಮ ದೇಶದ ಯಾವುದೇ ಭಾಗದ­ಲ್ಲಾದರೂ ನಡೆಯಬಹುದು.

ಈ ಕಥೆಗಳನ್ನು ಹೇಳುವುದೋ ಬಿಡುವುದೋ ಎಂದು ಹಲ­ವಾರು ಬಾರಿ ಯೋಚಿಸಿದ್ದೇನೆ. ಹೇಳಿಬಿಟ್ಟರೆ ನನ್ನಿಂದ ಕಥೆಗಳಿಗೂ, ಕಥೆಗಳಿಂದ ನನಗೂ ಬಿಡುಗಡೆ ಎಂಬ ಭಾವನೆಯಿಂದ ಹೇಳುತ್ತಿದ್ದೇನೆ. ಗುಂಪಿನಲ್ಲಿ ವ್ಯಕ್ತಿಗಳ ರಾಕ್ಷಸ ಗುಣಗಳು ಹೇಗೆ ಅವರನ್ನು ಅಮಾನವೀಯ ಕೃತ್ಯಗಳಿಗೆ ತಳ್ಳುತ್ತವೆ ಎನ್ನುವುದಕ್ಕೆ ವಿಜಾಪುರ ಜಿಲ್ಲೆಯಲ್ಲಿ 1991ರಲ್ಲಿ ಒಂದೇ ತಿಂಗಳಿನಲ್ಲಿ ನಡೆದ ಎರಡು ಘಟನೆಗಳು ಸಾಕ್ಷಿ.

ನಾನು ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಸ್‌. ರಾಮಕೃಷ್ಣ ಒಮ್ಮೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುವಾಗ ವಿಜಾಪುರದಿಂದ 10–12 ಕಿ.ಮೀ. ದೂರದ ಹಿಟ್ನಳ್ಳಿ ಗ್ರಾಮದಲ್ಲಿ ‘ಸುನೀತಾ ಪಾನ್‌ ಶಾಪ್‌’ ಎಂಬ ಹೊಸ ಅಂಗಡಿ ಗಮನಿಸಿದೆವು. ಆದರೆ, ಆ ‘ಹೆಸರಿನ’ ಪಾನ್‌ಶಾಪ್‌ಗೆ ಕಾರಣವಾಗಿದ್ದ ಸುನೀತಾ ಮತ್ತು ಸುರೇಶ ಎಂಬುವವರ ಪ್ರಕರಣ­ದಲ್ಲಿ ಆ ಊರಿಗೆ ಮುಂದೊಂದು ದಿನ ಬರುತ್ತೇವೆಂಬ ಕಲ್ಪನೆ ಮಾತ್ರ ಆಗಿರಲಿಲ್ಲ.

ಒಂದು ಸಂಜೆ ನಮ್ಮ ಮನೆಯಲ್ಲಿ ಜಿಲ್ಲೆಯ ಅಧಿಕಾರಿಗಳಿಗೆ ಔತಣಕೂಟ ಇತ್ತು. ಅನೌಪ­ಚಾರಿಕವಾಗಿ ಜಿಲ್ಲೆಯ ವಿಷಯಗಳ ಬಗೆಗೆ ಮುಕ್ತವಾಗಿ ಸಮಾಲೋಚಿಸಲು ಅದೊಂದು ಸದವಕಾಶ. ಊಟ ಮುಗಿಸಿ ಎಲ್ಲರನ್ನೂ ಬೀಳ್ಕೊ­ಡುವ ವೇಳೆಗೆ ತಡರಾತ್ರಿಯಾಗಿತ್ತು. ಬೆಳಗಿನ ಜಾವ  4 ಗಂಟೆಗೆ ಎಸ್‌ಪಿ ರಾಮಕೃಷ್ಣ ಅವರಿಂದ ತುರ್ತು ಕರೆ. ‘ಸುನೀತಾ ಪಾನ್‌ ಶಾಪ್‌’ ನೋಡಿದ್ದೆವಲ್ಲ, ಆ ಊರಿನಲ್ಲಿ ನಿನ್ನೆ ರಾತ್ರಿ 6–7 ಜನರ ಕೊಲೆಯಾಗಿದೆ. ಈಗಲೇ ಹೊರಡೋಣ’ ಎಂದು ಮನೆಗೆ ಬಂದು ನನ್ನನ್ನೂ ಜೊತೆಯಲ್ಲಿ ಕರೆದೊಯ್ದರು. ಘಟನೆಯ ಸ್ಥಳ ತಲುಪಿ ಆ ದೃಶ್ಯ ನೋಡಿದಾಗ ನನಗೆ ತಲೆ ಸುತ್ತಿ ಬಂತು. ಚಹಾ ಅಂಗಡಿಯಲ್ಲಿದ್ದ ಆರು ಜನರನ್ನು ಕೊಚ್ಚಿ ಕೊಂದಿದ್ದರು.

ಬ್ಬೊಬ್ಬರೂ ಒಂದೊಂದು ಭಂಗಿಯಲ್ಲಿ ಹೆಣವಾಗಿ ಬಿದ್ದಿದ್ದರು. ಆ ಬೀಭತ್ಸ ದೃಶ್ಯ ನೋಡಲಾಗದೆ ಕಾರಿನಲ್ಲಿ ಬಂದು ಕುಳಿತೆ.
ಸುರೇಶ ಯಾಳವಾರನೆಂಬ ಒಬ್ಬ, ‘ಸುನೀತಾ’ ಎಂಬ ಹುಡುಗಿಯನ್ನು ಪ್ರೀತಿಸಿದ್ದ ಕಾರಣಕ್ಕೆ ಆರು ಜನರ ಕೊಲೆಯಾಗಿತ್ತು. ಸುರೇಶನ ಮನೆಯ­ವರು ಕೆಳಜಾತಿಯವರಾದರೂ ತಮ್ಮ ಶ್ರಮದ ದುಡಿಮೆಯಿಂದ ಉಳಿದ ಮೇಲ್ಜಾತಿಯವರಷ್ಟೇ ಸ್ಥಿತಿವಂತರಾಗಿದ್ದರು.

ಸ್ಥಿತಿವಂತರೆಂದರೆ ಶ್ರೀಮಂತ­ರಲ್ಲ. ಸಮಾನ ಬಡತನ ಹಂಚಿಕೊಂಡಿದ್ದರು. ಸಾಮೂಹಿಕ ಹತ್ಯೆ ಘಟನೆ ನಡೆದ  ಬಳಿಕ ಊರಿನಲ್ಲಿದ್ದ ಗಂಡಸರೆಲ್ಲ ಊರು ಖಾಲಿ ಮಾಡಿ ಹತ್ತಿರದ ಊರುಗಳಲ್ಲಿದ್ದ ಸಂಬಂಧಿಕರ ಮನೆ ಸೇರಿದ್ದರು.  ಮಹಿಳೆಯರು ವೃದ್ಧರು ಮತ್ತು ಮಕ್ಕಳು ಮಾತ್ರ ಊರಿನಲ್ಲಿದ್ದರು. ಸತ್ತವರಲ್ಲಿ ಐದು ಜನ ಸಹೋದರರು, ಮತ್ತೊಬ್ಬ ಗೆಳೆಯ.

ಸುರೇಶ ಹೈಸ್ಕೂಲ್‌ ಹುಡುಗ. ಸುನೀತಾ ಚಿತಾಪುರೆ ಅವನ ಸಹಪಾಠಿ. ಹುಡುಗ ಕೆಳಜಾತಿ­ಯವನಾದರೆ, ಹುಡುಗಿ ಮೇಲ್ಜಾತಿಯಳು. ಯಾರಾ­ದರೂ ಹೇಳಿದರಷ್ಟೇ ಆ ಊರಿನಲ್ಲಿ ಒಬ್ಬರು ಮೇಲ್ಜಾತಿ ಮತ್ತೊಬ್ಬರು ಕೆಳಜಾತಿ ಎಂಬುದು ತಿಳಿಯುತ್ತಿತ್ತು. ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ದೃಷ್ಟಿಯಿಂದ ಹೇಳಿಕೊಳ್ಳು­ವಂತಹ ವ್ಯತ್ಯಾಸವೇನೂ ಇರಲಿಲ್ಲ.

ಅಂದು ಸಂಜೆ ಸುರೇಶ, ಅವನ ಅಣ್ಣಂದಿ­ರೊಂದಿಗೆ ಚಹಾ ಅಂಗಡಿಯಲ್ಲಿ ಕುಳಿತಿದ್ದಾಗ ಸುನೀತಾ ಮನೆಯ ಕಡೆಯವರು ಸುಮಾರು 50–60 ಜನರನ್ನು ಒಟ್ಟುಗೂಡಿಸಿಕೊಂಡು ಗುಂಪಿನಲ್ಲಿ ಬಂದು, ಚಹದಂಗಡಿ ಮುಂದಿನ ಬಾಗಿಲು ಮುಚ್ಚಿ ಬೆಂಕಿ ಹಚ್ಚಿದರು. ಸಾಯುವ ಭಯದಿಂದ ಹಿಂಬಾಗಿಲಿನಿಂದ ಒಬ್ಬೊಬ್ಬರೇ ಹೊರಕ್ಕೆ ಬರಲು ಯತ್ನಿಸಿದಾಗ, ಒಬ್ಬೊಬ್ಬರನ್ನೇ ಹರಿತವಾದ ಕತ್ತಿ–ಕೊಡಲಿಗಳಿಂದ  ಕೊಚ್ಚಿ ಕೊಂದಿದ್ದರು! ಗುಂಪಿನಲ್ಲಿ ಆಕ್ರೋಶದಲ್ಲಿರುವ ವ್ಯಕ್ತಿಗಳ ಹುಚ್ಚು ಕ್ರೌರ್ಯ ಸ್ಫೋಟಗೊಂಡಾಗ ನಡೆದ ಘಟನೆ ಇದು.

ಪೂರ್ವಭಾವಿ ತನಿಖೆ ಸಮಯದಲ್ಲಿ ನಾನು, ರಾಮಕೃಷ್ಣ ಹಿಟ್ನಳ್ಳಿಗೆ ಭೇಟಿ ನೀಡಿದ್ದೆವು. ಜನರ ಮಾರಣಹೋಮಕ್ಕೆ ಕಾರಣವಾಗಿದ್ದ ಹುಡುಗಿ ಸುನೀತಾಳ ಪರಿಸ್ಥಿತಿ ತಿಳಿಯುವ ಕುತೂಹಲ ಇತ್ತು. ಸುನೀತಾ, ಅವಳ ತಾಯಿ ಮತ್ತಿಬ್ಬರು ಮಹಿಳೆಯರನ್ನು ಬಿಟ್ಟರೆ ಮನೆಯಲ್ಲಿ ಯಾರೂ ಇರಲಿಲ್ಲ. ತಾಯಿ, ಮಗಳನ್ನು ಕರೆದು ಮಾತ­ನಾಡಿಸಿದೆ. ಆಕೆ 14–15 ವರ್ಷದ, ಲಂಗತೊಟ್ಟ ಒಬ್ಬ ಪುಟ್ಟ ಹುಡುಗಿ. ವಿಜಾಪುರದ ಎಲ್ಲ ಹಳ್ಳಿಯ ಹುಡುಗಿಯರಂತೆ ಕಂದುಬಣ್ಣದ ಸಣಕಲು ಮೈಕಟ್ಟು, ಹೊಳೆಯುವ ಕಣ್ಣುಗಳು, ಮುಗ್ಧೆ.

ನನಗೆ ಏನು ಕೇಳಬೇಕೆಂದು ತೋಚಲಿಲ್ಲ. ಅವರ ತಾಯಿಯನ್ನು ‘ಏನಮ್ಮಾ, ಯಾಕೆ ಹಿಂಗಾಯ್ತು’ ಎಂದೆ. ‘ಅವಳ್ನೇ ಕೇಳ್ರಿ ಸಾಹೇಬ್ರ’ ಅಂದಳು. ಸುನೀತಾಳನ್ನು ಕುರಿತು, ‘ಹೇಳಮ್ಮ’ ಎಂದೆ. ‘ನಾನು, ಸುರೇಶ ವಿಜಾಪುರದ ಚಹಾದ ಅಂಗಡಿಯೊಳಗ ಕುಂತು ಚಹಾ ಕುಡುದ್ವಿ. ನಮ್ಮನ್ಯಾಗ ಯಾರೋ ಅದನ್ನ ನೋಡ್ಯಾರ್ರೀ. ಸಂಜೀಕ ನಾವು ಸಾಲಿ ಮುಗಿಸಿ ಮನಿಗೆ ಬಂದುವ್ರೀ ಸಾಹೇಬ್ರ. ಆವೊತ್ತು ರಾತ್ರೀನ ಹಿಂಗ್‌ ಆತ್ರೀ’ ಎಂದು ಕ್ಷೀಣ ಧ್ವನಿಯಲ್ಲಿ ಹೇಳಿದಳು.

‘ಮುಂದೇ­ನ್ಮಾಡ್ತೀಯಾ’ ಅಂದೆ. ‘ಮುಂದಿನ ತಿಂಗಳು ಲಗ್ನ ಮಾಡ್ತೀವಿ. ಒಪ್‌ದಿದ್ರ ನಿನ್ನೂ ಕೊಲ್ತೀವಿ ಅಂದಾರ್ರೀ’ ಅಂದಳು. ಈಗ ಅವಳ ಏರಿದ ಧ್ವನಿಯಲ್ಲಿ ಉದ್ವೇಗವಿತ್ತು, ಹತಾಶೆಯಿತ್ತು, ಅಸಹಾಯಕತೆಯಿತ್ತು. ಒಂದು ಕ್ಷಣ ನಾನು ಮೂಕನಾಗಿದ್ದೆ. ನನ್ನಲ್ಲಿ ಸುನೀತಾ ಕುರಿತು ಇದ್ದ ಕುತೂಹಲ ಸತ್ತಿತ್ತು. ಸುನೀತಾಳ ತಾಯಿ ಕಣ್ಣೀರಿಟ್ಟಳು. ‘ಮನುಷ್ಯಲ್ರೀ ಸಾಹೇಬ್ರ, ಇವ್ರು ರಾಕ್ಷಸರು’ ಅಂದಳು.

ಎರಡು ಜಾತಿಗಳ ಮಧ್ಯೆ ಇದ್ದ ವೈಷಮ್ಯ ಮತ್ತು ದ್ವೇಷ ಜ್ವಾಲೆಯಾಗಿ ಉರಿಯಲು ‘ಸುನೀತಾ’ಳ ಪ್ರೀತಿ ಒಂದು ನೆಪವಾಗಿತ್ತಷ್ಟೇ. ಜಾತಿ ವೈಷಮ್ಯದ ಈ ಪ್ರಕರಣದಲ್ಲಿ ನೂರಾರು ಜನ ಆರೋಪಿಗಳು, ಹತ್ತು ವರ್ಷಗಳ ಕಾಲ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆದ ನಂತರ ‘ಖುಲಾಸೆ’ಯಾದರು. ಆದರೆ, ಈ ಸಂಕೀರ್ಣವಾ­ದ ಜಾತಿ ಸಂಘರ್ಷಗಳಿಗೆ ಬಿಡುಗಡೆ ಎಂದಿಗೆ? ಸುನೀತಾ ಮತ್ತು ಸುರೇಶ ಅವರಂತಹ ಯುವಕರು ಜಾತಿಯ ಹಂಗಿಲ್ಲದೆ ಮುಕ್ತವಾಗಿ ಬಾಳಿ ಬದುಕುವುದು ಯಾವಾಗ?

ನಾನು ಈ ಮೊದಲು ಹೇಳಿದ ಕ್ರೌರ್ಯದ ಕಥೆ ಎರಡು ಜಾತಿಗಳ ಮಧ್ಯೆ ನಡೆದ ವೈಷಮ್ಯದ್ದು. ಈಗ ಹೇಳುತ್ತಿರುವುದು ಒಂದೇ ಜಾತಿಗೆ ಸೇರಿದವರ ರಾಜಕೀಯ ದ್ವೇಷದ್ದು.

ವಿಜಾಪುರ ಜಿಲ್ಲೆಯಲ್ಲಿ ಇಂಡಿ ಒಂದು ಅತ್ಯಂತ ಹಿಂದುಳಿದ ತಾಲ್ಲೂಕು. ಅದರಲ್ಲೂ ಮಹಾ­ರಾಷ್ಟ್ರದ ಗಡಿಯಂಚಿನಲ್ಲಿ ಝಳಕಿ ಸಮೀಪ ವಿರುವ ಬರಡೋಲ ಅತ್ಯಂತ ಹಿಂದುಳಿದ ಹಳ್ಳಿ. ಬರಗಾಲದ ತವರೂರು. ದಿನನಿತ್ಯ ಬೆವರು ಸುರಿಸಿ ದುಡಿದರೆ ಊಟಕ್ಕುಂಟು, ಇಲ್ಲದಿದ್ದರೆ ಉಪವಾಸ ವೇ ಗತಿ. ಅಂಥ ಊರಿನಲ್ಲಿ ರಾಜ ಕೀಯ ವೈಷಮ್ಯ ಕ್ಕಾಗಿ ಒಂದು ಬಡ ದಲಿತರ ಗುಂಪು ಇನ್ನೊಬ್ಬ ಬಡ ದಲಿತರ ಕುಟುಂಬವೊ­ಂದನ್ನು ನಾಶ ಮಾಡಿತ್ತು. ನಿರ್ವಂಶ ಮಾಡಿತ್ತು, ಗರ್ಭಿಣಿಯ ಹೊಟ್ಟೆಯಲ್ಲಿದ್ದ ಕೂಸನ್ನೂ ಸೇರಿಸಿ!

ನಮ್ಮ ದೇಶದಲ್ಲಿ ರಾಜಕೀಯ ವೈಷಮ್ಯಕ್ಕೆ ನಡೆಯುವ ಕೊಲೆಗಳ ಅಂದಾಜನ್ನು ಯಾರಾದ­ರೂ ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ನಗರಗಳಲ್ಲಿ ನಡೆಯುವ ಘಟನೆಗಳು ಸಾಮಾನ್ಯ­ವಾಗಿ ಕ್ರೈಮ್‌ ಡೈರಿಗಳಲ್ಲಿ ರೋಚಕವಾಗಿ ವರದಿಯಾಗುತ್ತವೆ. ಹಳ್ಳಿಗಳಲ್ಲಿ ನಡೆಯುವ ಈ ರೀತಿಯ ಕೃತ್ಯಗಳು ವರದಿಯಾಗುವುದೇ ವಿರಳ. ದಶಕಕ್ಕೊಮ್ಮೆ ನಡೆಯುವ ಜನಗಣತಿಯಲ್ಲಿ ಸಾಮಾನ್ಯ ವಿಷಯದಂತೆ ಸತ್ತವರು ಪಟ್ಟಿಯಿಂದ ಬಿಟ್ಟು ಹೋಗುತ್ತಾರೆ ಅಷ್ಟೇ.

1991ರ ಅಕ್ಟೋಬರ್‌ 5ರಂದು ಎಂದಿನಂತೆ ಕಚೇರಿಗೆ ಹೊರಡುವ ತಯಾರಿಯಲ್ಲಿದ್ದೆ. ಪೊಲೀಸ್‌ ಕಂಟ್ರೋಲ್‌ ರೂಮ್‌ನಿಂದ ತುರ್ತು ಸಂದೇಶ. ಬರಡೋಲ ಗ್ರಾಮದಲ್ಲಿ ಮನೆಗೆ ಬೆಂಕಿ ಹಚ್ಚಿ ಮನೆಯಲ್ಲಿದ್ದ ಎಲ್ಲರನ್ನೂ ಸುಡುತ್ತಿ­ದ್ದಾರೆಂಬ ಸುದ್ದಿ. ಎಸ್‌ಪಿ ರಾಮಕೃಷ್ಣ ಮತ್ತು ನಾನು ತಕ್ಷಣ ಸ್ಥಳಕ್ಕೆ ಧಾವಿಸಿದೆವು. ಅಲ್ಲಿ ನೋಡಿದ ದೃಶ್ಯ ಪೈಶಾಚಿಕ.

ಹತ್ತು ಜನರು ಒಳಗಡೆಯಿದ್ದ ಒಂದು ಮನೆಗೆ ಎಲ್ಲ ಕಡೆ­ಯಿಂದಲೂ ಬಾಗಿಲು, ಕಿಟಕಿ ಬಂದ್‌ ಮಾಡಿ ಬೆಂಕಿ ಹಚ್ಚಿದ್ದರು. ನಾವು ತಲುಪಿದ ವೇಳೆಗೆ ಬೆಂಕಿ ಹತ್ತಿಕೊಂಡು  ಉರಿಯುತ್ತಿತ್ತು. ಸೀಮೆಎಣ್ಣೆ ಚೆಲ್ಲಿ ಮನೆಗೆ  ಬೆಂಕಿಯಿಟ್ಟಿದ್ದರು. ಅದು ಸಾಲ­ದೆಂಬಂತೆ ಹೆಂಗಸರು–ಗಂಡಸರು ಸೇರಿಕೊಂಡು ಉರಿಯುತ್ತಿದ್ದ ಮನೆಗೆ ಮೆಣಸಿನಕಾಯಿ, ಉಪ್ಪು ತೂರಿ ಬೆಂಕಿಯ ಜ್ವಾಲೆಯನ್ನು ತೀವ್ರಗೊಳಿಸಿ­ದ್ದರು. ಒಂದು ರೀತಿಯಲ್ಲಿ ಊರಿಗೆ ಊರೇ ಸೇರಿಕೊಂಡು ಒಂದು ಮನೆಯ ಹತ್ತು ಜನರನ್ನು ಸುಟ್ಟು ಕರಕಲು ಮಾಡಿದ್ದರು.

ನಮ್ಮ ಹಿಂದೆಯೇ ಬಂದ ಅಗ್ನಿಶಾಮಕ ದಳ ಬೆಂಕಿ ನಂದಿಸುವ ವೇಳೆಗೆ ಹತ್ತು ಜೀವಗಳು ಸುಟ್ಟು ಭಸ್ಮವಾಗಿ­ದ್ದವು. ಬೆಂಕಿ ನಂದಿಸಿದ ನಂತರ ಮನೆಯೊಳಗೆ ಹೋದೆವು. ದೇಹಗಳ ಮತ್ತು ಮನೆಯೊಳಗಿದ್ದ ವಸ್ತುಗಳು ಸುಟ್ಟ ಘಾಟು ಮೂಗಿಗೆ ಬಡಿಯು­ತ್ತಿತ್ತು. ಆ ಹತ್ತು ಜೀವಗಳು ಸಾಯುವ ಮುನ್ನ ಬದುಕಿ ಉಳಿಯಲು ನಡೆಸಿರಬಹುದಾದ ಹೋರಾಟ, ಸಾಯುವಾಗ ಒಬ್ಬರನ್ನೊಬ್ಬರು ತಬ್ಬಿ ಹಿಡಿದು ನಡೆಸಿದ ನರಳಾಟ ಊಹೆಗೆ ನಿಲುಕದಂತಿತ್ತು. ಸತ್ತವರಲ್ಲಿ ಏಳು ಜನ ಗಂಡಸರು, ಮೂವರು ಮಹಿಳೆಯರು. ಅದರಲ್ಲಿ ಒಬ್ಬಳು ಗರ್ಭಿಣಿ. ಗರ್ಭಿಣಿ ಏಣಿಯಿಂದ ಅಟ್ಟವೇರಿದ್ದಳು. ಅಟ್ಟದ ಮೇಲೆ ಹೊಟ್ಟೆ­ಯೊಳಗಿನ ಕೂಸಿನೊಂದಿಗೆ ಶವವಾಗಿದ್ದಳು.

ಅಮೋಗಿ ನಿಂಗಪ್ಪ ಕಾಂಬಳೆ ಇಂಡಿ ತಾಲ್ಲೂಕಿನ ಅಂಜುಟಗಿ ಗ್ರಾಮದವನು. ಕೆಲ ವರ್ಷಗಳ ಹಿಂದೆ ಬರಡೋಲ ಗ್ರಾಮಕ್ಕೆ ಬಂದು ನೆಲೆಸಿದ್ದ. ಈ ಅಮೋಗಿ ಬರಡೋಲಕ್ಕೆ ಬರುವ ಮುಂಚೆ ಚನಬಸಪ್ಪ ಹಾವಪ್ಪ ಕಟ್ಟೀಮನಿ ಊರಿನ ಮುಖ್ಯಸ್ಥನಾಗಿದ್ದ. ಪ್ರಶ್ನಾತೀತ ನಾಯಕ­ನಾಗಿದ್ದ. ಅಮೋಗಿ ಬರಡೋಲಕ್ಕೆ ಬಂದು ನೆಲೆಸಿದ ಬಳಿಕ ಊರಿನಲ್ಲಿ ಎರಡು ಪಾರ್ಟಿ-ಗಳಾದವು. ಒಂದು ಅಮೋಗಿ ಪಾರ್ಟಿ, ಮತ್ತೊಂದು ಕಟ್ಟೀಮನಿ ಪಾರ್ಟಿ. ಕಟ್ಟೀಮನಿ ನಾಯಕತ್ವ ಉಳಿಸಿಕೊಳ್ಳಲು ಹಠ ಹಿಡಿದರೆ ಅಮೋಗಿ ಅವನ ನಾಯಕತ್ವ ಸ್ಥಾಪಿಸಲು ಬಡಿ­ದಾಡುತ್ತಿದ್ದ. ಆಗಾಗ ಎರಡೂ ಗುಂಪುಗಳ ನಡುವೆ ಬಡಿದಾಟಗಳು ಸಾಮಾನ್ಯವಾಗಿದ್ದವು. ಇಂಡಿ ಪೊಲೀಸ್‌ ಠಾಣೆಯಲ್ಲಿ 1991ರ ಜೂನ್‌ 3ರಂದು ಸಿಆರ್‌ಪಿಸಿ ಕಲಂ 107ರ ಅಡಿ ಪ್ರಕರಣವೂ ದಾಖಲಾಗಿತ್ತು. ಪೊಲೀಸರು ರಾಜಿ ಮಾಡಿಸಿದ್ದರು.

ಇದೆಲ್ಲ ಮುಗಿದು ನಾಲ್ಕು ತಿಂಗಳ ಬಳಿಕ ಒಂದುದಿನ ಬೆಳಿಗ್ಗೆ ಅಮೋಗಿ ಹೊರಗಡೆ ಹೋಗುತ್ತಿದ್ದಾಗ ಕಟ್ಟೀಮನಿ ಕಡೆಯವರು ಕೊಡಲಿ, ಬಡಿಗೆ, ಕತ್ತಿ ಮತ್ತಿತರ ಆಯುಧ­ಗಳಿಂದ ಹೊಡೆದರು. ಅಮೋಗಿ ಅದೇ ದಿನ ವಿಜಾಪುರದ ಜಿಲ್ಲಾ ಆಸ್ಪತ್ರೆಯಲ್ಲಿ ತೀರಿಕೊಂಡ. ಈ ಸುದ್ದಿ ತಿಳಿದಿದ್ದೇ ತಡ ಅಮೋಗಿ ಗುಂಪಿನವರು ಕಟ್ಟೀಮನಿ ಕುಟುಂಬವನ್ನು ಅಟ್ಟಿಸಿಕೊಂಡು ಹೋದರು. ಅವರೆಲ್ಲ ಓಡಿಹೋಗಿ ಮನೆಯೊಳಗೆ ಸೇರಿಕೊಂಡು ಚಿಲಕ ಹಾಕಿಕೊಂಡು ತಾವೆಲ್ಲ ಸುರಕ್ಷಿತವಾಗಿದ್ದೇವೆ ಎಂದುಕೊಂಡರು.

ಅಟ್ಟಿಸಿಕೊಂಡು ಬಂದ ಅಮೋಗಿ ಗುಂಪಿನ­ವರು ಹೊರಗಡೆಯಿಂದ ಮನೆಯ ಬಾಗಿಲು­ಗಳನ್ನೆಲ್ಲ ಬಂದ್‌ ಮಾಡಿ ಬೆಂಕಿ ಹಚ್ಚಿದರು. ಒಳಗಿದ್ದವರು ಛಾವಣಿಯಿಂದ ಹೊರಬರಲು ಯತ್ನಿಸಿ ವಿಫಲರಾದರು. ಬೆಳಗಿನ 7ರಿಂದ 10 ಗಂಟೆಯೊಳಗೆ ಕ್ಷಿಪ್ರಗತಿಯಲ್ಲಿ ನಡೆದ ಘಟನಾ­ವಳಿಗಳು ಎಲ್ಲರನ್ನೂ ದಿಗ್ಭ್ರಮೆಗೊಳಿಸಿದ್ದವು. ಈ ದುಷ್ಕೃತ್ಯವೆಸಗಿದ ಜನರಿಗೆ ತಮ್ಮೂರಿನಲ್ಲಿ ತಮ್ಮೊಂದಿಗೇ ಹತ್ತಾರು ವರ್ಷ ಬಾಳಿ ಬದುಕಿದ ಹತ್ತು ಜೀವಗಳನ್ನು ಸುಟ್ಟು ಬೂದಿ ಮಾಡುತ್ತಿದ್ದೇವೆಂಬುದು ಅರಿವಾಗಲಿಲ್ಲವೇ?

ಘಟನೆ ನಡೆದು 22 ವರ್ಷಗಳಾಗಿದ್ದರೂ ಪ್ರಕರಣದ ವಿಚಾರಣೆ ಇನ್ನೂ ಸುಪ್ರೀಂ ಕೋರ್ಟ್‌­ನಲ್ಲಿ ನಡೆದಿದೆ. ಆರೋಪಿಗಳಲ್ಲಿ ಕೆಲವರು ತೀರಿ ಹೋಗಿದ್ದಾರೆ, ಆದರೆ ಪ್ರಕರಣ ಇನ್ನೂ ತೀರಿಲ್ಲ!

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.